ಪೊನ್ನಂಪೇಟೆ, ಮೇ ೨೩: ಮಂಡ್ಯ ಕೃಷಿ ವಿಶ್ವವಿದ್ಯಾಲಯ, ಮಡಿಕೇರಿ ವಿಸ್ತರಣಾ ಶಿಕ್ಷಣ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ರೇನ್ ಫಾರೆಸ್ಟ್ ಅಲೈನ್ಸ್ ಮತ್ತು ಭೈಫ್ ಸಬಲ ಯೋಜನೆಗಳ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜೇನುನೊಣ ದಿನಾಚರಣೆಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎ. ಬಿ. ಪಾಟೀಲ್ ಅವರು ಜೇನುತುಂಬಿದ ಎರಿಯನ್ನು ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಜೇನುಗಳು ಕೃಷಿ ಹಾಗೂ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ರೈತರಿಗೆ ಆರ್ಥಿಕವಾಗಿ ಸಹಕಾರಿ ಆಗುವ ಜೇನು ಕೃಷಿಯನ್ನು ಇನ್ನಷ್ಟು ಉತ್ತೇಜಿಸುವ ಅಗತ್ಯವಿದ್ದು, ಜೇನುತುಪ್ಪದ ಗುಣಮಟ್ಟ ನಿರ್ಧರಿಸಲು ತೇವಾಂಶದ ಪ್ರಮಾಣ, ರಿಡ್ಯೂಸಿಂಗ್ ಶುಗರ್ ಹಾಗೂ ಫ್ರುಕ್ಟೋಸ್-ಗ್ಲುಕೋಸ್ ಅನುಪಾತದಂತಹ ಮಾನದಂಡಗಳು ಪ್ರಮುಖವಾಗಿವೆ. ಗುಣಮಟ್ಟದ ಉತ್ಪನ್ನಗಳು ಮಾತ್ರ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ ಎಂದ ಹೇಳಿದರು.
ರಾಜ್ಯದ ಕರಾವಳಿ, ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳು ಜೇನು ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಜೊತೆಗೆ ವಲಸೆ ಆಧಾರಿತ ಜೇನು ಕೃಷಿಯ ಮೂಲಕ ಉತ್ತರ ಕರ್ನಾಟಕ ಭಾಗಗಳಾದ ವಿಜಯಪುರ, ಬಾಗಲಕೋಟೆ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿಯೂ ಉತ್ಪಾದನೆ ನಡೆಯುತ್ತಿದೆ. ಕೆಲಸದ ಜೇನು ನೊಣಗಳ ಜೀವನಾವಧಿ ಸಾಮಾನ್ಯವಾಗಿ ೪೦ರಿಂದ ೪೫ ದಿನಗಳಷ್ಟಿದ್ದು, ಅವು ತಮ್ಮ ಜೀವಿತಾವಧಿಯಲ್ಲಿ ಒಂದೂವರೆ ಲಕ್ಷ ಹೂವಿನ ಪರಾಗಸ್ಪರ್ಶ ಕಾರ್ಯದಲ್ಲಿ ತೊಡಗಿಕೊಳ್ಳುತ್ತವೆ. ಸ್ಥಳೀಯ ಜೇನು ಜಾತಿಗಳ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ಬ್ರಾö್ಯಂಡಿAಗ್, ಗುಣಮಟ್ಟದ ಪ್ರಮಾಣೀಕರಣ ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಅಗತ್ಯವಾಗಿದ್ದು, ತೋಟಗಾರಿಕೆ ಇಲಾಖೆಯ ವತಿಯಿಂದ ಜೇನು ಉತ್ಪಾದಕರ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವ ಅಗತ್ಯವಿದೆ ಎಂದರು.
ಸ್ಥಳೀಯ ಜೇನು ಉತ್ಪನ್ನಗಳ ಗುಣಮಟ್ಟ ಗುರುತಿಸುವಿಕೆ, ಮೌಲ್ಯವರ್ಧನೆ ಹಾಗೂ ಬ್ರಾö್ಯಂಡಿAಗ್ ಮೂಲಕ ಜೇನು ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ರೂಪಿಸಬಹುದಾಗಿದೆ. ಜೇನು ಉತ್ಪನ್ನಗಳ ಗುಣಮಟ್ಟ ನಿರ್ವಹಣೆ, ರಫ್ತು ಹಾಗೂ ಆಧುನಿಕ ಮಾರುಕಟ್ಟೆ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು.
