ಸುAಟಿಕೊಪ್ಪ, ಮೇ ೨೩: ಸಾಹಿತ್ಯಾಸಕ್ತರಿಗೆ ಕೊಡಗು ಜಿಲ್ಲೆಯಲ್ಲಿ ಎಲ್ಲಾ ರೀತಿಯಲ್ಲಿ ಪ್ರೋತ್ಸಾಹದಾಯಕ ವಾತಾವರಣ ಇದೆ. ಹೀಗಾಗಿಯೇ ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಪ್ರಕಾರಗಳು ಶ್ರೀಮಂತವಾಗಿ ಇದೆ ಎಂದು ಕೊಡಗು ಜಿಲ್ಲಾ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್ ಶ್ಲಾಘಿಸಿದ್ದಾರೆ.
ಹುಣಸೂರು ಬಳಿಯಲ್ಲಿ ನೆಲೆಸಿರುವ ಸುಂಟಿಕೊಪ್ಪ ಮೂಲದ ನಾಡಿನ ಹಿರಿಯ ಸಾಹಿತಿ ಅಬ್ದುಲ್ ರಶೀದ್ ತಾ. ೨೯ ಮತ್ತು ೩೦ ರಂದು ಸುಂಟಿಕೊಪ್ಪದಲ್ಲಿ ಆಯೋಜಿತ ಕನ್ನಡ ಸಾಹಿತ್ಯದ ೧೭ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು, ಈ ಹಿನ್ನೆಲೆ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿAದ ಅಬ್ದುಲ್ ರಶೀದ್ ಜೊತೆ ಅವರ ಆದಿವಾಸಿ ಫಾರ್ಮ್ನಲ್ಲಿ ಸಂವಾದ ಆಯೋಜಿಸಲಾಗಿತ್ತು. ಪತ್ರಕರ್ತರೊಂದಿಗಿನ ಸಂವಾದ ಸಂದರ್ಭ ಅಭಿಪ್ರಾಯ ವ್ಯಕ್ತಪಡಿಸಿದ ಅಬ್ದುಲ್ ರಶೀದ್, ಸುಂದರ ಕೊಡಗು ವಿಭಿನ್ನ ಧಾರ್ಮಿಕ, ಸಮುದಾಯಗಳ ಸಹಬಾಳ್ವೆಗೆ ಸಾಕ್ಷಿಯಾಗಿ ವಿಶಿಷ್ಟ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುವ ಜನರನ್ನು ಹೊಂದಿದೆ. ಶ್ರೀಮಂತಿಕೆಯ ಜತೆ ಕಡು ಬಡವರೂ ಕೊಡಗಿನಲ್ಲಿದ್ದಾರೆ. ಹೀಗಿದ್ದರೂ ಎಲ್ಲಾ ರೀತಿಯ ಜನರ ನಡುವೆ ಸೌಹಾರ್ದತೆ ಇದೆ. ಇದುವೇ ಕೊಡಗಿನ ಹೆಗ್ಗಳಿಕೆಯಾಗಿದೆ ಎಂದು ಹೆಮ್ಮೆಯಿಂದ ರಶೀದ್ ನುಡಿದರು.
ತಾನು ಹುಟ್ಟಿ ಬೆಳೆದ ಸುಂಟಿಕೊಪ್ಪದಲ್ಲಿ ಆಯೋಜಿತ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅಬ್ದುಲ್ ರಶೀದ್, ಕೊಡಗಿನ ಅನೇಕ ಪ್ರದೇಶಗಳಂತೆ ತಾನು ಆಡಿ ಬೆಳೆದ ಸುಂಟಿಕೊಪ್ಪದ ಬಗ್ಗೆ ಹಲವು ಸುಮಧುರ ನೆನಪುಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ತಾನು ಬಾಲ್ಯ ಕಳೆದ ತೋಟ ಹಾಗೂ ತಂದೆಯವರ ಮೈದಾನಿ (ಅಂತ್ಯಕ್ರಿಯೆ ಮಾಡಿದ ಸ್ಥಳ) ಇರುವ ಗದ್ದೆಹಳ್ಳದ ಬಳಿಯ ಸಭಾಂಗಣದಲ್ಲಿಯೇ ಆಯೋಜಿತ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿರುವುದು ಹೆಚ್ಚು ಸಂತೋಷ ತಂದಿದೆ ಎಂದರು.
