ಸೋಮವಾರಪೇಟೆ, ಜೂ. ೮: ಕೇಂದ್ರ ಸರ್ಕಾರದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದಿAದ ತಾಲೂಕು ವ್ಯಾಪ್ತಿಯಲ್ಲಿ ನಡೆಸಿರುವ ಸರ್ವೆ ಕಾರ್ಯದಲ್ಲಿ, ಭೂ ಕುಸಿತ ಸಂಭವಿಸಬಹುದಾದ ಸ್ಥಳಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕಾರ್ಯ ಕೈಗೊಳ್ಳಲು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕಿಗೆ ರೂ. ೪.೭೨ ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ತಿಳಿಸಿದರು.

ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೬೬.೮೦ ಲಕ್ಷ ಹಾಗೂ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೭೬.೧೫ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ತಡೆಗೋಡೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಳೆದ ೨೦೧೮ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಭೂ ಕುಸಿತದಿಂದ ಹಲವಷ್ಟು ಕಷ್ಟನಷ್ಟಗಳು ಉಂಟಾಗಿವೆ. ಈ ಹಿನ್ನೆಲೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದಿAದ ಪ್ರತ್ಯೇಕ ತಂಡ ಜಿಲ್ಲೆಗೆ ಆಗಮಿಸಿ ಅಲ್ಲಲ್ಲಿ ಸರ್ವೆ ಕಾರ್ಯ ನಡೆಸಿದೆ. ಭವಿಷ್ಯದಲ್ಲಿ ಭೂ ಕುಸಿತ ಸಂಭವಿಸಬಹುದಾದ ಪ್ರದೇಶಗಳನ್ನು ಗುರುತಿಸಿ ಪರಿಹಾರ ಕಾರ್ಯಕ್ಕೆ ಸಲಹೆ ಸೂಚಿಸಿದೆ. ಈ ಹಿನ್ನೆಲೆ ಸರ್ಕಾರದಿಂದ ಕೊಡಗು ಜಿಲ್ಲೆಗೆ ಸರಿಸುಮಾರು ೩೨ ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾಗಿದೆ ಎಂದು ಮಂತರ್ ಗೌಡ ಹೇಳಿದರು.

ಸೋಮವಾರಪೇಟೆ ತಾಲೂಕಿಗೆ ೨.೦೬ ಕೋಟಿ, ಕುಶಾಲನಗರಕ್ಕೆ ೨.೬೬ ಕೋಟಿ ಅನುದಾನ ಈಗಾಗಲೇ ಬಿಡುಗಡೆಯಾಗಿದ್ದು, ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಲೋಕೋಪಯೋಗಿ, ಜಿಲ್ಲಾ ಪಂಚಾಯತ್, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯಲಿದೆ. ಮಡಿಕೇರಿ ತಾಲೂಕು ವ್ಯಾಪ್ತಿಯ ಆಯ್ದ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.

ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮೂಲಕ ಕಾಮಗಾರಿಗೆ ಸ್ಥಳಗಳನ್ನು ಗುರುತಿಸಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ. ಕೆಲವೆಡೆ ಸ್ಥಳೀಯರಿಗೆ ಮಾಹಿತಿ ನೀಡಿಲ್ಲ; ಅವಶ್ಯವಿರುವ ಸ್ಥಳಗಳಲ್ಲಿ ಕಾಮಗಾರಿ ನಡೆಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈಗಾಗಲೇ ಗುರುತಿಸಿರುವ ಜಾಗಕ್ಕೆ ಜಿಪಿಎಸ್ ಆಗಿದ್ದು, ಬದಲಾವಣೆ ಸಾಧ್ಯವಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.

ಇದೀಗ ಗುರುತಿಸಿರುವ ಸ್ಥಳಗಳಿಗಿಂತಲೂ ಇನ್ನಷ್ಟು ಭೂ ಕುಸಿತ ಸಂಭವಿಸುವ ಸ್ಥಳಗಳು ಸಾಕಷ್ಟಿವೆ ಎಂದು ಸ್ಥಳೀಯರು ಶಾಸಕರ ಗಮನ ಸೆಳೆದ ಸಂದರ್ಭ, ಮುಂದಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಆದ್ಯತೆಯ ಮೇರೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕುಂದಳ್ಳಿ-ನಗರಳ್ಳಿ ರಸ್ತೆ ಬದಿ ತಡೆಗೋಡೆ ನಿರ್ಮಾಣಕ್ಕೆ ೧೮.೫೧ ಲಕ್ಷ, ಕುಂದಳ್ಳಿ ಗ್ರಾಮದ ದೀಣೆಮನೆ ಶಾಂತಪ್ಪ ಮನೆ ಸಮೀಪದ ತಡೆಗೋಡೆಗೆ ೧೨.೯೦ ಲಕ್ಷ, ಕುಂದಳ್ಳಿ ಮುಖ್ಯರಸ್ತೆ ಬದಿಗೆ ತಡೆಗೋಡೆ ನಿರ್ಮಾಣಕ್ಕೆ ೬.೭೧ ಲಕ್ಷ, ಕುಂದಳ್ಳಿ-ನಡ್ಲಮನೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ರಸ್ತೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ೨೮.೬೦ ಲಕ್ಷ ಸೇರಿದಂತೆ ಒಟ್ಟು ೬೬.೮೦ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶಾಸಕರು ಕಾಮಗಾರಿಗೆ ಚಾಲನೆ ನೀಡಿದರು.

ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತೋಳೂರು ಕಾಳಪ್ಪ ಮನೆ ಹತ್ತಿರದ ರಸ್ತೆಗೆ ತಡೆಗೋಡೆ ನಿರ್ಮಾಣಕ್ಕಾಗಿ ೨೦.೬೦, ಹೇಮರಾಜು ಮನೆ ಹತ್ತಿರದ ರಸ್ತೆಗೆ ಕಾಂಕ್ರೀಟ್ ತಡೆಗೋಡೆಗೆ ೮.೭೮, ದೊಡ್ಡತೋಳೂರು ಮುಖ್ಯರಸ್ತೆ ಬದಿ ತಡೆಗೋಡೆ ನಿರ್ಮಾಣಕ್ಕೆ ೩೨.೭೧ ಲಕ್ಷ, ಚಂದ್ರಾಜು ಅವರ ಮನೆ ಹತ್ತಿರದ ರಸ್ತೆಗೆ ತಡೆಗೋಡೆ ನಿರ್ಮಾಣಕ್ಕೆ ೧೪.೦೬ ಲಕ್ಷ ಅನುದಾನ ಸೇರಿದಂತೆ ಒಟ್ಟು ೭೬.೧೫ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಡಾ. ಮಂತರ್ ಅವರು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ಕಾಮಗಾರಿಗೆ ರೂ. ೬೩.೮೫ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.

ಗ್ರಾಮೀಣ ಪ್ರದೇಶಕ್ಕೆ ಶಾಸಕರು ತೆರಳಿದ ಸಂದರ್ಭ ಸ್ಥಳೀಯರು ರಸ್ತೆ, ಚರಂಡಿ, ಮೋರಿಗಳ ನಿರ್ಮಾಣಕ್ಕೆ ಮನವಿ ಸಲ್ಲಿಸಿದರು. ತಕ್ಷಣ ಅವಶ್ಯಕವಿರುವ ಸ್ಥಳಗಳಲ್ಲಿ ಸೋಲಿಂಗ್ ಹಾಕಿ ರಸ್ತೆ ನಿರ್ಮಿಸಬೇಕು. ಮಳೆ ಮುಗಿದ ನಂತರ ಡಾಂಬರೀಕರಣ ಮಾಡಲು ಕ್ರಮ ವಹಿಸುವಂತೆ ಸ್ಥಳದಲ್ಲಿದ್ದ ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ನಾರಾಯಣಮೂರ್ತಿ, ಇಂಜಿನಿಯರ್ ಕೀರ್ತನ್ ಅವರುಗಳಿಗೆ ಶಾಸಕರು ಸೂಚಿಸಿದರು.

ಭೂಮಿ ಪೂಜೆ ಸಂದರ್ಭ ಮುಖಂಡರಾದ ಬಿ.ಬಿ. ಸತೀಶ್, ಚೌಡ್ಲು ಚೇತನ್, ವಿನು, ಡಿ.ಯು. ಕಿರಣ್, ವಿನೋದ್, ಗುಡ್ಡಳ್ಳಿ ಮಧುಕುಮಾರ್, ಸ್ಥಳೀಯ ಮುಖಂಡರಾದ ಕುಂದಳ್ಳಿ ದಿನೇಶ್, ಕೆ.ಎಸ್. ಲಿಂಗರಾಜು, ನಗರಳ್ಳಿ ಸುರೇಶ್, ರವಿ, ಪ್ರಸಾದ್, ಮಂಜುನಾಥ್, ಪ್ರದೀಪ್, ಪ್ರವೀಣ್, ಪೃಥ್ವಿ, ತೋಳೂರುಶೆಟ್ಟಳ್ಳಿಯ ಕೆ.ಯು. ಜಗದೀಶ್, ಡಿ.ಎಸ್. ಸುರೇಶ್, ಜಿ.ಎಸ್. ಚಿನ್ನಪ್ಪ, ಹೆಚ್.ಡಿ. ಶಾಂತಪ್ಪ, ವಿಜಯಕುಮಾರ್, ಹೆಚ್.ಕೆ. ಗುರಪ್ಪ, ಜಾನಕಿ ವೆಂಕಟೇಶ್, ಟಿ.ಈ. ಸುರೇಶ್ ಸೇರಿದಂತೆ ಇತರರು ಇದ್ದರು.