ಕೋವರ್ ಕೊಲ್ಲಿ ಇಂದ್ರೇಶ್
ಬೆಂಗಳೂರು ಜೂ. ೮: ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಅತಿಯಾದ ಬಳಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲದೇ ಚಿಕ್ಕವಯಸ್ಸಿನಲ್ಲೇ ದುಶ್ಚಟಗಳಿಗೆ ದಾಸರಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವ ಮಕ್ಕಳನ್ನು ರಕ್ಷಿಸಲು ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಠಿಣ ಕ್ರಮ ಕೈಗೊಂಡಿದ್ದಾರೆ. ಈ ಸಂಬAಧ ರಾಜ್ಯದ ಪಬ್, ಬಾರ್ಗಳು ಮತ್ತು ಮದ್ಯ ಸರಬರಾಜು ಮಾಡುವ ಎಲ್ಲಾ ವಾಣಿಜ್ಯ ಸಂಸ್ಥೆಗಳ ಮೇಲೆ ಕಠಿಣ ನಿಗಾ ವಹಿಸಲು ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದ್ದು, ಮದ್ಯ ಸರಬರಾಜು ಮಾಡುವ ಎಲ್ಲಾ ಸಂಸ್ಥೆಗಳು ಪ್ರವೇಶ ದ್ವಾರದಲ್ಲಿ ಮತ್ತು ಮದ್ಯವನ್ನು ನೀಡುವ ಮೊದಲು ಕಟ್ಟುನಿಟ್ಟಾದ ವಯಸ್ಸಿನ ಪರಿಶೀಲನಾ ನಿಯಮಗಳನ್ನು ಜಾರಿಗೆ ತರಬೇಕು ಎಂದು ಆದೇಶಿಸಿದ್ದಾರೆ. ಹೀಗಾಗಿ ಇನ್ನು ಮುಂದೆ ರಾಜ್ಯದಲ್ಲಿ ವಯಸ್ಸಿನ ಪುರಾವೆ ಇರುವ ಐಡಿ ಕಾರ್ಡ್ ಇಲ್ಲದಿದ್ದರೆ ಬಾರ್, ಪಬ್ಗಳಿಗೆ ಪ್ರವೇಶಕ್ಕೆ ಅವಕಾಶ ಇಲ್ಲ. ಈ ಬಗ್ಗೆ ಇಂದು ನಡೆದ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೆಂಗಳೂರಿನಲ್ಲಿ ಹದಿಹರೆಯದವರು ಮತ್ತು ಯುವ ಜನರಲ್ಲಿ ಹೆಚ್ಚುತ್ತಿರುವ ಮದ್ಯಪಾನ ಹಾಗೂ ಮಾದಕ ದ್ರವ್ಯಗಳ ಬಳಕೆಯ ಬಗೆಗಿನ ಆತಂಕದ ಹಿನ್ನೆಲೆಯಲ್ಲಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನ ನಾಲ್ಕು ಪ್ರಮುಖ ಶಿಕ್ಷಣ ಸಂಸ್ಥೆಗಳ ಪದವಿಪೂರ್ವ, ಪದವಿ ಮತ್ತು ಉನ್ನತ ಪ್ರೌಢ ತರಗತಿಗಳ ೪,೦೯೩ ವಿದ್ಯಾರ್ಥಿಗಳ ನಡುವೆ ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ, ನಗರದ ಪ್ರತಿ ಮೂವರು ಹದಿಹರೆಯದವರಲ್ಲಿ ಒಬ್ಬರು ಮದ್ಯ ಅಥವಾ ತಂಬಾಕು ಬಳಕೆಯಿಂದಾಗಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಅಪಾಯದಲ್ಲಿದ್ದಾರೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಅಧ್ಯಯನವನ್ನು ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಕ್ರೈಸ್ಟ್ ವಿಶ್ವವಿದ್ಯಾಲಯ ಮತ್ತು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸಂಶೋಧಕರು ನಡೆಸಿದ್ದಾರೆ.
