ತೀರ್ಮಾನಗಳಲ್ಲಿ-ಸ್ಪಷ್ಟತೆ-ಇಲ್ಲದಿದ್ದಾಗ...

ಜಾಸ್ತಿ ವಿವರಣೆ ನೀಡುವುದಿಲ್ಲ... ಪಂಜರದೊಳಗಿದ್ದ ಹುಲಿಗಳನ್ನು ಹೊರಬಿಟ್ಟು, ಆ ಹುಲಿಗಳು ಬೇರೆ ಬೇರೆ ಕಡೆ ಸಂಚರಿಸುತ್ತಿವೆ; ಹಾಗಾಗಿ ಎಲ್ಲರೂ ಮನೆಯೊಳಗಿರಿ ಎಂಬಂತಾಗಿದೆ ನಮ್ಮ ಸ್ಥಿತಿ.

ವಿದೇಶದಿಂದ ಬಂದವರನ್ನು ಕಡ್ಡಾಯವಾಗಿ ಸ್ವಲ್ಪ ದಿನ ಜನರಿಂದ ದೂರದಲ್ಲಿ ಇರಿಸಿದ್ದರೆ ನಮ್ಮೆಲ್ಲರ ಪರಿಸ್ಥಿತಿ ಹೀಗಾಗುತ್ತಿತ್ತೆ? ಎಂಬದು ನಾಗರಿಕರ ಪ್ರಶ್ನೆ.ವಿಮಾನ ನಿಲ್ದಾಣದಿಂದ ಬಿಟ್ಟು ಆ ವ್ಯಕ್ತಿ ಸಂಚರಿಸಿದ ಬಸ್‍ಗಳು, ಹೋದ ಸ್ಥಳಗಳು, ಮನೆಗಳು, ಊರು, ಪಟ್ಟಣ, ಜಿಲ್ಲೆ, ರಾಜ್ಯ... ಹೀಗೆ ಎಲ್ಲೆಲ್ಲೂ ಸೃಷ್ಟಿಯಾಗಿರುವ ಆತಂಕ, ಅದಕ್ಕಾಗಿ ಜಿಲ್ಲಾಡಳಿತಗಳು ಪಡುತ್ತಿರುವ ಪರಿಶ್ರಮ, ಜನರ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ವೈದ್ಯಕೀಯ ಇಲಾಖೆ, ರಕ್ಷಣೆಯ ಜವಾಬ್ದಾರಿ ಹೊತ್ತ ಪೊಲೀಸ್... ಹೀಗೆ ಎಲ್ಲರೂ ತಮ್ಮ ತಮ್ಮ ಆರೋಗ್ಯದ ಕಡೆ ಗಮನ ಹರಿಸಲಾಗದೆ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದನ್ನು ಅಭಿನಂದಿಸುವುದರೊಂದಿಗೆ ಇಷ್ಟೊಂದು ಸಂದಿಗ್ಧತೆಯನ್ನು ತಡೆಗಟ್ಟಲು ಸಾಧ್ಯವಿರಲಿಲ್ಲವೆ? ಎನ್ನುವ ಪ್ರಶ್ನೆ ಕೂಡ ನಾಗರಿಕರಲ್ಲಿದೆ.ಪರಿಸ್ಥಿತಿ ಕೈ ಮೀರುತ್ತಿರುವಂತೆ ಹೊಸ ಹೊಸ ಆದೇಶಗಳು, ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಬರುತ್ತಿವೆ. ರಾಜ್ಯದ ಮುಖ್ಯಮಂತ್ರಿಯವರ ಕಳಕಳಿಯ ಮಾತುಗಳು ಸ್ವೀಕಾರಾರ್ಹ ಹಾಗೂ ಪಾಲಿಸಬೇಕಾದಂತಹ ಅಗತ್ಯ ಹೌದಾದರೂ ತೀರ್ಮಾನಗಳಲ್ಲಿ ಸ್ಪಷ್ಟತೆ ಇಲ್ಲದಿರುವುದು, ಅದನ್ನು ಜಿಲ್ಲಾಡಳಿತಗಳು ಸ್ಪಷ್ಟವಾಗಿ ಅರ್ಥೈಸಿಕೊಳ್ಳಲಾಗದ ಸ್ಥಿತಿ ಕಳೆದ ಎರಡು ದಿನಗಳಿಂದ ಕಂಡು ಬರುತ್ತಿದೆ.
