ಮಡಿಕೇರಿ. ಮೇ ೨೩: ಮಡಿಕೇರಿ ನಗರಸಭೆಯಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದು ೪ ವರ್ಷ ಕಳೆದರೂ ಯಾವದೇ ಅಭಿವೃದ್ಧಿ ಕೆಲಸಗಳಾಗಿಲ್ಲವೆಂದು ಆರೋಪಿಸಿರುವ ನಗರ ಕಾಂಗ್ರೆಸ್ ಸಮಿತಿ; ಬಿಜೆಪಿಯ ಆಡಳಿತ ವೈಫಲ್ಯವನ್ನು ಖಂಡಿಸಿ ತಾ.೨೬ರಂದು ಮಡಿಕೇರಿ ನಗರ ಸಭಾ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿAದು ಮಾತನಾಡಿದ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಎಸ್. ಪ್ರಕಾಶ್ ಆಚಾರ್ಯ; ಬಿಜೆಪಿ ಮೊದಲ ಆಡಳಿತಾವಧಿಯಲ್ಲಿ ಮನೆಯೊಂದು ಮೂರು ಬಾಗಿಲು ಎಂಬAತಾಗಿತ್ತು. ಇದೀಗ ಎರಡನೇ ಅವಧಿಯಲ್ಲೂ ಅದೇ ರೀತಿ ಮುಂದುವರಿದಿದೆ. ಆದರೆ ೧೬ ಮಂದಿ ಸದಸ್ಯರುಗಳ ನಡುವೆ ಹೊಂದಾಣಿಕೆ ಇಲ್ಲದೆ ಯಾವದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ನಗರೋತ್ಥಾನ ಕಾಮಗಾರಿ ಆರಂಭಿಸಲು ಶಾಸಕರು ಗಮನ ಹರಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದರು.

ಇದೀಗ ಮಳೆಗಾಲ ಆರಂಭವಾಗುತ್ತಿದ್ದು ಇನ್ನೂ ಕೂಡ ತೋಡು, ಚರಂಡಿ ದುರಸ್ತಿ, ರಸ್ತೆ ಬದಿ ಕಾಡು ಕಡಿಯುವ ಕೆಲಸಗಳಾಗಿಲ್ಲ, ಅಧ್ಯಕ್ಷರನ್ನು ಕೇಳಿದರೆ ಟೆಂಡರ್ ಆಗಿದೆ ಎಂದು ಹೇಳುತ್ತಾರೆ, ಮಳೆಗಾಲ ಶುರುವಾದರೆ ಕೆಲಸಗಳಾಗುವದಿಲ್ಲ, ಬೀದಿ ನಾಯಿಗಳಿಗೆ ಪಾಲನಾ ಕೇಂದ್ರ ತೆರೆದು ಶಸ್ತç ಚಿಕಿತ್ಸೆ ಕೊಡಿಸಿ ಆರೈಕೆ ಮಾಡುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದ್ದರೂ ಇನ್ನೂ ಕೂಡ ಆ ಕಾರ್ಯ ಆಗಿಲ್ಲ. ಅಮೃತ್-೨ ಯೋಜನೆ ಕಾಮಗಾರಿಯನ್ನು ಒಳಚರಂಡಿ ಮಂಡಳಿ ನಿರ್ವಹಿಸುತ್ತಿದೆ ಯಾದರೂ ಅದರ ಜವಾಬ್ದಾರಿ ನಗರಸಭೆ ಯದ್ದಾಗಿರುತ್ತದೆ. ಆದರೆ, ಸದಸ್ಯರೇ ಪ್ರತಿಭಟನೆ ನಡೆಸುವದಾಗಿ ಹೇಳಿಕೆ ನೀಡುತ್ತಿರುವದು ಹಾಸ್ಯಾಸ್ಪದವಾಗಿದ್ದು, ಇದರಲ್ಲಿಯೇ ಆಡಳಿತದಲ್ಲಿನ ಹೊಂದಾಣಿಕೆಯ ಕೊರತೆ ಕಾಣುತ್ತದೆ. ಕಸ ವಿಲೇವಾರಿ ಕಾರ್ಯವನ್ನು ಮೂರು ವರ್ಷದ ಹಿಂದೆಯೇ ಮಾಡಬೇಕಿತ್ತು. ಆದರೆ, ಹೊಂದಾಣಿಕೆ ಕೊರತೆಯಿಂದ ಆ ಕೆಲಸವೂ ಆಗದಿದ್ದ ಸಂದರ್ಭದಲ್ಲಿ ಶಾಸಕರು ಮುತುವರ್ಜಿ ವಹಿಸಿ ಇದೀಗ ವಿಲೇವಾರಿ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

೨೬ರಂದು ಪ್ರತಿಭಟನೆ

ಈ ಎಲ್ಲ ವಿಚಾರವನ್ನೊಳಗೊಂಡು ಬಿಜೆಪಿ ಪಕ್ಷದ ಆಡಳಿತ ವೈಫಲ್ಯವನ್ನು ಖಂಡಿಸಿ ತಾ. ೨೬ ರಂದು ನಗರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು. ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಮೂಲಕ ತೆರಳಿ ಪ್ರತಿಭಟನೆ ನಡೆಸಲಾಗುವದೆಂದು ಪ್ರಕಾಶ್ ತಿಳಿಸಿದರು.

ಗೋಷ್ಠಿಯಲ್ಲಿ ನಗರ ಉಪಾಧ್ಯಕ್ಷರುಗಳಾದ ಮುನೀರ್ ಮಾಚಾರ್, ಸದಾ ಮುದ್ದಪ್ಪ, ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್, ಪದಾಧಿಕಾರಿಗಳಾದ ಹೆಚ್.ಎಸ್. ಗೋಪಿನಾಥ್, ಮಿನಾಝ್ ಪ್ರವೀಣ್ ಇದ್ದರು.