ದುಪ್ಪಟ್ಟು-ತೆರಿಗೆ:-ನಗರಸಭೆ-ವಿರುದ್ಧ-ನ್ಯಾಯಾಲಯದ-ಮೊರೆ

ಮಡಿಕೇರಿ, ಜೂ. 29: ಮಡಿಕೇರಿ ನಗರಸಭೆ ಸಕಾರಣಗಳನ್ನು ನೀಡದೆ, ಹಲವರಿಂದ ದುಪ್ಪಟ್ಟು ತೆರಿಗೆ ದರವನ್ನು ಸಂಗ್ರಹಿಸುತ್ತಿರುವುದನ್ನು ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯದ ಕದ ತಟ್ಟಲಾಗುವುದೆಂದು ಮಡಿಕೇರಿ ನಾಗರಿಕರು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕರ ಪರವಾಗಿ ಮಾತನಾಡಿದ ಜಿ. ಚಿದ್ವಿಲಾಸ್ ಅವರು, ಕೊರೊನಾದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದ ನಡುವೆಯೂ ಮಡಿಕೇರಿ ನಗರಸಭೆ ಮನಬಂದಂತೆ ತೆರಿಗೆಯನ್ನು ಏರಿಕೆ ಮಾಡುವ ಮೂಲಕ ಜನ ಸಾಮಾನ್ಯರ ಮೇಲೆ ಹೊರೆ ಹಾಕುತ್ತಿದೆ ಎಂದು ದೂರಿದರು.

ಮಡಿಕೇರಿ ನಗರದಲ್ಲಿ ವಾಣಿಜ್ಯ ಕಟ್ಟಡಗಳ ಮೇಲಿನ ತೆರಿಗೆ ನಿರ್ಧರಿಸುವಲ್ಲಿ ನಗರಸಭೆಯಿಂದ ಅನ್ಯಾಯವಾಗುತ್ತಿದೆ. ಪ್ರತಿ ವರ್ಷ ತೆರಿಗೆ ಪಾವತಿಸಿದವರಿಗೂ ಈ ವರ್ಷ ಕಾನೂನು ಬಾಹಿರ ಕಟ್ಟಡ ಎನ್ನುವ ಕಾರಣವನ್ನು ನೀಡಿ ದಂಡ ವಿಧಿಸುತ್ತಿದೆ. ಜುಲೈ ಅಂತ್ಯದೊಳಗೆ ತೆರಿಗೆ ಪಾವತಿಸಿದರೂ ಶೇ.5 ರ ರಿಯಾಯಿತಿ ನೀಡುತ್ತಿಲ್ಲ. ಮತ್ತೊಂದೆಡೆ ಕಟ್ಟಡಗಳ ಸವಕಳಿ ನೀಡಬೇಕೆನ್ನುವ ನಿಯಮವಿದ್ದರೂ, ಮೇಲಧಿಕಾರಿ ಗಳಿಂದ ಕೇವಲ 10 ವರ್ಷದವರೆಗೆ ಮಾತ್ರ ಅದನ್ನು ತೆರಿಗೆದಾರರಿಗೆ ನೀಡಲು ಮೌಖಿಕ ಆದೇಶ ಬಂದಿರುವುದಾಗಿ ಅಧಿಕಾರಿ ಗಳು ಹೇಳುತ್ತಾರೆ. ಆದರೆ, ಮೊದಲ ವರ್ಷದಿಂದ 60 ವರ್ಷದವರೆಗೂ ಬೇರೆ ಬೇರೆ ದರದಲ್ಲಿ ಸವಕಳಿ ನೀಡುವುದು ಹಾಗೂ ನಂತರ ಒಂದೇ ದರದಲ್ಲಿ ನೀಡಲು ಮಾರ್ಗಸೂಚಿ ಪುಸ್ತಕದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿ ರುವುದನ್ನು ಅವರು ವಿವರಿಸಿದರು.
