ದೇವಮಚ್ಚಿ--ನಾಗರಹೊಳೆಯಲ್ಲಿ-ವಿಲೀನಕ್ಕೆ-ವಿರೋಧ

ಗೋಣಿಕೊಪ್ಪಲು, ಸೆ.11: ಕೊಡಗು ಜಿಲ್ಲೆ ವೀರಾಜಪೇಟೆ ತಾಲೂಕಿನ ತಿತಿಮತಿ, ದೇವರಪುರ, ಚೆನ್ನಯ್ಯನಕೋಟೆ ಮತ್ತು ಮಾಲ್ದಾರೆ ವ್ಯಾಪ್ತಿಯಲ್ಲಿ ಬರುವ ದೇವಮಚ್ಚಿ ಮೀಸಲು ಅರಣ್ಯ  ಪ್ರದೇಶವನ್ನು ಗ್ರಾಮ ಸಭೆ ಒಪ್ಪಿಗೆ ಇಲ್ಲದೆ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೇರಿಸಿರುವದರ ಬಗ್ಗೆ ಆಕ್ಷೇಪಣೆ ವ್ಯಕ್ತ ಪಡಿಸಿ ಈ ಸುತ್ತೋಲೆಯನ್ನು ಹಿಂಪಡೆಯುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ.ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದರು. ತಿತಿಮತಿ, ದೇವರಪುರ, ಚೆನ್ನಯ್ಯನಕೋಟೆ ಮತ್ತು ಮಾಲ್ದಾರೆ ವ್ಯಾಪ್ತಿಯಲ್ಲಿ ಬರುವ ದೇವಮಚ್ಚಿ  ಎಂಬ ಅರಣ್ಯ ಪ್ರದೇಶ (ರಿಸರ್ವ್ ಫಾರೆಸ್ಟ್) ಇದ್ದು ಈ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ  ಬಹುತೇಕÀ ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟು ಅರಣ್ಯ ವಾಸಿಗಳು ವಾಸವಿದ್ದಾರೆ. ಈ ಮೀಸಲು ಅರಣ್ಯದ ವ್ಯಾಪ್ತಿಯಲ್ಲಿ ಅನೇಕರು ಖಾಸಗಿ ಜಮೀನನ್ನು ಹೊಂದಿರುತ್ತಾರೆ. ಈಗಾಗಲೇ ಅರಣ್ಯ ಹಕ್ಕು ಕಾಯ್ದೆಯಡಿ ಎರಡು ಸಾವಿರಕ್ಕೂ ಹೆಚ್ಚು ಕುಟುಂಬದ ಪರಿಶಿಷ್ಟ ಪಂಗಡದವರಿಗೆ ಹಕ್ಕು ಪತ್ರ ನೀಡಲಾಗಿದೆ. ಅಲ್ಲದೆ ಇತರ ಜನಾಂಗಕ್ಕೂ ಅಂದರೆ  1978ಕ್ಕೆ ಮೊದಲು  ವಾಸವಿರುವ ಜನರಿಗೆ ಕೇಂದ್ರ ಸರ್ಕಾರದ  ಅಧಿಸೂಚನೆಯಂತೆ ಹಕ್ಕು ಪತ್ರ ನೀಡಲಾಗಿದೆ. ಈ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ  20 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಮಾಲ್ದಾರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೂಡ್ಲೂರು ಎಂಬ ಗ್ರಾಮದಲ್ಲಿ 1967ನೇ ಇಸವಿಗೆ ಮೊದಲೇ ನಾಗರಹೊಳೆ ಅಭಯಾರಣ್ಯದ  ಮಧ್ಯದಲ್ಲಿ ಹಕ್ಕು ಪತ್ರ ಸಮೇತ ವಾಸವಿದ್ದ 300ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಿ  ಪ್ರತಿಯೊಬ್ಬರಿಗೂ ತಲಾ 2 ಎಕರೆಯ ಜಮೀನು ನೀಡಿರುತ್ತಾರೆ. ಇವರೆಲ್ಲರೂ ದೇವಮಚ್ಚಿ ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದಾರೆ.

