ಕೃಷಿ-ಹೊಂಡ---ಕೆರೆಗಳ-ನಿರ್ಮಾಣದಲ್ಲಿ-ಅನುದಾನ-ದುರುಪಯೋಗ

ಮಡಿಕೇರಿ, ಜ. 13: ಕೃಷಿ ಹೊಂಡ - ಕೆರೆಗಳ ನಿರ್ಮಾಣದಲ್ಲಿ ಕೇವಲ 1 ಗ್ರಾಮದಲ್ಲಿಯೇ ಸರಕಾರಿ ಅನುದಾನದ ಹಣ ಭಾರೀ ದುರುಪಯೋಗವಾಗಿರುವುದು ಕಂಡುಬಂದಿದೆ. ಕಾಮಗಾರಿಗಳನ್ನು ನಿರ್ವಹಿಸದೆ ಸುಳ್ಳು ದಾಖಲೆ ಸೃಷ್ಟಿಸಿ ಹಣ ದುರುಪಯೋಗ ಮಾಡಲಾಗಿದೆ. ಸುಂಟಿಕೊಪ್ಪ ಕೃಷಿ ಇಲಾಖೆಯ ಆಡಳಿತದ ಅಧೀನದಲ್ಲಿರುವ ಕೆದಕಲ್ ಗ್ರಾಮದಲ್ಲಿ ದುರುಪಯೋಗವಾಗಿರುವುದು “ಶಕ್ತಿ”ಗೆ ದೊರೆತ ದಾಖಲೆಗಳಿಂದ ಸ್ಪಷ್ಟ ಗೋಚರವಾಗಿದೆ. ಸುಂಟಿಕೊಪ್ಪದ ಕೃಷಿ ಅಧಿಕಾರಿ ಹಾಗೂ ಗುತ್ತಿಗೆದಾರರು ಶಾಮೀಲಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವ ಕುರಿತು ಕೆದಕಲ್ ಗ್ರಾಮದ ಕೃಷಿಕರಾದ ವೈ.ಪಿ ತಿಮ್ಮಯ್ಯ ಅವರು ದಾಖಲೆ ಸಹಿತವಾಗಿ ಬಹಿರಂಗಗೊಳಿಸಿದ್ದಾರೆ.ಕೆಲವು ಕಡೆ ಕೆರೆಗಳನ್ನೇ ನಿರ್ಮಿಸದೆ ಅನುದಾನದ ಹಣವನ್ನು “ಸ್ವಾಹ” ಮಾಡಲಾಗಿದೆ. ಇನ್ನೊಂದೆಡೆ ಸತ್ತವರ ಹೆಸರಿನಲ್ಲಿ ಅವರ ಕೃಷಿ ಭೂಮಿಯಲ್ಲಿ ಕೆರೆ ನಿರ್ಮಿಸಿರುವುದಾಗಿ ದಾಖಲೆ ಸೃಷ್ಟಿಸಲಾಗಿದೆ. ಇದೊಂದು ಹಗಲು ದರೋಡೆಯಂತೆ ಗೋಚರವಾಗಿದೆ. ಇನ್ನೊಂದೆಡೆ, ಹಿಂದೆ ನಿರ್ಮಿಸಿದ ಕೆರೆಯನ್ನೆ ಕಳೆದ ವರ್ಷ ಮತ್ತೆ ಹೊಸದಾಗಿ ನಿರ್ಮಿಸಿದಂತೆ ದಾಖಲೆಯಲ್ಲಿ ತೋರಿಸಿ ವಂಚಿಸಲಾಗಿದೆ.

ಸರಕಾರದ ಯೋಜನೆಗಳು  ಕೃಷಿಕರ ಬಾಳಿಗೆ ಬೆಳಕಾಗುವಂತಹ ಉತ್ತಮ ಕಾರ್ಯಕ್ರಮಗಳಾಗಿರುವುದು ನಿಜವಾದರೂ ಪ್ರಾಯೋಗಿಕವಾಗಿ ಜಾರಿಗೊಂಡಾಗ ಈ ರೀತಿ ಸರಕಾರಿ ಅಧಿಕಾರಿಗಳು ಸಿಬ್ಬಂದಿ ಮತ್ತು ಗುತ್ತಿಗೆದಾರರ ಪಾಲಾಗುತ್ತಿರುವುದು ಅತ್ಯಂತ ಶೋಚನೀಯ.