ಸಣ್ಣ ರೈತರು ಮತ್ತು ಬುಡಕಟ್ಟು ಪ್ರದೇಶದ ಕೃಷಿಕರಿಗೆ ನೋಂದಣಿ ಪ್ರಕ್ರಿಯೆ ಸವಾಲಾಗಿರುವುದರಿಂದ ಸರ್ಕಾರದ ಸಹಾಯ ಹಾಗೂ ಪರೀಕ್ಷಾ ಶುಲ್ಕದಲ್ಲಿ ಸೌಲಭ್ಯ ನೀಡಬೇಕು. ತುಡುವೆ ಜೇನು ಸಾಕಾಣಿಕೆಯ ಮಹತ್ವವನ್ನು ತಿಳಿಸಿದ ಅವರು, ಇವು ಪರಾಗಸ್ಪರ್ಶ ಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಕೆಲವು ಬೆಳೆಗಳಲ್ಲಿ ಉತ್ಪಾದನೆಯನ್ನು ಶೇ.೨೫ ರಿಂದ ಶೇ.೭೦ರವರೆಗೆ ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ ಎಂದು ತಿಳಿಸಿದರು.
ಜೇನು ಕೃಷಿಯ ಮೂಲಕ ಕೇವಲ ಜೇನು ಉತ್ಪಾದನೆ ಮಾತ್ರವಲ್ಲದೆ ರಾಯಲ್ ಜೆಲ್ಲಿ, ವೆನಮ್ ಎಕ್ಸಾ÷್ಟçಕ್ಟ್, ವ್ಯಾಕ್ಸ್ ಉತ್ಪನ್ನಗಳು ಸೇರಿದಂತೆ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಮೂಲಕ ರೈತರು ಹೆಚ್ಚಿನ ಆದಾಯ ಗಳಿಸಬಹುದು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜೇನು ಸಾಕಾಣಿಕೆಗೆ ಇರುವ ಅವಕಾಶಗಳು ಮತ್ತು ಸವಾಲುಗಳ ಕುರಿತು ಮಾಹಿತಿ ನೀಡಿದ ಪಾಟೀಲ ಅವರು, ನಗರ ಪ್ರದೇಶಗಳಲ್ಲಿ ಕೀಟನಾಶಕ ಸಿಂಪಡಣೆ ಜೇನು ನೊಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜೇನು ನೊಣಗಳ ಬಗ್ಗೆ ಜನರಲ್ಲಿ ಇರುವ ಭಯ ಮತ್ತು ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು ಜಾಗೃತಿ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.
ಹೊಸಬರಿಗೆ ಜೇನು ಕೃಷಿಯಲ್ಲಿ ಯಶಸ್ಸು ಸಾಧಿಸಲು ಕೇವಲ ಅಲ್ಪಾವಧಿಯ ತರಬೇತಿ ಸಾಕಾಗುವುದಿಲ್ಲ. ಕನಿಷ್ಟ ೮ ರಿಂದ ೧೫ ದಿನಗಳವರೆಗೆ ಪ್ರಾಯೋಗಿಕ ತರಬೇತಿ ಮತ್ತು ಮಾರ್ಗದರ್ಶನ ನೀಡುವುದು ಅಗತ್ಯ ಎಂದು ಪಾಟೀಲ್ ಅವರು ವಿವರಿಸಿದರು.