ಈ ಅಧ್ಯಯನದ ಪ್ರಕಾರ, ಸಮೀಕ್ಷೆಗೆ ಒಳಪಟ್ಟ ಯುವಕರಲ್ಲಿ ಶೇ. ೩೩ ರಷ್ಟು ಮಂದಿ ಮದ್ಯವನ್ನು ಬಳಸುತ್ತಿದ್ದರೆ, ಸುಮಾರು ಶೇ. ೧೮ ರಷ್ಟು ಮಂದಿ ತಂಬಾಕು ಚಟಕ್ಕೆ ದಾಸರಾಗಿದ್ದಾರೆ. ಇದು ತಂಬಾಕು ಬಳಕೆಯ ರಾಷ್ಟ್ರೀಯ ಸರಾಸರಿ (ಶೇ. ೮.೭) ಮತ್ತು ಮದ್ಯಪಾನದ ರಾಷ್ಟ್ರೀಯ ಸರಾಸರಿಗಿಂತ (ಶೇ. ೭.೯) ಗಣನೀಯವಾಗಿ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಇದು ಕರ್ನಾಟಕದ ಒಟ್ಟಾರೆ ಸರಾಸರಿಯಾದ ಶೇ. ೪.೭ (ತಂಬಾಕು) ಮತ್ತು ಶೇ. ೮.೫ಕ್ಕಿಂತಲೂ (ಮದ್ಯಪಾನ) ತೀರಾ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಹದಿಹರೆಯದವರು ಮದ್ಯಪಾನ ಮಾಡಲು ಪ್ರಾರಂಭಿಸುವ ಸರಾಸರಿ ವಯಸ್ಸು ೧೭ ವರ್ಷವಾಗಿದ್ದು, ಕೆಲವರು ಕೇವಲ ೮ ವರ್ಷ ವಯಸ್ಸಿನಲ್ಲೇ ಮದ್ಯಪಾನದ ಹವ್ಯಾಸ ಆರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ. ಈ ಗಂಭೀರ ಸಂಶೋಧನಾ ವರದಿಯ ಹಿನ್ನೆಲೆಯಲ್ಲಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ಅಪ್ರಾಪ್ತ ವಯಸ್ಕರ ಮದ್ಯಪಾನವನ್ನು ಕೇವಲ ಪರವಾನಗಿ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸದೆ, ಇದನ್ನು ಯುವಕರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯದ ಗಂಭೀರ ಕಾಳಜಿ ಎಂದು ಪರಿಗಣಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಸೂಚನೆಯ ಪ್ರಕಾರ ಇನ್ನು ಮುಂದೆ ವಯಸ್ಸಿನ ಅಧಿಕೃತ ಪುರಾವೆ (ಐಡಿ ಕಾರ್ಡ್) ಇಲ್ಲದೆ ಪಬ್, ಬಾರ್, ಕ್ಲಬ್ ಅಥವಾ ಮದ್ಯ ಸರಬರಾಜು ಮಾಡುವ ಸಂಸ್ಥೆಗಳ ಒಳಗೆ ಪ್ರವೇಶ ನೀಡಬಾರದು.
ಸಂಸ್ಥೆಗಳು ಗ್ರಾಹಕರಿಗೆ ಪ್ರವೇಶ ನೀಡುವ ಮೊದಲು ಅಥವಾ ಮದ್ಯವನ್ನು ಸರಬರಾಜು ಮಾಡುವ ಮುನ್ನ ಸರ್ಕಾರ ನೀಡಿದ ಅಧಿಕೃತ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪರಿಶೀಲಿಸಿ ವಯಸ್ಸನ್ನು ದೃಢೀಕರಿಸಿಕೊಳ್ಳಬೇಕು. ಒಂದು ವೇಳೆ ಇದನ್ನು ಮೀರಿ ಮದ್ಯ ಸರಬರಾಜು ಮಾಡಿದರೆ ಅನ್ವಯವಾಗುವ ಕಾನೂನಿನ ಅಡಿಯಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಸಂಸ್ಥೆಯ ಆವರಣದೊಳಗೆ ನಡೆಯುವ ನಿಯಮ ಉಲ್ಲಂಘನೆಗಳಿಗೆ ಆಯಾ ಸಂಸ್ಥೆಯ ಮಾಲೀಕರು, ವ್ಯವಸ್ಥಾಪಕರು ಪರವಾನಗಿದಾರರು ಮತ್ತು ಕಾರ್ಯಕ್ರಮದ ಆಯೋಜಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪ್ರವೇಶ ದ್ವಾರದ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ತನಿಖೆಯ ಸಮಯದಲ್ಲಿ ನಿಯಮ ಪಾಲನೆಯನ್ನು ಪರಿಶೀಲಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ನಿಗದಿತ ಅವಧಿಯವರೆಗೆ ಸುರಕ್ಷಿತವಾಗಿ ಸಂಗ್ರಹಿಸಿಡಬೇಕು. ಅಪ್ರಾಪ್ತ ವಯಸ್ಕರ ಮದ್ಯಪಾನಕ್ಕೆ ಪ್ರೋತ್ಸಾಹ ನೀಡುವ ಅಥವಾ ಅದಕ್ಕೆ ಕಾರಣವಾಗುವ ಸಂಸ್ಥೆಗಳ ವಿರುದ್ಧ ಕರ್ನಾಟಕ ಸರ್ಕಾರವು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ‘ಶೂನ್ಯ ಸಹಿಷ್ಣುತೆ’ (Zeಡಿo-ಣoಟeಡಿಚಿಟಿಛಿe) ನೀತಿಯನ್ನು ಅಳವಡಿಸಿಕೊಳ್ಳಲಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.