ಅನಿರ್ಧಿಷ್ಟ-ರಜೆಯಲ್ಲಿ-ಪೋಷಕರು-ಮಕ್ಕಳನ್ನು-ಹುರಿದುಂಬಿಸಿ

ಮಡಿಕೇರಿ, ಮಾ. 24: ಅನಿರೀಕ್ಷಿತ ಕೊರೊನಾ ಭೀತಿಯಿಂದ ಮಕ್ಕಳಿಗೆ ಲಭಿಸಿರುವ ರಜೆಯನ್ನು ವ್ಯರ್ಥಗೊಳಿಸದೆ, ಪೋಷಕರು ತಮ್ಮ ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸುವುದರೊಂದಿಗೆ, ಯಾವುದೇ ಭಯ, ಒತ್ತಡದಲ್ಲಿ ಸಿಲುಕದಂತೆ ನಿಗಾವಿಡುವ ಮೂಲಕ ಎಲ್ಲರೂ ಒಗ್ಗೂಡಿ ಚಟುವಟಿಕೆ ನಿರ್ವಹಿಸುವಂತೆ ಅನೇಕ ಹಿರಿಯರು ಸಲಹೆ ನೀಡಿದ್ದಾರೆ.ಖ್ಯಾತ ಕ್ರೀಡಾಪಟು, ಶಿಕ್ಷಣ ಮಾರ್ಗದರ್ಶಕ ತೀತಮಾಡ ಅರ್ಜುನ್ ದೇವಯ್ಯ ಅವರು ಪ್ರಸಕ್ತ ಸನ್ನಿವೇಶವು ಭಾರತೀಯ ಜನಕೋಟಿಗೆ ದೇವರ ಕೊಡುಗೆ ಎಂದು ಬಣ್ಣಿಸಿದ್ದಾರೆ. ‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ಹಿಂದೆ ಅಜ್ಜ, ಅಜ್ಜಿ, ತಂದೆ-ತಾಯಿಗಳೊಂದಿಗೆ ಮಕ್ಕಳು, ಮೊಮ್ಮಕ್ಕಳು ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಸಂತೋಷದ ಬದುಕು ನಡೆಸುತ್ತಿದ್ದುದಾಗಿ ಬೊಟ್ಟು ಮಾಡಿದ್ದಾರೆ.ಇಂದಿನ ಜಾಗತಿಕ ನಾಗಾಲೋಟದ ಜೀವನದಲ್ಲಿ ಪರಸ್ಪರ ಸಂಬಂಧಗಳು ಕಡಿದುಕೊಳ್ಳುತ್ತಿದ್ದ ವೇಳೆಯಲ್ಲಿ, ಕೊರೊನಾವು ಬದುಕಿನ ಮೌಲ್ಯಗಳೊಂದಿಗೆ ನಮ್ಮ ಹಿರಿಯರು ರೂಢಿಗೊಳಿಸಿದ್ದ ಸಂಸ್ಕøತಿ, ಮೌಲ್ಯಗಳು, ಪರಂಪರೆಯನ್ನು ಮರಳಿ ನೋಡುವಂತೆ ಅವಕಾಶ ಕಲ್ಪಿಸಿದೆ ಎಂದು ಅಭಿಪ್ರಾಯಪಟ್ಟರು. ಆ ದಿಸೆಯಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ದೈನಂದಿನ ಜೀವನ ಕ್ರಮದೊಂದಿಗೆ, ರಜಾ ದಿನಗಳಲ್ಲಿ ರಾಷ್ಟ್ರಪ್ರೇಮ, ಸಹಭಾಳ್ವೆ, ಆಧ್ಯಾತ್ಮಿಕ ಚಿಂತನೆಗಳನ್ನು ಕಲಿಸುವಂತೆ ಸಲಹೆ ನೀಡಿದ್ದಾರೆ. ಬದುಕಿನಲ್ಲಿ ಅವಶ್ಯಕವಾದ ಶಾರೀರಿಕ, ಮಾನಸಿಕ, ಶೈಕ್ಷಣಿಕ, ಆಧ್ಯಾತ್ಮಿಕ ವಿಷಯಗಳೊಂದಿಗೆ, ಮನೋಲ್ಲಾಸಕ್ಕಾಗಿ ಯೋಗ, ವ್ಯಾಯಾಮ, ಕ್ರೀಡೆಗಳಲ್ಲಿ ಪರಸ್ಪರ ಬೆರೆತು ನಲಿಯಬೇಕೆಂದು ಕರೆ ನೀಡಿದ್ದಾರೆ.