ಮಹತ್ವದ ಪಾತ್ರ : ಡಾ. ಬಸವರಾಜು
ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕ ಡಾ. ಬಸವರಾಜು ಮಾತನಾಡಿ, ಜೇನುಗಳ ಪಾತ್ರವು ಜೇನುತುಪ್ಪ ಉತ್ಪಾದನೆಗೆ ಮಾತ್ರ ಸೀಮಿತವಾಗಿಲ್ಲ. ಅವು ಕೃಷಿ ಉತ್ಪಾದನೆ ಮತ್ತು ಆಹಾರ ಸರಪಳಿಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ. ಜೇನುಗಳು ಪರಾಗಸ್ಪರ್ಶ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಆಹಾರ ಉತ್ಪಾದನೆ ಹೆಚ್ಚುವುದರ ಜೊತೆಗೆ ಜೀವವೈವಿಧ್ಯತೆಯ ಸಂರಕ್ಷಣೆಯಲ್ಲಿಯೂ ನೆರವಾಗುತ್ತವೆ. ಜೇನುಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸುವುದು, ಪರಿಸರಸ್ನೇಹಿ ಕ್ರಮಗಳನ್ನು ಅನುಸರಿಸುವುದು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಜೇನು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಪುನಶ್ಚೇತನ ಹಾದಿಯಲ್ಲಿ ಜೇನುಕೃಷಿ : ಗಂಗಾ
ಭೈಪ್ ಕೊಡಗು ಜಿಲ್ಲಾ ಉಸ್ತುವಾರಿ ಗಂಗಾ ಅಂಕದ್ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಜೇನು ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ವಿವಿಧ ಯೋಜನೆಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ತಾಂತ್ರಿಕ ಸಹಾಯ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿದ್ದು, ರೈತರು ಹಾಗೂ ಬುಡಕಟ್ಟು ಸಮುದಾಯದವರಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಜೇನು ಕೃಷಿಯ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ. ೨೦೦೮ ರಿಂದಲೇ ಜಿಲ್ಲೆಯಲ್ಲಿ ಜೇನು ಕೃಷಿಗೆ ಸಂಬAಧಿಸಿದ ಪ್ರೋತ್ಸಾಹ ಕಾರ್ಯಕ್ರಮಗಳು ನಡೆಯುತ್ತಿದ್ದು, ಜೇನು ಕೃಷಿಯ ಮೂಲಕ ರೈತರು ಹಾಗೂ ಗ್ರಾಮೀಣ ಕುಟುಂಬಗಳಿಗೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಹಲವು ಸಂಸ್ಥೆಗಳ ಸಹಭಾಗಿತ್ವದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ವಿವರಿಸಿದರು.
ರೈತರಿಗೆ ಪ್ರೋತ್ಸಾಹದ ಭಾಗವಾಗಿ ಆರಂಭಿಕ ಹಂತದಲ್ಲಿ ಒಂದು ರಿಂದ ಮೂರು ಜೇನು ಪೆಟ್ಟಿಗೆಗಳನ್ನು ವಿತರಿಸಲಾಗಿತ್ತು. ಬಳಿಕ ಕೆಲವು ರೈತರು ಮತ್ತು ಕುಟುಂಬಗಳು ತಮ್ಮ ಸಾಕಾಣಿಕೆಯನ್ನು ವಿಸ್ತರಿಸಿ ೨೦ ರಿಂದ ೪೦ಕ್ಕೂ ಅಧಿಕ ಜೇನು ಪೆಟ್ಟಿಗೆಗಳನ್ನು ಹೊಂದುವ ಮಟ್ಟಕ್ಕೆ ಬೆಳೆದಿರುವುದು ಗಮನಾರ್ಹ ಸಾಧನೆಯಾಗಿದೆ ಎಂದು ತಿಳಿಸಿದರು. ಜೇನು ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು, ಜೇನುತುಪ್ಪಕ್ಕೆ ರೂ.