ನಾಪೋಕ್ಲು, ಮೇ ೨೩: ಸಂಘಟನೆಯನ್ನು ಬಲಪಡಿಸಲು ಎಲ್ಲರ ಸಹಭಾಗಿತ್ವ ಮುಖ್ಯ ಎಂದು ಬೆಸ್ಕಾಂ ನಿವೃತ್ತ ಹಿರಿಯ ಲೆಕ್ಕಾಧಿಕಾರಿ ಬಿದ್ದಿಯಂಡ ನಂದ ಕರೆ ನೀಡಿದರು.

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಗೊಲ್ಲ ಸಮಾಜದ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಾಗಿ ಭಾಗವಹಿಸಿ ಮಾತನಾಡಿದ ಅವರು, ಜನಾಂಗದವರಿಗಾಗಿ ಏರ್ಪಡಿಸಲಾಗಿರುವ ಕ್ರೀಡಾಕೂಟಗಳಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡಾಗ ಸಂಘಟನೆ ಬಲವಾಗುತ್ತದೆ. ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ. ಸಂಘಟಕರು ಶ್ರಮವಹಿಸಿ ಕ್ರೀಡಾಕೂಟವನ್ನು ಆಯೋಜಿಸಿದ ಸಂದರ್ಭದಲ್ಲಿ ಎಲ್ಲರೂ ಸಹಕಾರ ಅತ್ಯಗತ್ಯ ಎಂದರು.

ಪಂದ್ಯಾಟವನ್ನು ನಿವೃತ್ತ ಸೈನಿಕ ಪೊಂಗೆರ ಜೀವನ್ ಬೋಪಣ್ಣ ಬ್ಯಾಟಿಂಗ್ ಮಾಡುವುದರ ಮೂಲಕ ಚಾಲನೆ ನೀಡಿದರು. ಕೊಡಗು ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷ ಅರೆಯಂಡ ರಘು ಭೀಮಯ್ಯ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಕ್ರೀಡಾ ಸಮಿತಿಯ ಅಧ್ಯಕ್ಷ ತೊತ್ತಿಯಂಡ ಅಜಂತ್ ನಾಣಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿವೃತ್ತ ಶುಶ್ರೂಷಕಿ ಪೊನ್ನುಕಂಡ ಉಷಾ ಹರೀಶ್, ಸಂಘದ ಉಪಾಧ್ಯಕ್ಷ ಪೈತಾಡಿಯಂಡ ಧರ್ಮ ರಾಜ್ ಗಣಪತಿ, ಕಾರ್ಯದರ್ಶಿ ಚೋಕಿರ ವಾಸುದೇವ, ಖಜಾಂಚಿ ಚೋಕಿರ ಬಾಬಿ ಭೀಮಯ್ಯ, ಸಹಕಾರ್ಯದರ್ಶಿ ಕೈಬಿಲೀರ ಮೀನಾ ಹಾಗೂ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.

ಎರಡು ದಿನಗಳ ಕಾಲ ಕ್ರೀಡಾಕೂಟ ಜರುಗಲಿದೆ. ಪುರುಷರಿಗೆ ಕ್ರಿಕೆಟ್ ಪಂದ್ಯಾಟ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟ ಹಾಗೂ ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆಗಳು ನಡೆಯಲಿವೆ. ಶನಿವಾರ ನಡೆದ ಕ್ರಿಕೆಟ್ ಕ್ರೀಡಾಕೂಟದಲ್ಲಿ ಅಯ್ಯಂಗೇರಿ ಗ್ರಾಮದ ಬಿದ್ದಿಯಂಡ ಮತ್ತು ಮಡಿಕೇರಿ ನಾಡು ಅರೆಯಂಡ ತಂಡಗಳು ಗೆದ್ದು ಫೈನಲ್ ಪ್ರವೇಶಿಸಿದ್ದು, ತಾ. ೨೪ ರಂದು (ಇಂದು) ಫೈನಲ್ ಪಂದ್ಯ ನಡೆಯಲಿದೆ. ಬೆಳಿಗ್ಗೆ ೯ ಗಂಟೆಗೆ ನಡೆಯಲಿರುವ ಫೈನಲ್ ಪಂದ್ಯದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷ ಅರೆಯಂಡ ರಘು ಭೀಮಯ್ಯ ವಹಿಸಲಿದ್ದು, ಶಾಸಕ ಎ.ಎಸ್ ಪೊನ್ನಣ್ಣ,, ಉದ್ಯಮಿ ಎಡಿಕೇರಿ ಪ್ರಸನ್ನ, ನಿವೃತ್ತ ಮುಖ್ಯ ಶಿಕ್ಷಕಿಯರಾದ ಪೈತಾಡಿಯಂಡ ಪೊನ್ನಮ್ಮ, ಕೈಬಿಲೀರ ಪಾರ್ವತಿ ಪಾಲ್ಗೊಳ್ಳಲಿದ್ದಾರೆ.