ತಿಮ್ಮಯ್ಯ ಅವರು ಪಡೆದುಕೊಂಡಿರುವ ಮಾಹಿತಿಯನ್ನು ಗಮನಿಸಿದಾಗ ಕೆಲವು ಕಡೆ ಕಾಮಗಾರಿಗಳನ್ನು ನಿರ್ವಹಿಸದೆಯೇ ಸುಳ್ಳು ದಾಖಲೆ ಸೃಷ್ಟಿಸಿ ಹಣ ದುರುಪಯೋಗ ಗೊಳಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದ ವಿದ್ಯಮಾನವಾಗಿದೆ. ಗ್ರಾಮ ಒಂದರಲ್ಲಿಯೇ ಇಷ್ಟೊಂದು ಅವ್ಯವಹಾರವಾಗಿದ್ದರೆ ಇನ್ನು ತಾಲೂಕಿನಾದ್ಯಂತ, ಕೊಡಗು ಜಿಲೆಯಾದ್ಯಂತ ಮತ್ತು ಕರ್ನಾಟಕ ರಾಜ್ಯದಾದ್ಯಂತ ಎಷ್ಟೊಂದು ಹಣ ದುರುಪಯೋಗವಾಗಿರಬಹುದು ಎನ್ನುವದನ್ನು ಊಹಿಸಲು ಅಸಾಧ್ಯ. ವೈ.ಪಿ ತಿಮ್ಮಯ್ಯ ಅವರು ಪಡೆದಿರುವ ಮಾಹಿತಿಯ ಅನ್ವಯ ಈ ಕೆಳಗಿನ ಕೆಲವು ಕಾಮಗಾರಿಗಳಲ್ಲಿ ಮೇಲ್ನೋಟಕ್ಕೆ ಅವ್ಯವಹಾರವಾಗಿರುವುದು ಬಹಿರಂಗಗೊಂಡಿದೆ.
ಕೃಷಿ ಇಲಾಖೆಯ ಮಾಹಿತಿಯಂತೆ 2016-17 ರ ಸಾಲಿನಲಿ ಕೆದಕಲ್ ಗ್ರಾಮ ಪಂಚಾಯಿತಿಗೆ ಒಳ ಪಟ್ಟ ರೈತರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ 22 ಫಲಾನುಭವಿಗಳಿಗೆ ತಲಾ ರೂ.45 ಸಾವಿರ ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸಿರುವುದಾಗಿ ಇಲಾಖಾ ದಾಖಲಾತಿಯಲ್ಲಿ ತೋರಿಸಲಾಗಿದೆ. ಈ ಪೈಕಿ ಕೆದಕಲ್ ಗ್ರಾಮದ ಈರಪ್ಪ ಎಂಬವರಿಗೆ ಸ.ನಂ.90/3 ರಲ್ಲಿ, ತಿಮ್ಮಯ್ಯ ಎಂಬವರಿಗೆ ಸ.ನಂ 90/2 ರಲ್ಲಿ ಎಂಕನ ತಿಮ್ಮಯ್ಯ ಎಂಬವರಿಗೆ ಸ.ನಂ 87 ರಲ್ಲಿ ಕಾಮಗಾರಿ ನಿರ್ವಹಿಸಲಾಗಿದೆ ಎಂಬುದಾಗಿ ಮಾಹಿತಿ ನೀಡಲಾಗಿದೆ. ಆದರೆ ವಿಪರ್ಯಾಸವೆಂಬಂತೆ ಸ.ನಂ. 