ತೆರಿಗೆಗಳನ್ನು ವಿಧಿಸುವುದರ ಜೊತೆಗೆ ಅದರ ಮೇಲೆಯೇ 3 ವರ್ಷಕ್ಕೊಮ್ಮೆ ವಿಧಿಸುವ ಹೆಚ್ಚುವರಿ ತೆರಿಗೆ ಮೇಲೆ ಕೂಡ ಪ್ರತಿ 3 ವರ್ಷಕ್ಕೆ ತೆರಿಗೆ ಹಾಕಲಾಗುತ್ತಿದ್ದು, ಇದು ಬಡ್ಡಿಗೆ ಚಕ್ರಬಡ್ಡಿ ವಿಧಿಸಿದ ರೀತಿ ಆಗಿದ್ದು, ಮೂಲ ತೆರಿಗೆಗೆ ಮಾತ್ರ ತೆರಿಗೆ ಹೆಚ್ಚಾಗಬೇಕು (ಮೊದಲ ಪುಟದಿಂದ) ಎಂದು ಚಿದ್ವಿಲಾಸ್ ಆಗ್ರಹಿಸಿದರು. ಕೆಲವು ಕಟ್ಟಡ ಮಾಲೀಕರಿಗೆ ನಿಮ್ಮ ಕಟ್ಟಡ ಅನಧಿಕೃತ, ಇದನ್ನು ಅಕ್ರಮ ಸಕ್ರಮದಡಿ ಸಕ್ರಮ ಮಾಡಿಕೊಳ್ಳಿ ಎನ್ನುವ ಉಚಿತ ಸಲಹೆಯನ್ನು ನೀಡಲಾಗುತ್ತಿದೆಯೇ ಹೊರತು ಸಕಾರಣಗಳನ್ನು ನೀಡುತ್ತಿಲ್ಲ ವೆಂದು ಚಿದ್ವಿಲಾಸ್ ಟೀಕಿಸಿದರು. ಸಮಸ್ಯೆಯನ್ನು ಬಗೆಹರಿಸುವ ಕುರಿತು ಸಮಾಲೋಚನೆ ನಡೆಸಲು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಸಾರ್ವಜನಿಕರ ನೆರವಿಗೆ ಬರಬೇಕೆಂದು ಮನವಿ ಮಾಡಿದರು.
ನಗರದ ನಿವಾಸಿ ವಿವೇಕಾನಂದ ಕಾಮತ್ ಎಂಬವರು 1955 ರಲ್ಲಿ ವಾಣಿಜ್ಯ ಕಟ್ಟಡವನ್ನು ನಿರ್ಮಿಸಿದ್ದು, ಪ್ರತಿ ವರ್ಷವು ನಿಗದಿತ ತೆರಿಗೆಯನ್ನು ಪಾವತಿಸುತ್ತಾ ಬರುತ್ತಿದ್ದಾರೆ. ಅದರಂತೆ 2020-21 ರಲ್ಲಿ ಅವರ ಕಟ್ಟಡದ ತೆರಿಗೆಯು 14,569 ರೂ.ಗಳಾಗಬೇಕಾ ಗಿತ್ತು. ಆದರೆ, ಮಡಿಕೇರಿ ನಗರಸಭೆÉಯು  ಅನಧಿಕೃತ ದಂಡ, ಉಪಕರ ಮುಂತಾದವುಗಳೆಂದು ತೋರಿಸಿ 37,683 ರೂ. ತೆರಿಗೆಯನ್ನು ವಿಧಿಸಿದೆ. ಈ ಬಗ್ಗೆ ಪ್ರಶ್ನಿಸಿದರೆ ತಾವು ಮುನ್ಸಿಪಾಲ್ಟಿ ಆಕ್ಟ್ ಪ್ರಕಾರ ಕೆಲಸ ನಿರ್ವಹಿಸುತ್ತಿದ್ದು, ಇದಕ್ಕಿಂತ ಹೆಚ್ಚಿನದ್ದೇನನ್ನೂ ಹೇಳಲಾಗದು ಎಂದು ಉಡಾಫೆÉಯ ಉತ್ತರ ನೀಡಿ ಕಳುಹಿಸಿದ್ದಾರೆ. ಇಂತಹ ಅನುಭವ ಮಡಿಕೇರಿ ನಗರದ ಬಹುತೇಕ ತೆರಿಗೆದಾರರಿಗೆ ಆಗಿದ್ದು, ನಗರದ ಸಾರ್ವಜನಿಕರು ತೆರಿಗೆ ಪಾವತಿಸುವ ಮೊದಲು ತಮ್ಮ ತೆರಿಗೆ ರಶೀದಿಯನ್ನು ಪರಿಶೀಲಿಸಬೇಕೆಂದು ಸಲಹೆ ನೀಡಿದರು.
ಶಾಸಕರ ಅಸಹಾಯಕತೆ
ನಿಯಮಬಾಹಿರ ತೆರಿಗೆ ವಸೂಲಾತಿ ಕುರಿತು, ಅಧಿಕಾರಿಗಳು ಹಾಗೂ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಇದಕ್ಕೆ ಯಾರಿಂದಲೂ ಸಮರ್ಪಕವಾದ ಸ್ಪಂದನ ದೊರಕಿಲ್ಲ. ಶೇ. 15ರ ತೆರಿಗೆ ಹೆಚ್ಚಳವನ್ನು ಈ ಬಾರಿಯ ಮಟ್ಟಿಗೆ ತಡೆ ಹಿಡಿಯುವಂತೆ ಶಾಸಕರು, ಉಸ್ತುವಾರಿ ಸಚಿವರ ಬಳಿ ಮನವಿ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಚರ್ಚಿಸಿ ತಡೆಹಿಡಿಯುವ ಭರವಸೆ ನೀಡಿದ್ದರು. 