ತಾ. 22 ರಂದು ದೇಶದ ಪ್ರಧಾನಿಗಳು ನೀಡಿದ್ದ ಜನತಾ ಕಫ್ರ್ಯೂ ಮುಗಿಯುತ್ತಿದ್ದಂತೆ ತಾ. 23 ರಂದು ರಾಜ್ಯದಲ್ಲಿ ‘ಲಾಕ್‍ಡೌನ್’ ಅನ್ನು ಮುಖ್ಯಮಂತ್ರಿಗಳು ಘೋಷಿಸಿದರು. ನಮಗೆಲ್ಲ ಸೆಕ್ಷನ್ 144 ಹಾಗೂ ಕಫ್ರ್ಯೂ ಬಗ್ಗೆ ಅರಿವಿದೆಯಾದರೂ ‘ಲಾಕ್‍ಡೌನ್’ ಅಂದರೆ ತಾಂತ್ರಿಕವಾಗಿ ಏನು ಎಂದು ಗೊತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಕೂಡ ಸರಕಾರದಿಂದ ಸ್ಪಷ್ಟತೆ ಬಯಸಿರುವುದಾಗಿ ತಿಳಿಸಿದರು. ಲಾಕ್‍ಡೌನ್ ಆದೇಶದಲ್ಲಿ ಕೃಷಿ ವಲಯವನ್ನು ಬಿಟ್ಟಿರುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದ್ದು, ಇದರಿಂದಾಗಿ ತೋಟ ಕಾರ್ಮಿಕರು ಕೆಲಸ ಮಾಡಬಹುದೇ ಬೇಡವೇ ಎಂಬ ಗೊಂದಲದಲ್ಲಿ ಜಿಲ್ಲಾಡಳಿತ ಸಿಲುಕಿತು. ಮುಂದುವರಿದ ಬೆಂಗಳೂರಿನ ಆದೇಶದಲ್ಲಿ ಇದನ್ನು ಕಫ್ರ್ಯೂ ತರಹದ ಲಾಕ್‍ಡೌನ್ ಎಂದು ಬಣ್ಣಿಸಿದ್ದು, ಜನರಲ್ಲಿ ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು.
ತಾ. 24 ರಲ್ಲಿ ಬದಲಾದ ಆದೇಶದಲ್ಲಿ ಲಾಕ್‍ಡೌನ್ ಸೆಕ್ಷನ್ 144 ಆಗಿ ಪರಿವರ್ತನೆಗೊಂಡಿತು. ರಾಜ್ಯ ಸರಕಾರದ ಸುತ್ತೋಲೆ ಒಂದು ರೀತಿಯಾದರೆ, ಮುಖ್ಯಮಂತ್ರಿಗಳು ಹಾಗೂ ಇತರ ಸಚಿವರುಗಳು ನೀಡಿದ ಮಾತಿನ ಹೇಳಿಕೆಗಳು ಮತ್ತಷ್ಟು ಗೊಂದಲ ಮೂಡಿಸಿದವು.