90/3 ರಲ್ಲಿ ಯಾವದೇ ಕೆರೆ - ಕೃಷಿ ಹೊಂಡ ನಿರ್ಮಾಣವಾಗಿರುವುದಿಲ್ಲ. ಅದೇ ರೀತಿ ಸ.ನಂ 90/2 ರಲ್ಲಿ ತಿಮ್ಮಯ್ಯ ಎಂಬವರಿಗೆ ಯಾವದೇ ಕೆರೆಯನ್ನು ನಿರ್ಮಾಣವೇ ಮಾಡಿಕೊಟ್ಟಿಲ್ಲ. ಆಶ್ಚರ್ಯವೆಂದರೆ ಸ.ನಂ. 87 ರಲ್ಲಿ ಹಳೆಯದಾದ ಒಂದು ಕೆರೆ ಇತ್ತು. ಇದನ್ನು ಆ ಕೆರೆಯ ಮಾಲೀಕರೆ ತಮ್ಮ ಸ್ವಂತ ಖರ್ಚಿನಿಂದ ದುರಸ್ತಿ ಪಡಿಸಿಕೊಂಡಿದ್ದರು. ಇದೇ ಕೆರೆಗೆ ಕೃಷಿ ಇಲಾಖೆಯಿಂದ ಹೊಸದಾಗಿ ಕೆರೆ - ಕೃಷಿ ಹೊಂಡ ನಿರ್ಮಿಸಿರುವುದಾಗಿ ದಾಖಲೆ ಸೃಷ್ಟಿಸಿ ಆ ಹಣವನ್ನು “ಗುಳುಂ” ಮಾಡಲಾಗಿದೆ. 
2016-17 ರ ಸಾಲಿನಲ್ಲಿ ಡಬ್ಲ್ಯೂ.ಡಿ ಯೋಜನೆಯಡಿ 19 ಫಲಾನುಭವಿಗಳಿಗೆ ಕಾಮಗಾರಿ ನಿರ್ವಹಿಸಿ ಕೊಟ್ಟಿರುವುದಾಗಿ ಮಾಹಿತಿ ನೀಡಲಾಗಿದೆ. ಅದೇ ರೀತಿ ಸ.ನಂ. 22 ರಲ್ಲಿ ಎನ್.ಯು ರಾಜು ಮತ್ತು ಸ.ನಂ. 72/2 ರಲ್ಲಿ ಪುಷ್ಪವೇಣಿ ಎಂಬವರಿಗೆ ಕೆರೆ ನಿರ್ಮಿಸಿರುವುದಾಗಿ ಮಾಹಿತಿ ನೀಡಲಾಗಿದೆ. ಇವರ ಜಮೀನಿನಲ್ಲೂ ಕೆರೆ ನಿರ್ಮಾಣ ಮಾಡಿಲ್ಲ. ಹಳೆಯದಾದ ಕೆರೆಗಳಿದ್ದು ಅವುಗಳನ್ನು ಆ ಕೃಷಿಕರೆ ದುರಸ್ತಿ ಪಡೆಸಿಕೊಂಡಿದ್ದಾರೆ.
2017-18 ರ ಸಾಲನಲ್ಲಿ ಡಬ್ಲ್ಯೂ.ಡಿ ಯೋಜನೆಯಡಿ 10 ಮಂದಿಗೆ ಕೆರೆ ನಿರ್ಮಿಸಿರುವುದಾಗಿ ಮಾಹಿತಿ ಇದೆ. ಈ ಪೈಕಿ ಸ.ನಂ. 21/10, 21/11 ರಲ್ಲಿ ಅಶ್ವಿನ್ ಕುಮಾರ್ ಎಂಬವರಿಗೆ ಕೆರೆ ನಿರ್ಮಿಸಿರುವದಾಗಿ ತೋರಿಸಲಾಗಿದೆ. ಆದರೆ ನೈಜವಾಗಿ ಇವರಿಗೆ ಯಾವುದೇ ಕೆರೆ ಅಥವಾ ಕೃಷಿ ಹೊಂಡವನ್ನು ನಿರ್ಮಿಸಿಕೊಟ್ಟಿಲ್ಲ.
