-ಜನಮಾನಸ-ನಡುವೆ-ಮರೆಯಾದ-2019-ಮಡಿಕೇರಿ-ದಸರಾ
 
ಮಡಿಕೇರಿ, ಅ. 9: 2019ರ ಮಡಿಕೇರಿ ದಸರಾ ಜನೋತ್ಸವ ಕಾರ್ಯಕ್ರಮ, ಹೇಗೋ ಜನಮಾನಸದ ನಡುವೆ ಮರೆಯಾಗಿ ಹೋಯಿತು. ಬಹುಶಃ ಇದೇ ಮೊದಲ ಬಾರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರೊಬ್ಬರ ಹೊರತಾಗಿ ಮಿಕ್ಕೆಲ್ಲ ಆಹ್ವಾನಿತ ಅತಿಥಿಗಣ್ಯರು ಗೈರಾಗಿದ್ದು; ವರುಣನ ಕೃಪೆ ಮಾತ್ರದಿಂದ ನಾಡಹಬ್ಬ ದಲ್ಲಿ ಅಬಾಲ ವೃದ್ಧರಾದಿಯಾಗಿ ಜನತೆ ದಸರೆಯನ್ನು ಆನಂದಿಸಿದರು.
ನಗರದೆಲ್ಲೆಡೆ ಝಘಮಘಿಸುವ ವಿದ್ಯುತ್ ಬೆಳಕಿನ ನಡುವೆ; ದಶಮಂಟಪ ಗಳ ವೈಭವೋಪೇತ ಕಲಾಕೃತಿಗಳ ಪುರಾಣಕಥೆಗಳನ್ನು ಒಳಗೊಂಡ; ಹಂದರದ ಸೊಬಗಿನಲ್ಲಿ ಜನಸ್ತೋಮ ಹರ್ಷೋಲ್ಲಾಸದಿಂದ; ವಿವಿಧ ವಾದ್ಯಗಳ ಹಿಮ್ಮೇಳಕ್ಕೆ ಹೆಜ್ಜೆ ಹಾಕುತ್ತಾ ಮೈ ಮರೆತ ಕ್ಷಣ ಎದುರಾಯಿತು.
ವಿಜಯದಶಮಿಯ ಮುಸ್ಸಂಜೆಯ ನಡುವೆ; ಮಡಿಕೇರಿಯ ನಾಲ್ಕು ನಿಟ್ಟಿನಲ್ಲಿ ಕಾಣಿಸಿಕೊಳ್ಳಲಾರಂಭಿಸಿದ ಜನ; ಮಧ್ಯರಾತ್ರಿಯ ಹೊತ್ತಿಗೆ ಸಾಕಷ್ಟು ಸಂಖ್ಯೆಯಲ್ಲಿ ದಶಮಂಟಪಗಳ ವೀಕ್ಷಣೆಯೊಂದಿಗೆ; ಧರೆಗಿಳಿದು ಬಂದು ದಾನವರನ್ನು ಸಂಹಾರಗೈಯಲು ಸಿದ್ಧಗೊಂಡಿದ್ದ ದೇವಾನುದೇವತೆಗಳ ಭಾವಾವೇಶವನ್ನು ನೋಡಿ ಕಣ್ಮನ ತುಂಬಿಕೊಂಡರು.
60 ಸಾವಿರ ಮಂದಿ : ಮಡಿಕೇರಿ ದಸರಾ ನಾಡಹಬ್ಬದ ಜನೋತ್ಸವಕ್ಕೆ ಅಂದಾಜು 60 ಸಾವಿರ ಮಂದಿ ಸಾಕ್ಷಿಯಾಗಿದ್ದು, ಈ ಬಾರಿ ಯಾವದೇ ಅಹಿತಕರ ಘಟನೆಗಳು ಸಂಭವಿಸದೆ ಎಲ್ಲವೂ ಶಾಂತಿಯುತವಾಗಿ ಮುಕ್ತಾಯಗೊಂಡಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಖಚಿತಪಡಿಸಿವೆ.
20 ಸಾವಿರ ಗೋಣಿಗೊಪ್ಪಲು : ಅಂತೆಯೇ ಗೋಣಿಕೊಪ್ಪಲುವಿನ ಜನೋತ್ಸವದಲ್ಲಿ ಕೂಡ ಸುಮಾರು 20 ಸಾವಿರ ಮಂದಿ ಭಾಗವಹಿಸುವ ಮೂಲಕ; 2019ರ ಐತಿಹಾಸಿಕ ನವರಾತ್ರಿ ಉತ್ಸವಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಈ ಮೂಲಗಳು ದೃಢಪಡಿಸಿವೆ.