ಮುಖ್ಯಮಂತ್ರಿಗಳು ತಾ. 24ರ ಲಾಕ್‍ಡೌನ್ ಬಗ್ಗೆ ಮಾಡಿದ ಟ್ವೀಟ್‍ನಲ್ಲಿ ಆಹಾರ ಮತ್ತು ದಿನಸಿ ಶಾಪ್‍ಗಳು ಎಂದಿನಂತೆ ತೆರೆದಿರುತ್ತವೆ ಎಂದರು. ಅದು ಸಾಮಾಜಿಕ ಜಾ¯ತಾಣದಲ್ಲಿ ವ್ಯಾಪಕವಾಗಿ ಹರಿದಾಡಿ ಜನ ನಂಬಿದರು. ಆದರೆ ಜಿಲ್ಲಾಡಳಿತಕ್ಕೆ ವಿಶೇಷ ಅಧಿಕಾರಿ ನೀಡಿದ ಸರಕಾರ ಜಿಲ್ಲಾಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲು ಸೂಚಿಸಿತು. ಅದರಂತೆ ಜಿಲ್ಲಾಧಿಕಾರಿಗಳು ಸೆಕ್ಷನ್ 144 ಜಾರಿ ಮಾಡಿ ಮಧ್ಯಾಹ್ನ 12 ರಿಂದ 2ರ ವರೆಗೆ ಅಗತ್ಯ ಅಂಗಡಿಗಳು ತೆರೆಯಲು ಹಾಗೂ ಜನತೆ ಖರೀದಿ ಮಾಡಲು ಅವಕಾಶ ಕಲ್ಪಿಸಿದರು. ಜೊತೆಯಲ್ಲಿ ಸೆಕ್ಷನ್ 144 ಜಾರಿಯಲ್ಲಿರುವುದರಿಂದ 5 ಜನ ಜೊತೆಗೂಡಬಾರದು, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ; ಹಾಲಿನ ಅಂಗಡಿಗಳು ತೆರೆದಿರುತ್ತವೆ ಎಂದು ನೀಡಿದ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿತು.
ನಂಬಿದ ಜನ ಇಂದು ಬೆಳಿಗ್ಗೆ ಹಾಲು ಹಾಗೂ ಪತ್ರಿಕೆಗೆ ಹೊರ ಬಂದಾಗ ಸಿಕ್ಕಿದ ಸ್ವಾಗತವೇ ಬೇರೆಯಾಗಿತ್ತು. ಎಲ್ಲೆಲ್ಲೂ ಪೊಲೀಸ್ ಕಾವಲು, ಮನೆಬಿಟ್ಟು ಬರದಂತೆ ಮೈಕ್‍ನಲ್ಲಿ ಘೋಷಣೆ, ಒಬ್ಬೊಬ್ಬರೇ ಕಂಡರೂ ಜಿಲ್ಲೆಯ ವಿವಿಧೆಡೆ ಲಾಠಿ ಏಟು... ಹೀಗೆ ಜನ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಯಿತು; ಹಾಲಿನ ಅಂಗಡಿಗಳೂ ಬಂದ್ ಆಗಿ ನಷ್ಟಕ್ಕೊಳಗಾದರು.
ಮಾಧ್ಯಮ ಮಿತ್ರರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಈ ಬಗ್ಗೆ ಮನವರಿಕೆ ಮಾಡಿದರು. ಪರಿಸ್ಥಿತಿ ಅರ್ಥೈಸಿಕೊಂಡ ಅವರು, ಇಂದಿನಿಂದ ಬೆಳಿಗ್ಗೆ 6 ರಿಂದ 8ರ ವರೆಗೆ ಹಾಲು ಮತ್ತು ಪತ್ರಿಕೆ ಖರೀದಿಸಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದರು.
ಒಟ್ಟಾರೆ ನಮ್ಮನ್ನು ಆಳುವವರು ತೆಗೆದುಕೊಳ್ಳುವ ನಿರ್ಧಾರಗಳು ಸ್ಪಷ್ಟತೆಯಿಂದ ಕೂಡಿರದಿದ್ದರೆ, ಅನಾನುಕೂಲ, ಗೊಂದಲ ಹಾಗೂ ಜನತೆಗೆ ಸಂಕಷ್ಟ ಎದುರಾಗುವ ಬಗ್ಗೆ ಸರಕಾರಗಳು ಗಮನಹರಿಸಬೇಕಿದೆ.