೮೦೦ ರಿಂದ ರೂ.೧೦೦೦ರವರೆಗೆ ಬೆಲೆ ದೊರೆಯುತ್ತಿದೆ. ಜೇನು ಕೃಷಿಯನ್ನು ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳ ಆದಾಯ ವೃದ್ಧಿ ಹಾಗೂ ಉದ್ಯಮವಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಸAಶೋಧನೆ, ತರಬೇತಿಗೆ ಯೋಜನೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಜಿ.ಎಂ. ದೇವಗಿರಿ ಮಾತನಾಡಿ, ಜೇನು ಕೃಷಿಯ ಅಭಿವೃದ್ಧಿಗೆ ಕಳೆದ ಹಲವು ವರ್ಷಗಳಿಂದ ಕೈಗೊಳ್ಳಲಾಗುತ್ತಿರುವ ತರಬೇತಿ, ಸಂಶೋಧನೆ ಹಾಗೂ ರೈತಪರ ಯೋಜನೆಗಳು ಉತ್ತಮ ಫಲಿತಾಂಶ ನೀಡುತ್ತಿದ್ದು, ರೈತರಲ್ಲಿ ಜೇನು ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿದೆ. ಅರಣ್ಯ ಮಹಾವಿದ್ಯಾಲಯ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಕಳೆದ ೧೦ ರಿಂದ ೧೫ ವರ್ಷಗಳಿಂದ ಜೇನು ಕೃಷಿಗೆ ಸಂಬAಧಿಸಿದAತೆ ನಿರಂತರ ತರಬೇತಿ ಕಾರ್ಯಕ್ರಮಗಳು ಮತ್ತು ಜಾಗೃತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ರೈತರಿಗೆ ಜೇನು ಸಾಕಾಣಿಕೆಗೆ ಅಗತ್ಯವಾದ ಮೂಲಭೂತ ಪರಿಕರಗಳು ಹಾಗೂ ತಾಂತ್ರಿಕ ಮಾಹಿತಿಯನ್ನು ಒದಗಿಸುವ ಕೆಲಸ ನಡೆಯುತ್ತಿದೆ ಎಂದರು.
ನೆಸ್ಲೆ, ರೇನ್‌ಫಾರೆಸ್ಟ್ ಅಲೆಯನ್ಸ್ ಹಾಗೂ ಬಿವೈಎಫ್ ಸಹಯೋಗದೊಂದಿಗೆ ರೈತರಿಗೆ ಸುಮಾರು ೩೦೦೦ ಜೇನು ಪೆಟ್ಟಿಗೆಗಳು ಮತ್ತು ಜೇನು ಗೂಡುಗಳನ್ನು ವಿತರಿಸಲಾಗಿದೆ. ಇದರ ಫಲವಾಗಿ ಕೆಲವು ರೈತರು ಒಂದು ಪೆಟ್ಟಿಗೆಯಿಂದ ಆರಂಭಿಸಿ ತಮ್ಮ ಸಾಕಾಣಿಕೆಯನ್ನು ೫೦ ರಿಂದ ೭೫ ಪೆಟ್ಟಿಗೆಗಳವರೆಗೆ ವಿಸ್ತರಿಸಿರುವುದು ಗಮನಾರ್ಹ ಸಾಧನೆಯಾಗಿದೆ ಎಂದರು.
ಮಡಿಕೇರಿ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್. ಎನ್. ಕೆಂಚರೆಡ್ಡಿ ಅವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭ ಜೇನು ಕೃಷಿಯಲ್ಲಿ ಯಶಸ್ಸು ಸಾಧಿಸುತ್ತಿರುವ, ಕೊಡಗಿನ ಪ್ರಗತಿಪರ ಜೇನು ಕೃಷಿಕರಾದ ಮಾಯಮುಡಿ ಗ್ರಾಮದ ಮನೋಜ್ ಕುಮಾರ್, ವೀರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದ ಶೈಲಜ್ ಕುಮಾರ್, ಶ್ರೀಮಂಗಲ ಹೋಬಳಿಯ ಕುಮಟೂರು ಗ್ರಾಮದ ಸೂರಜ್ ಪಿ.ಎಸ್. ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕದ ಸಹ ಪ್ರಾಧ್ಯಾಪಕ ಡಾ. ಹೇಮಂತ್ ಕುಮಾರ್, ಅರಣ್ಯ ಮಹಾವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
ತಾನ್ವಿ ಸ್ವಾಗತ ನೃತ್ಯ ಮಾಡಿದರು. ಡಾ. ಪ್ರಶಾಂತ್ ವಂದಿಸಿ, ಬಿ.ಪಿ. ಹಾಲಮ್ಮ ಹಾಗೂ ಕೆ. ಮಾನಸ ನಿರೂಪಿಸಿದರು. ವರದಿ : ಚನ್ನನಾಯಕ