ಕೊರೊನಾ ಭೀತಿ ಭಾರತೀಯ ಜೀವನ ಮೌಲ್ಯಗಳನ್ನು ಗಟ್ಟಿಗೊಳಿಸುತ್ತಿದೆ ಎಂದು ಒತ್ತಿ ಹೇಳಿದ ಅವರು, ಮಕ್ಕಳಿಗೆ ದೊರೆತಿರುವ ರಜೆ ವ್ಯರ್ಥವಾಗದಂತೆ ಪೋಷಕರು ದೈನಂದಿನ ವೇಳಾಪಟ್ಟಿ ಸಿದ್ಧಗೊಳಿಸಿ, ಮಕ್ಕಳು ಸದಾ ಚಟುವಟಿಕೆಗಳಲ್ಲಿದ್ದು, ಆದಷ್ಟು ಟಿ.ವಿ., ಮೊಬೈಲ್‍ನಿಂದ ಅಂತರ ಕಾಯ್ದುಕೊಳ್ಳುವಂತೆ ಪ್ರೋತ್ಸಾಹಿಸುವುದು ಅವಶ್ಯಕವೆಂದು ಸಲಹೆ ನೀಡಿದ್ದಾರೆ.
ಲವಲವಿಕೆಯಿಂದ ನೋಡಿಕೊಳ್ಳಿ : ಅಶ್ವಿನಿ ನಾಚಪ್ಪ: ಮಕ್ಕಳಿಗೆ ಅನಿರ್ಧಿಷ್ಟ ರಜೆಯಲ್ಲಿ ಸದಾ ಲವಲವಿಕೆಯಿಂದ ಇರುವಂತೆ ಪೋಷಕರು ಗಮನಹರಿಸಬೇಕಿದೆ ಎಂದು ಖ್ಯಾತ ಓಟಗಾರ್ತಿ ಹಾಗೂ ಕಾಲ್ಸ್ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಅಶ್ವಿನಿ ನಾಚಪ್ಪ ಸಲಹೆ ಮಾಡಿದ್ದಾರೆ. ಮಕ್ಕಳು ಬೆಳಿಗ್ಗೆ ಬೇಗನೆ ಏಳುವ ಮೂಲಕ ರಾತ್ರಿ ಮಲಗುವ ತನಕ ಹೇಗಿರಬೇಕೆಂದು ಪೋಷಕರು ದಿನಚರಿ ಸಿದ್ಧಗೊಳಿಸಬೇಕೆಂದ ಅವರು, ಯೋಗ, ವ್ಯಾಯಾಮ, ಅಧ್ಯಯನ, ಆಟ ಹೀಗೆ ಸಮಯ ನಿಗದಿಗೊಳಿಸಿ, ಕ್ರಿಯಾಶೀಲರಾಗಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಕಾಳಜಿ ತೋರುವಂತೆ ನೆನಪಿಸಿದ್ದಾರೆ. ಮಕ್ಕಳ ಕಲಿಕೆಗೆ ಬೇಕಾದ ತುಂಬಾ ಸಂಗತಿಗಳು ಗೂಗಲ್ ಹಾಗೂ ಕಾಲೇಜು ಪಠ್ಯ ಕ್ರಮಗಳ ವಿಷಯ ವೆಬ್‍ಸೈಟ್‍ಗಳಲ್ಲಿ ಲಭ್ಯವೆಂದು ಅಶ್ವಿನಿ ನಾಚಪ್ಪ ಬೊಟ್ಟು ಮಾಡಿದ್ದಾರೆ.
ಕಾಫಿ ಅಧ್ಯಯನಕ್ಕೂ ಪ್ರೋತ್ಸಾಹಿಸಿ : ಪ್ರೊ. ಎಂ.ಡಿ. ನಂಜುಂಡ: ಕೊಡಗಿನ ಮಕ್ಕಳು ಇದುವರೆಗೆ ಪರೀಕ್ಷೆ ಮುಗಿಯದಿದ್ದರೆ, ಇನ್ನು ಹೆಚ್ಚಿನ ಓದಿನ ಕಡೆ ಗಮನಹರಿಸಬೇಕಿದೆ. ಪರೀಕ್ಷೆಯನ್ನು ಇನ್ನಷ್ಟು ಆತ್ಮವಿಶ್ವಾಸದಿಂದ ಎದುರಿಸಲು ಪೋಷಕರು ಹುರಿದುಂಬಿಸಬೇಕಿದೆ. ಪರೀಕ್ಷೆ ಮುಗಿದವರಿಗೆ ಕೊಡಗಿನ ಕಾಫಿ ಉದ್ಯಮ ಬಗ್ಗೆ ಅಧ್ಯಯನದೊಂದಿಗೆ ಸಂಶೋಧನೆಗೆ ಪೋಷಕರು ಪ್ರೋತ್ಸಾಹಿಸುವಂತೆ ಹಿರಿಯ ಶಿಕ್ಷಣ ತಜ್ಞ ಪ್ರೊ. ಎಂ.ಡಿ. ನಂಜುಂಡ ಸಲಹೆ ನೀಡಿದ್ದಾರೆ.