ಈ ಹಿಂದೆಯೂ ಕೂಡ ಪರಿಶಿಷ್ಟ ಪಂಗಡದವರು ತಮಗೆ ಹಕ್ಕು ಪತ್ರ ಕೇಳಿ ಮಹಿಳೆಯರು ಬೆತ್ತಲೆ ಮೆರವಣಿಗೆ ಮಾಡಿ ದೇಶದ ಗಮನ ಸೆಳೆದಿರುತ್ತಾರೆ. ಆದರೆ ಅರಣ್ಯ ಇಲಾಖೆಯವರು ಏಕಾಏಕಿ ಇತ್ತೀಚೆಗೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅರಣ್ಯ ಕಾಯ್ದೆ, ಫಾರೆಸ್ಟ್ 
(ಮೊದಲ ಪುಟದಿಂದ) ಮ್ಯಾನ್ಯುವಲ್ ನಿಯಮಗಳನ್ನು ಉಲ್ಲಂಘನೆ ಮಾಡಿ ಇಡೀ ಪ್ರದೇಶ ವನ್ನು  ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಗೆ ಸೇರಿಸಿರುವದರಿಂದ ಇಲ್ಲಿ ವಾಸಿಸುತ್ತಿರುವ ಜನರಿಗೆ  ಅರಣ್ಯ ಇಲಾಖೆಯವರು ಈಗಾಗಲೇ ಕಿರುಕುಳ ನೀಡಲು ಆರಂಭಿಸಿದ್ದಾರೆ. ಅರಣ್ಯ ಅಧಿಕಾರಿಗಳ ಈ ಸರ್ವಾಧಿಕಾರಿ ಧೋರಣೆಯಿಂದ ಆ ನಾಲ್ಕು ಗ್ರಾಮ ಪಂಚಾಯ್ತಿಯಲ್ಲಿ  ಅಶಾಂತಿಯ ವಾತಾವರಣ ಉಂಟಾಗಲಿದೆ. ಪರಿಶಿಷ್ಟ ಪಂಗಡ ಹಾಗೂ ಇತರ ಜನಾಂಗದವರು ಚಳುವಳಿಯ ಹಾದಿಯನ್ನು ಹಿಡಿಯುವ ಮುನ್ಸೂಚನೆ ಇದೆ. ಅರಣ್ಯ ಅಧಿಕಾರಿಗಳ ಈ ಸರ್ವಾಧಿಕಾರ ಧೋರಣೆಯನ್ನು ಖಂಡಿಸಿ ಇಲ್ಲಿನ  ಗ್ರಾಮ ಪಂಚಾಯ್ತಿಗಳು ಅಧಿಸೂಚನೆಯನ್ನು ಹಿಂಪಡೆಯಲು ಪಂಚಾಯ್ತಿಯ ವಿಶೇಷ ಸಭೆಯಲ್ಲಿ ನಿರ್ಣಯ ಮಾಡಿರುತ್ತಾರೆ. ಆದುದರಿಂದ ದೇವಮಚ್ಚಿ  ಅರಣ್ಯ ಪ್ರದೇಶವನ್ನು ನಾಗರಹೊಳೆ ಅಭಯಾರಣ್ಯಕ್ಕೆ ಸೇರಿಸಿರುವದನ್ನು ಹಿಂಪಡೆದು ಯಥಾಸ್ಥಿತಿ ಕಾಪಾಡುವಂತೆ  ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಭೇಟಿಯ ಸಂದರ್ಭ ಕೊಡಗು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಬಿ.ಎ. ಹರೀಶ್, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನೆಲ್ಲಚಂಡ ಕಿರಣ್ ಕಾರ್ಯಪ್ಪ ಉಪಸ್ಥಿತರಿದ್ದರು.
-ಹೆಚ್.ಕೆ.ಜಗದೀಶ್
 

Home    About us    Contact