ಕುವೆAಪು, ದೇವನೂರ ಮಹದೇವ, ತೇಜಸ್ವಿ, ಅನಂತಮೂರ್ತಿ, ಪಿ. ಲಂಕೇಶ್, ಎಂ.ಕೆ. ಇಂದಿರಾ, ಎಂ. ವ್ಯಾಸ, ಕೆ.ಟಿ. ಗಟ್ಟಿ, ಯಶವಂತ ಚೆತ್ತಾಲ, ಮಲೆಯಾಳದ ಖ್ಯಾತ ಲೇಖಕ ವೈಕಂ ಮಹಮ್ಮದ್ ಬಷೀರ್ ತನ್ನ ಸಾಹಿತ್ಯದ ಮೇಲೆ ಪ್ರಭಾವ ಬೀರಿದ ಲೇಖಕರಾಗಿದ್ದಾರೆ ಎಂದು ಅಬ್ದುಲ್ ರಶೀದ್ ಈ ಸಂದರ್ಭ ಹೇಳಿದರು..
ಯುವಪೀಳಿಗೆ ಸಾಹಿತ್ಯ ಪ್ರಕಾರಗಳನ್ನು ಓದುತ್ತಿಲ್ಲ ಎಂಬ ವಾದವನ್ನು ಅಲ್ಲಗೆಳೆದ ಅಬ್ದುಲ್ ರಶೀದ್, ಆಧುನಿಕತೆಯ ನಾಗಾಲೋಟದಲ್ಲಿ ಸಾಹಿತ್ಯ ಓದಲು ನಾನಾ ಮಾಧ್ಯಮಗಳಿದೆ. ಇದನ್ನು ಬಳಸಿಕೊಂಡವರು ಸಾಹಿತ್ಯವನ್ನು ತಮಗೆ ನಿಲುಕುವ ನವ ಮಾಧ್ಯಮಗಳ ಮೂಲಕ ಓದುತ್ತಿದ್ದಾರೆ. ಸಾಹಿತ್ಯಕ್ಕೆ ಸಂಬAಧಿಸಿದAತೆ ಕಾಲ ಹಾಳಾಗಿದೆ ಎಂದು ಖಂಡಿತಾ ಹೇಳಲಾಗದು. ಜನರು ಓದುವ ಮಾಧ್ಯಮ ಬದಲಾಗಿದೆ ಎಂಬುದು ವಾಸ್ತವ. ಪುಸ್ತಕದ ಬದಲಿಗೆ ಡಿಜಿಟಲ್ ಮಾಧ್ಯಮದ ಮೂಲಕ ಎಲ್ಲಾ ವಿಚಾರಗಳನ್ನೂ ಸಾಹಿತ್ಯ ಸೇರಿಕೊಂಡAತೆ ಓದುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಲೇಖಕರಿಗೆ ಹೊಸ ವಿಚಾರಗಳು ಇಂದಿನ ಕಾಲಘಟ್ಟದಲ್ಲಿ ಸಾಕಷ್ಟು ಲಭ್ಯವಿದೆ. ಆದರೆ ಮತ್ತೋರ್ವ ಲೇಖಕನ ಶೈಲಿಯನ್ನು ಅನುಕರಿಸಲು ಹೋಗದೆ ತನ್ನದೇ ಶೈಲಿಯಲ್ಲಿ ಬರೆಯುವ ಹವ್ಯಾಸವನ್ನೂ ಪ್ರತೀ ಹೊಸ ಲೇಖಕನೂ ರೂಢಿಸಿಕೊಂಡಾಗ ಆತನ ಸಾಹಿತ್ಯ ಶೈಲಿ ಬಹುಕಾಲ ಅಸ್ತಿತ್ವದಲ್ಲಿ ಇರುತ್ತದೆ ಎಂದೂ ಅವರು ಸಲಹೆ ನೀಡಿದರು.