ಮಾತ್ರವಲ್ಲದೆ ಭಾಷಣ, ಕಲೆ, ಚಿತ್ರಕಲೆ, ಹಾಡುಗಾರಿಕೆ, ಸಂಗೀತ, ಕಂಪ್ಯೂಟರ್ ಶಿಕ್ಷಣ, ಸೈಕ್ಲಿಂಗ್ ಮುಂತಾದ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತೆ ಅವರು ನೆನಪಿಸಿದ್ದಾರೆ. ಇಂದಿನ ಮಕ್ಕಳಿಗೆ ಆಧುನಿಕ ತಂತ್ರಜ್ಞಾನದ ಅರಿವಿನೊಂದಿಗೆ ಜೀವನ ಮೌಲ್ಯ ಶಿಕ್ಷಣ ಅತ್ಯವಶ್ಯಕ ಎಂದು ಅಭಿಪ್ರಾಯಪಟ್ಟ ಅವರು, ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚಿನ ಉತ್ತೇಜನ ನೀಡಲು ಇದೊಂದು ಸುವರ್ಣಾವಕಾಶವೆಂದು ಪ್ರೊ. ನಂಜುಂಡ ಸಲಹೆ ನೀಡಿದ್ದಾರೆ.
ನಿರಂತರ ಅಧ್ಯಯನ ಸಹಕಾರಿ - ವಿದ್ಯಾ ಹರೀಶ್: ರಜೆಯಿರುವ ಮಾತ್ರಕ್ಕೆ ಮಕ್ಕಳಿಗೆ ಪರೀಕ್ಷೆಯ ಭಯ ಕಾಡದಂತೆ, ಪೋಷಕರು 
(ಮೊದಲ ಪುಟದಿಂದ) ದೈನಂದಿನ ಪಠ್ಯಗಳ ಪುನರಾವರ್ತನೆ ಜೊತೆಗೆ ಅವರಿಗೆ ಧಾರ್ಮಿಕ ಗ್ರಂಥಗಳು, ಪಂಚತಂತ್ರ, ಚಂದಮಾಮ ಕತೆಗಳನ್ನು ಅಭ್ಯಾಸಿಸುವಂತೆ ಭಾರತೀಯ ವಿದ್ಯಾಭವನ 
ಕೊಡಗು ವಿದ್ಯಾಲಯದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯಾ ಹರೀಶ್ ಸಲಹೆ ಮಾಡಿದ್ದಾರೆ.
ಅಲ್ಲದೆ ಸಣ್ಣ ಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿಗಳ ಪಠ್ಯ ಕ್ರಮಗಳಿಗೆ ಪೂರಕ ಸಂಗತಿಗಳು ಸಂಬಂಧಿಸಿದ ವೆಬ್‍ಸೈಟ್ ಗೂಗಲ್‍ನಲ್ಲಿ ಲಭ್ಯವಿದ್ದು, ಪೋಷಕರು ಮಕ್ಕಳಿಗೆ ನೆರವಾಗುವ ಮೂಲಕ ಹೆಚ್ಚು ಹೆಚ್ಚು ಅಭ್ಯಾಸಿಸಲು ಗಮನ ಕೊಡಬೇಕೆಂದು ನುಡಿದ ಅವರು, ಒಂದಿಷ್ಟು ಸಮಯ ತಮ್ಮ ಮನೆಯ ಪರಿಸರ, ಕಾಫಿ ತೋಟಗಳ ನಡುವೆ ಮುಕ್ತವಾಗಿ ಮಕ್ಕಳು ಅಡ್ಡಾಡುವಂತೆ ಪ್ರೋತ್ಸಾಹಿಸಲು ಸಲಹೆ ನೀಡಿದ್ದಾರೆ. ಮಕ್ಕಳೊಂದಿಗೆ ಹಿರಿಯರು ಒಳಾಂಗಣ ಕ್ರೀಡೆಗಳಲ್ಲಿ ತೊಡಗುವಂತೆಯೂ ಅವರು ನೆನಪಿಸಿದ್ದಾರೆ.
