ಸುಂಟಿಕೊಪ್ಪ, ಮೇ.೨೩: ಸುಂಟಿಕೊಪ್ಪದಲ್ಲಿ ಕೊಡಗು ಜಿಲ್ಲಾ ೧೭ನೇ ಸಾಹಿತ್ಯ ಸಮ್ಮೇಳನವು ತಾ.೨೯ ಮತ್ತು ೩೦ ರಂದು ನಡೆಸಲು ಈಗಾಗಲೇ ಪೂರ್ವಸಿದ್ಧತೆಗಳು ನಡೆಯುತ್ತಿವೆ.
೨೦೧೫ರಲ್ಲಿ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ ನಡೆದ ಬಳಿಕ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದೇ ಹೆಸರಾದ ಸುಂಟಿಕೊಪ್ಪ ಇದೀಗ ಸಜ್ಜುಗೊಳ್ಳುತ್ತಿದೆ.
ಹಲವು ವೈಶಿಷ್ಟತೆಗಳನ್ನು ಹೊಂದಿರುವ ಸುಂಟಿಕೊಪ್ಪ ತನ್ನದೆಯಾದ ಇತಿಹಾಸವನ್ನು ಹೊಂದಿದೆೆ. ರಾಷ್ಟçಕವಿ ಕುವೆಂಪು, ದರಾ ಬೇಂದ್ರೆ, ಶಿವರಾಂ ಕಾರಂತ್, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸೇರಿದಂತೆ ಸಾಕಷ್ಟು ಕವಿ ಮಾನಿಯರು ಸುಂಟಿಕೊಪ್ಪ ಕನ್ನಡ ವೃತ್ತದ ಮೂಲಕವೇ ಗುಂಡುಗುಟ್ಟಿ ಮಂಜನಾಥಯ್ಯ ಅವರ ಮನೆಗೆ ಹಾದು ಹೋಗಿ ಭೇಟಿ ನೀಡಿ ತಂಗಿರುವ ಸಾಕಷ್ಟು ಪುರಾವೆಗಳು ಇದ್ದು ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಈ ಕನ್ನಡ ವೃತ್ತಕ್ಕೆ ೪ ದಶಕಗಳ ಇತಿಹಾಸವಿದ್ದು, ಕಳೆದ ೩೨ ವರ್ಷಗಳಿಂದ ಕನ್ನಡ ರಾಜ್ಯೋತ್ಸವವನ್ನು ಇಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘಟನೆಗಳು ಸೇರಿ ಅದ್ದೂರಿಯಾಗಿ ಆಚರಿಸುತ್ತಿವೆ.
ಕರ್ನಾಟಕದಲ್ಲಿ ಏಕೈಕ ಕನ್ನಡ ವೃತ್ತವಾಗಿದ್ದು, ವರ್ಷದ ೩೬೫ ದಿನಗಳೂ ಕನ್ನಡದ ಬಾವುಟ ಹಾರಾಡುತ್ತಿರುತ್ತದೆ. ಈಗಾಗಲೇ ಜಿಲ್ಲಾ ಕಸಾಪ, ಹೋಬಳಿ ಕಸಾಪ ಸಾಕಷ್ಟು ಪೂರ್ವಬಾವಿ ಸಭೆಗಳನ್ನು ನಡೆಸಿದ್ದು ಮಡಿಕೇರಿ ವಿಧಾಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ಕಾರ್ಯಾಧ್ಯಕ್ಷರಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಕಾರ್ಯನಿರ್ವಹಿಸಲಿದ್ದಾರೆÉ. ಸ್ವಾಗತ ಸಮಿತಿಯ ಉಪಾಧ್ಯಕ್ಷರಾಗಿ ಮತ್ತು ಹಣಕಾಸು ಸಮಿತಿಯ ಅಧ್ಯಕ್ಷರಾಗಿ ಎ. ಲೋಕೇಶ್ ಕುಮಾರ್ ಕಾರ್ಯನಿರ್ವಹಿಸಲಿದ್ದಾರೆÉ. ಸ್ವಾಗತ ಸಮಿತಿಯ ಗೌರÀವಾಧ್ಯಕ್ಷರುಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್ ಬೋಸರಾಜ್, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರುಗಳು ಪಾಲ್ಗೊಳ್ಳಲಿದ್ದಾರೆ.