೨೨ನೇ ವಯಸ್ಸಿನಲ್ಲಿಯೇ ತಾನು ಬರೆದ ಹಾಲುಕುಡಿದ ಹುಡುಗ ಎಂಬ ಸಣ್ಣ ಕಥೆ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಾಗ ಅನೇಕ ಲೇಖಕರು ಶ್ಲಾಘಿಸಿದ್ದರು. ಇದನ್ನೇ ಪ್ರೋತ್ಸಾಹವಾಗಿಸಿಕೊಂಡು ಈವರೆಗೆ ೬ ಕಥಾಸಂಕಲನಗಳು, ೨ ಕವನ ಸಂಕಲನ, ೬ ಅಂಕಣ ಬರಹಗಳೂ ಸೇರಿದಂತೆ ನಾನಾ ಕೃತಿಗಳನ್ನು ಪ್ರಕಟಿಸಿರುವುದಾಗಿ ರಶೀದ್ ಮಾಹಿತಿ ನೀಡಿದರು. ಹೆಸರಿನ ಮೂಲಕವಷ್ಟೇ ತನ್ನ ಧರ್ಮ ಕಂಡುಹಿಡಿಯಬಹುದಾಗಿದ್ದು, ತಾನು ಯಾವುದೇ ಧರ್ಮದ ಅನುಯಾಯಿಯೂ ಅಲ್ಲ ಎಂದೂ ಸಂವಾದ ಸಂದರ್ಭ ರಶೀದ್ ಸ್ಪಷ್ಟಪಡಿಸಿದರು. ಕೇರಳ ಮೂಲದ ಪತ್ನಿ ಮೋಳಿ ವರ್ಗಿಸ್, ತನ್ನ ಕಥೆಗಳನ್ನು ಮಲೆಯಾಳಕ್ಕೆ ಅನುವಾದಿಸಿದ್ದು ಸದ್ಯದಲ್ಲಿಯೇ ಅವು ಪ್ರಕಟವಾಗಲಿದೆ ಎಂದೂ ರಶೀದ್ ಮಾಹಿತಿ ನೀಡಿದರು. ಆಕಾಶವಾಣಿಯ ವಿವಿಧ ಕೇಂದ್ರಗಳಲ್ಲಿ ಸುದೀರ್ಘ ೩೬ ವರ್ಷಗಳು ಕಾರ್ಯ ನಿರ್ವಹಿಸಿರುವ ಅಬ್ದುಲ್ ರಶೀದ್ ಮಡಿಕೇರಿ ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದ್ದ ೬ ವರ್ಷಗಳಲ್ಲಿ ಕಾವೇರಿ ಎಕ್ಸ್ಪ್ರೆಸ್, ಹಳ್ಳಿ ರೇಡಿಯೋ, ಗಿರಿಜನ ಸಂಗೀತ ಸಭಾ, ಕಾಡಿನ ಮಕ್ಕಳ ರೇಡಿಯೋ ಹಬ್ಬ ಸೇರಿದಂತೆ ವಿವಿಧ ವಿನೂತನ ಕಾರ್ಯಕ್ರಮಗಳನ್ನು ರೂಪಿಸಿದ್ದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ., ಕೊಡಗು ಪತ್ರಿಕಾಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್, ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ. ದಿನೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ. ವಿನ್ಸೆಂಟ್, ಖಜಾಂಚಿ ಕೆ.ಎಸ್. ಅನಿಲ್ ಕುಮಾರ್, ನಿರ್ದೇಶಕರಾದ ನವೀನ್ ಚಿಣ್ಣಪ್ಪ, ಬಿ.ಎನ್., ರವಿಕುಮಾರ್ ಸಂವಾದದಲ್ಲಿ ಹಾಜರಿದ್ದರು.