ಕೃತಜ್ಞತೆ ಸಲ್ಲಿಸಬೇಕಿದೆ
ತಾ. 24 ರಂದು ಬೆಳಿಗ್ಗೆಯೇ ಜಿಲ್ಲೆಯ ವಿವಿಧೆಡೆಯ ‘ಶಕ್ತಿ’ ಏಜೆಂಟರುಗಳಿಂದ ಆತಂಕದ ಕರೆಗಳು ಬರಲಾರಂಭಿಸಿದವು. ಪತ್ರಿಕೆ ವಿತರಣೆಗೆ ತಯಾರಿ ಆಗುತ್ತಿದ್ದ ಹಾಗೂ ಮನೆ ಮನೆಗಳಿಗೆ ವಿತರಿಸುತ್ತಿದ್ದ ಹಿರಿಯ-ಕಿರಿಯರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ನಾಳೆಯಿಂದ ಪತ್ರಿಕೆ ವಿತರಿಸಲು ಸಾಧ್ಯವಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು. ಆದರೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣ ಸ್ಪಂದಿಸಿ ಪತ್ರಕರ್ತರು ಹಾಗೂ ಮಾಧ್ಯಮದವರ ಮೇಲೆ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿದರು. ದೈಹಿಕ ನೋವು ಹಾಗೂ ಮಾನಸಿಕ ಆಘಾತದ ನಡುವೆಯೂ ಸಹೃದಯೀ ಬಂಧುಗಳು ಪತ್ರಿಕಾ ವಿತರಣೆ ಮುಂದುವರಿಸಿದರು. ಎಲ್ಲ ಪತ್ರಿಕೆಗಳ ಪರವಾಗಿ ಅವರಿಗೆಲ್ಲ ಕೃತಜ್ಞತಾ ನಮನ ನಮ್ಮದು.
ಇಂದಿನ ಸಂಚಿಕೆಯಲ್ಲಿ...
ಹಲವು ದಿನಗಳಿಂದ ಕೊರೊನಾ ನಮ್ಮನ್ನು ಮಾನಸಿಕವಾಗಿಯೂ ಘಾಸಿ ಮಾಡುತ್ತಿದೆ. ಪತ್ರಿಕೆ-ಮಾಧ್ಯಮಗಳಲ್ಲೂ ಅದೇ ಸುದ್ದಿ. ಕೆಲಸವೂ ಮಾಡಲಾಗದೆ ಮಕ್ಕಳೊಂದಿಗೆ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಜನತೆಯದ್ದು. ಮನೆಯಲ್ಲಿ ಕುಳಿತು ಮಾಡುವುದಾದರೂ ಏನನ್ನು ಎನ್ನುವ ಪ್ರಶ್ನೆ ಸಹಜ. ಮಕ್ಕಳನ್ನು ಹೊರ ಬಿಡದೆ ಇಡೀ ದಿನ ಮನೆಯಲ್ಲಿಯೇ ಸಮಯ ಕಳೆಯುವಂತೆ ಮಾಡುವುದು ಹೇಗೆ ಎಂಬ ಪ್ರಶ್ನೆಯೂ ಸಹಜ.
ಹಾಗಾಗಿ ಹಲವು ಶಿಕ್ಷಣ ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಿ ಮಕ್ಕಳನ್ನು ಯಾವ ರೀತಿ ತೊಡಗಿಸಿಕೊಳ್ಳಬಹುದು ಎಂದು ಅಭಿಪ್ರಾಯ ಪ್ರಕಟಿಸಿದ್ದೇವೆ. ಜೊತೆಯಲ್ಲಿ ಮಕ್ಕಳಾದಿಯಾಗಿ ಹಿರಿಯರು ಕೂಡ ಬೆಳಿಗ್ಗೆ ಹಾಗೂ ಸಂಜೆ ಯೋಗಾಭ್ಯಾಸದಲ್ಲೂ ಸಮಯ ಕಳೆಯಲು ಯೋಗ ಶಿಕ್ಷಕರ ಸಲಹೆ ಇಂದಿನ ಪತ್ರಿಕೆಯಲ್ಲಿದೆ. ನೆರವಾಗಬಹುದು ನಿಮಗೆಲ್ಲ ಎಂಬ ನಿರೀಕ್ಷೆಯಲ್ಲಿ...
-ಜಿ. ಚಿದ್ವಿಲಾಸ್
ಸಂಪಾದಕ

Home    About us    Contact