ಸಹಭೋಜನ ಕೂಡ ಒಳಿತು: ಕುಂತಿ ಬೋಪಯ್ಯ: ಕೂಡಿಗೆ ಕ್ರೀಡಾ ಶಾಲೆಯ ಪ್ರಾಂಶುಪಾಲೆ ಹಾಗೂ ಪ್ರಾಂಶುಪಾಲರ ಸಂಘದ ಜಿಲ್ಲಾ ಪದಾಧಿಕಾರಿ ಕುಂತಿ ಬೋಪಯ್ಯ ಅವರು ಮಕ್ಕಳನ್ನು ಕಲಿಕೆಗೆ ಸೀಮಿತಗೊಳಿಸದೆ ರಜಾ ದಿನಗಳಲ್ಲಿ ಪರಸ್ಪರ ಮನಬಿಚ್ಚಿ ಮಾತನಾಡುವುದು, ಒಗ್ಗೂಡಿ ಊಟ ಮಾಡುವುದು, ಭಯಮುಕ್ತ ವಾತಾವರಣದಲ್ಲಿ ಇರುವುದು ಅಗತ್ಯವೆಂದು ಸಲಹೆ ನೀಡಿದ್ದಾರೆ.
ಇಂದಿನ ಬದುಕಿನಲ್ಲಿ ಪ್ರತಿಯೊಬ್ಬರ ನಡುವೆ ವ್ಯಾವಹಾರಿಕ ಸಂಬಂಧ ಮಾತ್ರ ಕಾಣುತ್ತಿದ್ದು, ಆಕಸ್ಮಿಕವಾಗಿ ಎದುರಾಗಿರುವ ಸನ್ನಿವೇಶವನ್ನು ವ್ಯರ್ಥಮಾಡಿಕೊಳ್ಳದೆ ಸಾಧ್ಯವಾದಷ್ಟು ಮನೆ ಮಂದಿಯೆಲ್ಲರೂ ಮಕ್ಕಳ ಜತೆ ಬೆರೆಯುವಂತೆ ತಿಳಿ ಹೇಳಿದ್ದಾರೆ. ಆ ಮೂಲಕ ಆಟ, ಪಾಠ, ಕ್ರೀಡೆಗಳಲ್ಲಿ ಮನೋಲ್ಲಾಸ ಕಂಡುಕೊಳ್ಳುವಂತೆ ಸಲಹೆಯಿತ್ತ ಅವರು, ಉಪಹಾರ, ಊಟ, ವ್ಯಾಯಾಮ ಮುಂತಾದ ಚಟುವಟಿಕೆಗಳನ್ನು ಮನೆ ಮಂದಿಯೆಲ್ಲಾ ಕೂಡಿ ಹಮ್ಮಿಕೊಳ್ಳುವುದು ಅವಶ್ಯಕವೆಂದಿದ್ದಾರೆ.
ಅಭಿರುಚಿ ಹೆಚ್ಚಿಸಿ: ಡಾ. ಪಾರ್ವತಿ ಅಪ್ಪಯ್ಯ: ರಜಾ ದಿನಗಳಲ್ಲಿ ಹೆತ್ತವರು ತಮ್ಮ ತಮ್ಮ ಮಕ್ಕಳ ಅಭಿರುಚಿ ಹೆಚ್ಚಿಸಬೇಕೆಂದು ನಿವೃತ್ತ ಪ್ರಾಂಶುಪಾಲೆ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಪಾರ್ವತಿ ಅಪ್ಪಯ್ಯ ಸಲಹೆ ನೀಡಿದ್ದಾರೆ. ಪ್ರಾಥಮಿಕ ಹಂತದಿಂದ ಪದವಿ ಮಕ್ಕಳಿಗೆ ಅವರ ಪೋಷಕರು ಪಠ್ಯಕ್ರಮಗಳ ಅಧ್ಯಯನ ಜೊತೆಗೆ ಯೋಗ, ವ್ಯಾಯಾಮ, ಚಿತ್ರಕಲೆ, ಪರಸ್ಪರ ಸಹಕಾರ ಮನೋಭಾವದಿಂದ ಬದುಕು ಕಂಡುಕೊಳ್ಳಲು ಪ್ರೋತ್ಸಾಹಿಸಬೇಕೆಂದರು. ಮನೆಯ ಪರಿಸರವನ್ನು ಶುಚಿಯಾಗಿ ಇಡುವುದು, ಹೂದೋಟಗಳನ್ನು ರೂಪಿಸುವುದು, ವಿಶೇಷವಾಗಿ ಹೆಣ್ಣು ಮಕ್ಕಳೊಂದಿಗೆ ಗಂಡು ಮಕ್ಕಳಿಗೂ ಅಡುಗೆ ಕಲಿಸುವುದು ಒಳಿತು ಎಂದರು. ರಜೆಯ ದಿನಗಳಲ್ಲಿ ಮಕ್ಕಳು ಕ್ರಿಯಾಶೀಲರಾಗಿ ಚಟುವಟಿಕೆಯಲ್ಲಿ ಇರಲು ವೇಳಾಪಟ್ಟಿ ಸಿದ್ಧಗೊಳಿಸಿಕೊಳ್ಳುವುದು ಅಗತ್ಯವೆಂದ ಪಾರ್ವತಿ ಅಪ್ಪಯ್ಯ ಆ ಮೂಲಕ ಸಂತೋಷದಿಂದ ದಿನ ಕಳೆಯುವಂತೆ ನೆನಪಿಸಿದರು.
