ವೀರಾಜಪೇಟೆ, ಮೇ ೨೩: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ವೀರಾಜಪೇಟೆ ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ವಾಹನ ಪಾರ್ಕಿಂಗ್ಗೆ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಸ್ಥಳೀಯ ಆಡಳಿತ ನಿರ್ಲಕ್ಷö್ಯ ವಹಿಸುತ್ತಿದೆ ಎಂದು ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಶಾಖೆ ಆರೋಪಿಸಿದೆ.
ಸ್ಥಾನೀಯ ಅಧ್ಯಕ್ಷ ಮಾದಪಂಡ ಕಾಶಿ ಕಾವೇರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವರ್ತಕರು ಹಾಗ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಬದಲಿ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯ ಕೇಳಿ ಬಂತು.
ಸ್ಥಳೀಯ ಸರ್ವೋದಯ ಕಾಲೇಜಿನಿಂದ ಕಲ್ಲುಬಾಣೆ ಮಾರ್ಗವಾಗಿ ಮಲಬಾರ್ ರಸ್ತೆಗೆ ಬದಲಿ ಬೈಪಾಸ್ ರಸ್ತೆ ರಚನೆಯಾಗಬೇಕು, ಗೋಣಿಕೊಪ್ಪ ರಸ್ತೆಯಿಂದ ಬಿಟ್ಟಂಗಾಲ ಮಾರ್ಗವಾಗಿ ಮಡಿಕೇರಿ ಕಡೆಗೆ ಹೋಗುವ ವಾಹನಗಳಿಗೆ ದೊಡ್ಡಟ್ಟಿ ಚೌಕಿ-ಶಾಂತ ಚಿತ್ರಮಂದಿರ-ಮಠದ ಗದ್ದೆಯ ಪೆಟ್ರೋಲ್ ಬಂಕ್-ಮಡಿಕೇರಿ ರಸ್ತೆಗೆ ಬೈಪಾಸ್ ರಸ್ತೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕೆಂದು ಸದಸ್ಯರು ಒತ್ತಾಯಿಸಿದರು.
ವೀರಾಜಪೇಟೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗೆಂದು ಅಗೆದಿರುವ ರಸ್ತೆಗಳನ್ನು ಕೂಡಲೇ ಸರಿಪಡಿಸುವಂತೆ ಸಂಬAಧಪಟ್ಟ ಗುತ್ತಿಗೆದಾರರಿಗೆ ಸೂಚಿಸುವಂತೆ ಆಗ್ರಹಿಸಿದರು.
ಫುಟ್ಪಾತ್ ಮತ್ತು ಗಾಡಿ ವ್ಯಾಪಾರಿಗಳು ಹೆಚ್ಚಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತಿದೆೆ. ಕೆಲವು ಅಂಗಡಿಗಳು ಕಾಲುದಾರಿಗಳನ್ನು ಆಕ್ರಮಿಸಿಕೊಂಡಿದ್ದು, ಇವುಗಳನ್ನು ಕೂಡಲೇ ತೆರವುಗೊಳಿಸಬೇಕು.
ಗೋಣಿಕೊಪ್ಪ ರಸ್ತೆಯ ಸೆರೆನಿಟಿ ಹಾಲ್ ಮುಂಭಾಗದ ಫುಟ್ಪಾತ್ನ ಅಳತೆ ಹೆಚ್ಚಿಸಿ ರಸ್ತೆ ಕಿರಿದಾಗಿ ಮಾಡಿರುವುದು ಅವೈಜ್ಞಾನಿಕವಾಗಿದ್ದು, ಕೂಡಲೇ ಪುನರ್ ಪರಿಶೀಲಿಸಿ ಕ್ರಮಕೈಗೊಳ್ಳಬೇಕು.
ದೊಡ್ಡಟ್ಟಿ ಚೌಕಿ ಸೇರಿದಂತೆ ಪ್ರಮುಖ ಜಂಕ್ಷನ್ಗಳಲ್ಲಿ ನಿರುಪಯುಕ್ತ ಬೀದಿ ದೀಪಗಳ ಕಂಬಗಳಿದ್ದು, ಕೂಡಲೇ ತೆರವುಗೊಳಿಸಬೇಕೆಂದು ಪ್ರಮುಖರು ಬೇಡಿಕೆ ಮುಂದಿಟ್ಟರು.
ವೀರಾಜಪೇಟೆಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋ ನಿರ್ಮಾಣ ಯೋಜನೆ ಚರ್ಚೆಯಲ್ಲಿದ್ದು, ಅದನ್ನು ಕಾರ್ಯಗತಗೊಳಿಸಬೇಕೆಂಬ ಆಗ್ರಹ ವ್ಯಕ್ತವಾಯಿತು.
ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಜಿಲ್ಲಾ ಉಪಾಧ್ಯಕ್ಷ ರವಿ ಉತ್ತಪ್ಪ, ನಿರ್ದೇಶಕರುಗಳಾದ ಕರ್ನಂಡ ರಘು ಸೋಮಯ್ಯ, ಪಟ್ರಪಂಡ ರಘು ನಾಣಯ್ಯ, ಬಿ.ಎಂ. ಸುರೇಶ್, ಮಂಜುನಾಥ್, ಸ್ಥಾನೀಯ ಉಪಾಧ್ಯಕ್ಷ ಶಾಹುಲ್ ಹಮೀದ್ ಹಾಜರಿದ್ದರು.