ನಿರಾಸೆ ಮೂಡಿಸಿದ ಗಣ್ಯರು: ವಿಜಯದಶಮಿಯ ರಾತ್ರಿ 10.30 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದ ವಿಶಾಲ ಕಲಾ ಸಂಭ್ರಮ ವೇದಿಕೆಯಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮಕ್ಕೆ ಆಹ್ವಾನಿತ ಅತಿಥಿಗಣ್ಯರು ಗೈರಾಗುವ ಮೂಲಕ; ದಸರಾ ಸಮಿತಿಯ ಪದಾಧಿಕಾರಿಗಳಿಗೆ ಇರಿಸು ಮುರಿಸು ಸಹಿತ ನಿರಾಸೆ ಮೂಡಿಸಿದರು.
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತುರ್ತಾಗಿ ನವದೆಹಲಿಗೆ ತೆರಳಬೇಕೆಂಬ ಕಾರಣಕ್ಕೆ ಬಾರದಿದ್ದರೆ;  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಶಿಕ್ಷಣ ಸಚಿವರು ಮೈಸೂರು ಕಾರ್ಯಕ್ರಮ ಮುಗಿಸಿ; ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಭೆಯಲ್ಲಿ ಇರಬೇಕೆಂಬ ಸಬೂಬು ಹೇಳಿ ಗೈರಾಗಿದ್ದಾಗಿ ದಸರಾ ಸಮಿತಿ ಪದಾಧಿಕಾರಿಗಳು ಮಾಹಿತಿ ನೀಡಿದರು.
ಗೋಣಿಕೊಪ್ಪಲುವಿಗೂ ಗೈರು : ಹೀಗಾಗಿ ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರಾ ನಾಡಹಬ್ಬದಲ್ಲಿ ಕೇವಲ ಆಯ ಕ್ಷೇತ್ರದ ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ದಸರಾ ಸಮಿತಿಯ ಪದಾಧಿಕಾರಿಗಳಷ್ಟೇ ಸಮಾರಂಭ ವೇದಿಕೆಗಳಲ್ಲಿ ಕಾಣಿಸಿಕೊಂಡರು.
ಆಹ್ವಾನ ಗೊಂದಲ : ಸ್ವತಃ ಕೊಡಗು ಜಿ.ಪಂ. ಅಧ್ಯಕ್ಷರ ಸಹಿತ ಜಿಲ್ಲೆಯ ಇತರ ಜನಪ್ರತಿನಿಧಿಗಳಿಗೆ ಸಕಾಲದಲ್ಲಿ ಆಹ್ವಾನ ಪತ್ರ ತಲಪದ ಕಾರಣ ಮಡಿಕೇರಿ ದಸರಾದಲ್ಲಿ ಹೆಚ್ಚಿನವರು ಭಾಗವಹಿಸಿಲ್ಲವೆಂದು ಹಲವು ಜನಪ್ರತಿನಿಧಿಗಳು ಸ್ಪಷ್ಟನೆ ನೀಡಿದ್ದಾರೆ.
ಈ ಎಲ್ಲಾ ಗೊಂದಲಗಳ ನಡುವೆ ದಸರಾ ವೇದಿಕೆಯ ರಸಮಂಜರಿ ಕಲಾರಸಿಕರಿಗೆ ರಂಜಿಸಿದರೆ; ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವ ಹಾಗೂ ದಶಮಂಟಪಗಳ ಮೆರವಣಿಗೆಯಲ್ಲಿ; ಜಿಲ್ಲೆ ಮತ್ತು ಹೊರಗಿನಿಂದ ಆಗಮಿಸಿದ್ದ ಜನತೆ ಪಾಲ್ಗೊಂಡು ರಾತ್ರಿಯಿಡೀ ಸಂಭ್ರಮಿಸುತ್ತಿದ್ದ ಚಿತ್ರಣ ಎದುರಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ನೇತೃತ್ವದಲ್ಲಿ ಮಡಿಕೇರಿ ಹಾಗೂ ಗೋಣಿಕೊಪ್ಪಲು ವಿನ ನಾಲ್ಕು ನಿಟ್ಟಿನಲ್ಲಿ ವಾಹನಗಳ ಆಗಮನ, ನಿರ್ಗಮನದ ವೇಳೆ ಅಧಿಕ ಸಂಖ್ಯೆಯ ಪೊಲೀಸರು ಬಿಗಿಭದ್ರತೆ ಯೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮವಹಿಸಿದ್ದು ಗೋಚರಿಸಿತು.
 

Home    About us    Contact