ಸತ್ತವರ ದುರ್ಬಳಕೆ
ತಮ್ಮ ಸ್ವಾರ್ಥದ ಖಜಾನೆ ತುಂಬುವುದಕ್ಕೆ ಸರಕಾರದ ಸಂಬಳ ಸಾಲದೆಂದು ಸರಕಾರದ ಯೋಜನೆಗಳನ್ನು ಅವಕಾಶ ಸಿಕ್ಕಿದಾಗ ಇಲಾಖೆಯ ಮಂದಿ ಬಾಚಿಕೊಳ್ಳುತ್ತಾರೆ; ದೋಚುತ್ತಾರೆ. ಇದಕ್ಕೆ ಸ್ಪಷ್ಟ ನಿದರ್ಶನವೆಂಬಂತೆ ಹೊರೂರು ಗ್ರಾಮದಲ್ಲಿ ಚೇರಂಡ ಉತ್ತಪ್ಪ ಎಂಬವರು ಇಹಲೋಕ ತ್ಯಜಿಸಿ 10 ವರ್ಷಗಳೆ ಕಳೆದುಹೋಗಿದೆ. ಆದರೆ ಕಳೆದ ವರ್ಷ ಅವರ ಹೆಸರಿನಲ್ಲಿರುವ ಸ.ನಂ. 2/2, 2/3 ರಲ್ಲಿ ಕಾಮಗಾರಿ ನಿರ್ವಹಿಸಿರುವುದಾಗಿ ದಾಖಲೆಯಲ್ಲಿ ತೋರಿಸಲಾಗಿದೆ. ವಿಚಿತ್ರವೆಂದರೆ ಸ.ನಂ 2/2 ಹಾಗೂ 2/3 ಎಂಬುದು ಹೊರೂರು ಗ್ರಾಮದ ಭೂ ದಾಖಲೆಯಲ್ಲಿಯೇ ಕಂಡು ಬಂದಿಲ್ಲ. ಬದಲಿಗೆ ಹೊರೂರು ಗ್ರಾಮದಲ್ಲಿ ಸ.ನಂ 2 ಎಂಬುದಾಗಿ ದಾಖಲೆ ಇದ್ದು ಇದು ಪೊನ್ಚೆಟ್ಟೀರ ಸೋಮಣ್ಣ ಎಂಬವರ ಹೆಸರಿನಲ್ಲಿದೆ. ತಮಗೆ ಯಾವುದೇ ಪರಿಶ್ರಮವಿಲ್ಲದೆ ಸರಕಾರಿ ಯೋಜನೆಯ ಹಣ ಕುಳಿತಲ್ಲಿಯೇ ಲಭ್ಯವಾಗುತ್ತದೆ ಎನ್ನುವ ದುರಾಲೋಚನೆ ಬಂದರೆ ಈ ಮಂದಿ ಸತ್ತವರನ್ನೂ ಬದುಕಿಸುತ್ತಾರೆ, ಬದುಕಿದವರನ್ನೂ ಬೇಕಿದ್ದರೆ ಸಾಯಿಸುತ್ತಾರೆ. ಅದೇ ರೀತಿ 2018-19 ರ ಸಾಲಿನಲ್ಲಿ ಡಬ್ಲ್ಯೂ.ಡಿ ಯೋಜನೆಯಡಿ 18 ಮಂದಿ ಫಲಾನುಭವಿಗಳಿದ್ದು ಈ ಪೈಕಿ ವೈ.ಸಿ ತಿಮ್ಮಯ್ಯ ಎಂಬವರ ಹೆಸರಿನಲ್ಲಿ ಕಾಮಗಾರಿ ನಿರ್ವಹಿಸಿರುವುದಾಗಿ ಇಲಾಖಾ ದಾಖಲೆಯಲ್ಲಿ ಉಲ್ಲೇಖವಿದೆ. ಆದರೆ ಅವರ ಜಮೀನಿನಲ್ಲಿ ಇಂತಹ ಯಾವುದೇ ಕಾಮಗಾರಿ ನಡೆದಿಲ್ಲ ಎಂಬುವದು ಸ್ಥಳಕ್ಕೆ ತೆರಳಿ ಪರಿಶೀಲಿಸಿದರೆ ಖಂಡಿತ ಖಾತರಿಗೊಳ್ಳುತ್ತದೆ.

Home    About us    Contact