ಆದರೆ, ಇದೀಗ ಕೊರೊನಾ ಹಿನ್ನೆಲೆಯಲ್ಲಿ ವಿಧಾನಸೌಧ ಮತ್ತು ವಿಕಾಸಸೌಧಗಳೆರಡರಲ್ಲೂ ಕೆಲಸ ಕಾರ್ಯಗಳು ಸ್ಥಗಿತವಾಗಿದೆ. ಸದÀ್ಯದ ಮಟ್ಟಿಗೆ ಯಾವುದೇ ಚರ್ಚೆ, ಸಭೆ ನಡೆಯುವುದು ಅಸಾಧ್ಯವಾಗಿರುವುದ ರಿಂದ ತಾವೇನು ಮಾಡಬೇಕೆನ್ನುವುದೇ ತೋಚುತ್ತಿಲ್ಲವೆಂದು ಶಾಸಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರೂ ಸೂಕ್ತ ಸ್ಪಂದನ ದೊರಕುವ ವಿಶ್ವಾಸವಿಲ್ಲ. ಈ ಹಿನ್ನೆಲೆಯಲ್ಲಿ ಅನ್ಯಾಯಕ್ಕೊಳಗಾದ ತೆರಿಗೆದಾರರು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿರುವುದಾಗಿ ಚಿದ್ವಿಲಾಸ್ ತಿಳಿಸಿದರು.
ನಗರಸಭೆಯು ಈಗಾಗಲೆ 2020-21ನೇ ಸಾಲಿನ ತೆರಿಗೆ ವಸೂಲಾತಿಯನ್ನು ಆರಂಭಿಸಿದೆ. ಸಾರ್ವಜನಿಕರು ತಮ್ಮ ತೆರಿಗೆಯ ಮಾಹಿತಿ ಪಡೆದು, ದುಬಾರಿ ಎಂದು ಕಂಡು ಬಂದಲ್ಲಿ ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಬೇಕೆಂದು ಕರೆ ನೀಡಿದರು. ಕಾನೂನು ಹೋರಾಟಕ್ಕೆ ಅಗತ್ಯ ಸಹಕಾರ ನೀಡಲು ತಾವುಗಳು ಸಿದ್ಧ ಎಂದರು. ಆಸಕ್ತರು ಜಿ. ಚಿದ್ವಿಲಾಸ್ (9448048829) ಹಾಗೂ ಅರುಣ್ ಶೆಟ್ಟಿ (8904426632)ನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಸಭೆಗೆ ಆಗ್ರಹ: ಹೆಚ್ಚುವರಿ ತೆರಿಗೆ ಸಂಗ್ರಹಿಸುತ್ತಿರುವ ಬಗ್ಗೆ ಮಾಹಿತಿ ಬಯಸಿದಾಗ ಅದನ್ನು ನೀಡಲು ಸಮರ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಗರಸಭೆಯಲ್ಲಿ ಇಲ್ಲದಾಗಿದ್ದಾರೆ. ಮಾಹಿತಿ ಬಯಸಿದರೆ ಕೇಂದ್ರ ಕಛೇರಿಯತ್ತ ಬೊಟ್ಟು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೌರಾಡಳಿತ ಇಲಾಖೆಯಿಂದ ತಜ್ಞರೊಬ್ಬರನ್ನು ಮಡಿಕೇರಿ ನಗರಸಭೆಗೆ ಕಳುಹಿಸಿಕೊಡುವಂತಾಗಬೇಕು. ಇದರೊಂದಿಗೆ ನಗರಸಭೆಯ ಆಡಳಿತಾ ಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ನಗರದ ತೆರಿಗೆದಾರರ ತುರ್ತು ಸಭೆ ಕರೆದು ತೆರಿಗೆ ವಿಷಯದಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರದ ನಿವಾಸಿಗಳಾದ ಅರುಣ್ ಶೆಟ್ಟಿ, ಕೆ.ವಿಠಲ ದಾಸ್ ಕುಡ್ವ, ವಿವೇಕಾನಂದ ಕಾಮತ್ ಹಾಗೂ ಎನ್.ಎಸ್. ಸತ್ಯ ಉಪಸ್ಥಿತರಿದ್ದರು. 
 

Home    About us    Contact