ಗೋಣಿಕೊಪ್ಪಲು, ಮೇ ೨೩: ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ ಪ್ರಕರಣಗಳು ವರದಿಯಾಗುತ್ತಿದ್ದು, ಪೊನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟಂದಿ ಗ್ರಾಮದ ಬಲ್ಲಡಿಚಂಡ ವಿಜು ಕುಶಾಲಪ್ಪ ಅವರಿಗೆ ಸೇರಿದ ಹಸು ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ.
ಘಟನಾ ಸ್ಥಳಕ್ಕೆ ಸ್ಥಳೀಯ ಬಿ.ಜೆ.ಪಿ ಪ್ರಮುಖರು ಭೇಟಿ ನೀಡಿ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.
ಜಿಲ್ಲಾ ಬಿ.ಜೆ.ಪಿ ಕೃಷಿ ಮೋರ್ಚಾದ ಅಧ್ಯಕ್ಷ ರಂಜಿ ಪೂಣಚ್ಚ ಮಾತನಾಡಿ, ಈ ಭಾಗದಲ್ಲಿ ಆನೆ ಮತ್ತು ಹುಲಿಗಳ ದಾಳಿ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಮತ್ತು ಸರ್ಕಾರವನ್ನು ಆಗ್ರಹಿಸಿದರು.
ಸ್ಥಳೀಯ ಬಿಜೆಪಿ ಪ್ರಮುಖರಾದ ಲಾಲಭೀಮಯ್ಯ ಮಾತನಾಡಿ, ಇತ್ತೀಚೆಗೆ ಈ ಭಾಗದಲ್ಲಿ ಹುಲಿಯ ಚಲನವಲನ ಇರುವ ಬಗ್ಗೆ ಮಾಹಿತಿ ನೀಡಿದ್ದರೂ ಅರಣ್ಯ ಇಲಾಖೆ ನಿರ್ಲಕ್ಷö್ಯ ವಹಿಸಿರುವುದು ಇಂತಹ ಘಟನೆ ಮರುಕಳಿಸಲು ಕಾರಣವಾಗಿದೆ ಎಂದು ದೂರಿದರು.
ಅರಣ್ಯ ಇಲಾಖೆ ತಕ್ಷಣ ಕ್ಯಾಮರಗಳನ್ನು ಅಳವಡಿಸಿ, ಕೂಂಬಿAಗ್ ನಡೆಸಿ ಹುಲಿಯನ್ನು ಸೆರೆಹಿಡಿಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿ ಶ್ರೀಧರ್ ಮಾತನಾಡಿ, ಘಟನೆಯ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುವ ಮೂಲಕ ಆದಷ್ಟು ಬೇಗನೇ ಸೂಕ್ತ ಸ್ಥಳಗಳಲ್ಲಿ ಕ್ಯಾಮರ ಅಳವಡಿಸಿ ಹುಲಿಯನ್ನು ಪತ್ತೆ ಹಚ್ಚುವ ಕಾರ್ಯ ಕೈಗೊಳ್ಳುವ ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮದ್ರೀರ ಗಿರೀಶ್, ಕೊಲ್ಲೀರ ಸಂಜು, ಕುಪ್ಪಂಡ ದಿಲನ್ ಹಾಜರಿದ್ದರು.