ಕೊಡವ-ಹಾಕಿ-ಅಕಾಡೆಮಿ-ಸಭೆ-:-ತೀರ್ಪುಗಾರರ-ಹೊಸ-ಸಮಿತಿ-ರಚನೆ

ವೀರಾಜಪೇಟೆ, ಜ. 13: ಮುಂದಿನ ಕೊಡವ ಕುಟುಂಬಗಳ ಹಾಕಿ ಉತ್ಸವದಲ್ಲಿ ಕೊಡವ ಹಾಕಿ ಅಕಾಡೆಮಿಯ ವತಿಯಿಂದ ರಚಿಸಿದ ತೀರ್ಪುಗಾರರನ್ನು ಆಯ್ಕೆ ಮಾಡಿಕೊಳ್ಳುವಂತೆ ಕೊಡವ ಹಾಕಿ ಅಕಾಡೆಮಿ ತೀರ್ಮಾನಿಸಿದೆ. ಮುಂದಿನ ಏಪ್ರಿಲ್ ತಿಂಗಳಲ್ಲಿ ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ ಮೈದಾನದಲ್ಲಿ ನಡೆಯುವ ಮುಕ್ಕಾಟೀರ ಕಪ್ ಹಾಕಿ ಉತ್ಸವದಲ್ಲಿಯೂ ಕೊಡವ ಹಾಕಿ ಅಕಾಡೆಮಿಯು ರಚಿಸಿದ ಹಾಕಿ ತೀರ್ಪುಗಾರರು ಕಾರ್ಯ ನಿರ್ವಹಿ ಸುವಂತೆ ನಿನ್ನೆ ವೀರಾಜಪೇಟೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.ಇಲ್ಲಿನ ಕೂರ್ಗ್ ಫವಿಲಿಯನ್ ಹೊಟೇಲ್ ಸಭಾಂಗಣದಲ್ಲಿ ಕೊಡವ ಹಾಕಿ ಅಕಾಡೆಮಿಯ ಕಾರ್ಯಾಧ್ಯಕ್ಷ ಕಾಳೆಂಗಡ ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೊಡವ ಹಾಕಿ ಅಕಾಡೆಮಿಯ ಸಭೆಯಲ್ಲಿ ಈ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಇದೇ ಸಭೆಯಲ್ಲಿ ಅಂತರ್ರಾಷ್ಟ್ರೀಯ ಹಾಕಿ ತೀರ್ಪುಗಾರರಾದ ಅಚ್ಚಕಾಳೇರ ಪಳಂಗಪ್ಪ ಅವರ ನೇತೃತ್ವದಲ್ಲಿ 11 ಯುವ ಸದಸ್ಯರುಗಳ ತೀರ್ಪುಗಾರರ ಸಮಿತಿಯನ್ನು ರಚಿಸಲಾಯಿತು. ಈ ತೀರ್ಪುಗಾರರ ಸಮಿತಿ ಸದಸ್ಯರುಗಳಿಗೆ  ಅಂತರ್ರಾಷ್ಟ್ರೀಯ ತರಬೇತುದಾರರಿಂದ ಸಧ್ಯದಲ್ಲಿಯೇ ಕಾರ್ಯಗಾರ ಏರ್ಪಡಿಸುವುದು. ಪ್ರತಿಯೊಂದು ಕುಟುಂಬದ ಹಾಕಿ ಉತ್ಸವದ ಪಂದ್ಯಾಟದ ತೀರ್ಪುಗಾರರಿಗೆ ಈಗ ತಗಲುತ್ತಿರುವ ರೂ. 12ಲಕ್ಷದಷ್ಟು ವೆಚ್ಚದ ಹೊರೆಯನ್ನು 7ಲಕ್ಷಕ್ಕೆ ತಗ್ಗಿಸುವಂತೆಯೂ ಸಭೆ ತೀರ್ಮಾನಿಸಿತು. ಅಕಾಡೆಮಿ ಉಪಾಧ್ಯಕ್ಷ ಕ್ಯಾಟಿ ಉತ್ತಪ್ಪ ಸ್ವಾಗತಿಸಿ ದರು. ಕಾರ್ಯದರ್ಶಿ ಅಮ್ಮಣಿಚಂಡ ರವಿ ಉತ್ತಪ್ಪ ವಂದಿಸಿದರು.

Home    About us    Contact