ಪರಸ್ಪರ ಕೈಜೋಡಿಸಬೇಕು: ಪುಷ್ಪಾ ಕುಟ್ಟಣ್ಣ: ಫೀ.ಮಾ. ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಪುಷ್ಪಾ ಕುಟ್ಟಣ್ಣ ‘ಶಕ್ತಿ’ ಮೂಲಕ ಸಲಹೆಯೊಂದಿಗೆ, ಮಕ್ಕಳು ತಂದೆ-ತಾಯಿ ಜೊತೆಯಲ್ಲಿ ಕೆಲಸ ಕಾರ್ಯಗಳಿಗೆ ರಜಾ ಸಂದರ್ಭ ನೆರವಾಗುವಂತೆ ತಿಳಿಹೇಳಿದ್ದಾರೆ. ದೈನಂದಿನ ಚಟುವಟಿಕೆಗಳಾದ ಯೋಗ, ವ್ಯಾಯಾಮ, ಆಟ, ಪಾಠಗಳನ್ನು ಮನೆಗಳಲ್ಲಿ ಮುಕ್ತ ವಾತಾವರಣದಲ್ಲಿ ಕಲಿಯುವುದರ ಜೊತೆಗೆ, ಮನೆ ಕೆಲಸ, ಅಡುಗೆ, ಬಟ್ಟೆ ಒಗೆಯುವುದು, ತಮ್ಮ ಕೆಲಸ ತಾವೇ ಮಾಡುವುದು ಇತ್ಯಾದಿಯಲ್ಲಿ ಮಗ್ನರಾದರೆ ದಿನಕಳೆಯಲು ಸುಲಭವೆಂದು ಅಭಿಪ್ರಾಯಪಟ್ಟಿದ್ದಾರೆ.
ಚಿಕ್ಕ ಮಕ್ಕಳಿಗೆ ಚಿತ್ರಕಲೆ, ಸಣ್ಣ ಕತೆಗಳ ಓದುವಿಕೆ, ಧ್ಯಾನ, ಪ್ರಾರ್ಥನೆ, ಶ್ಲೋಕಗಳನ್ನು ಅಭ್ಯಾಸಿಸುವದು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮನೆ ಕೆಲಸದೊಂದಿಗೆ ಸೀಮಿತ ಅವಧಿಯಲ್ಲಿ ದೇಶದ ಆಗು ಹೋಗುಗಳ ಕುರಿತು ಮಾಧ್ಯಮಗಳಿಂದ ತಿಳಿದುಕೊಳ್ಳಲು ಪ್ರಯತ್ನಿಸುವಂತೆ ಸಲಹೆಯಿತ್ತಿದ್ದಾರೆ. ಎಲ್ಲ ಸ್ತರದ ಮಕ್ಕಳು ಬರವಣಿಗೆಯಲ್ಲಿ ತೊಡಗುವುದು ಕೂಡ ನಿತ್ಯ ಬೆಳವಣಿಗೆಗೆ ಸಹಕಾರಿ ಎಂದು ಪುಷ್ಪ ಕುಟ್ಟಣ್ಣ ಒತ್ತಿ ಹೇಳಿದ್ದಾರೆ.

Home    About us    Contact