ಸಮ್ಮೇಳನವನ್ನು ಯಶಸ್ವಿಗೊಳಿಸಲು ವಿವಿಧ ಉಪಸಮಿತಿಗಳನ್ನು ರಚಿಸಿಕೊಳ್ಳಲಾಗಿದ್ದು, ಅವೆಲ್ಲವೂ ತಮ್ಮ ವ್ಯಾಪ್ತಿಯ ಕಾರ್ಯನಿರ್ವಹಣೆಯಲ್ಲಿ ತೊಡಗಿವೆ. ವಿಶೇಷವಾಗಿ ಹಣಕಾಸು ಸಮಿತಿ, ಮೆರವಣಿಗೆ, ಸ್ಮರಣ ಸಂಚಿಕೆ, ಆಹಾರ ಮತ್ತು ಅಲಂಕಾರ, ಸಾಂಸ್ಕೃತಿಕ ಹಾಗೂ ದ್ವಾರ ಸಮಿತಿಗಳನ್ನು ರಚಿಸಲಾಗಿದೆ. ೧೭ನೇ ಸಮ್ಮೇಳನದ ಹಿನ್ನಲೆಯಲ್ಲಿ ಸುಂಟಿಕೊಪ್ಪ ವ್ಯಾಪ್ತಿಯ ಪ್ರತಿಷ್ಠಿತ ಕುಟುಂಬಗಳು ಹಾಗೂ ಗಣ್ಯರ ಹೆಸರಿನಲ್ಲಿ ೧೭ ಮಹಾದ್ವಾರಗಳನ್ನು ನಿರ್ಮಿಸಲಾಗುತ್ತದೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಮ್ಮೇಳನ ನಡೆಯುವ ಸಭಾಂಗಣ ಮತ್ತು ಮುಖ್ಯವೇದಿಕೆಗೆ ಕನ್ನಡ ನಾಡು ನುಡಿಗೆ ಗಣನೀಯ ಸೇವೆ ಮಾಡಿದವರ ಹೆಸರನ್ನು ಇಡಲಾಗುವುದೆಂದು ಜಿಲ್ಲಾಧ್ಯಕ್ಷ ಎಂ.ಪಿ ಕೇಶವಕಾಮತ್ ಮಾಹಿತಿ ನೀಡಿದ್ದಾರೆ.
ನಾಡಿನ ಅಭಿವೃದ್ಧಿ, ಸಾಹಿತ್ಯಿಕ ವಿಚಾರಗಳು, ನಿತ್ಯ ಜೀವನದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ವಿಚಾರಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡ ಗೀತಾಗಾಯನ ಕಾರ್ಯಕ್ರಮಗಳು ಆಕರ್ಷಿಸಲಿವೆ.
ಸಮ್ಮೇಳನದಲ್ಲಿ ೧೭ ಮಂದಿ ಜಿಲ್ಲೆಯ ಸಾಧಕರನ್ನು ವಿವಿಧ ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಸನ್ಮಾನಿಸಲಾಗುವುದು. ಫುಟ್ಬಾಲ್, ಹಾಕಿ, ಬಾಸ್ಕೆಟ್ಬಾಲ್, ಹ್ಯಾಂಡ್ಬಾಲ್, ಸೆಸ್ಟೋಬಾಲ್ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ನಡೆಯಲಿದೆ.
ವಿಶೇಷವಾಗಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿಶೇಷಚೇತನ ಮಕ್ಕಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವು ಕೂಡ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಬಾಲಪ್ರತಿಭೆಗಳಾಗಿ ಸಾಧನೆ ಮಾಡಿದ ಮಕ್ಕಳನ್ನು ಕೂಡ ಗೌರವಿಸಲಾಗುತ್ತದೆ ಎಂದು ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ, ಸಮ್ಮೇಳನದ ಮಹಾಪ್ರಧಾನ ಕಾರ್ಯದರ್ಶಿ ಪಿ.ಎಫ್ ಸಬಾಸ್ಟಿನ್ ಮಾಹಿತಿ ನೀಡಿದ್ದಾರೆ.
ಸರಕಾರದ ನಿಗಧಿತ ಅನುದಾನದ ಜೊತೆಗೆ ಶಾಸಕರುಗಳ ಪ್ರಯತ್ನವು ಸೇರಿ ಜಿಲ್ಲೆಯ ಕನ್ನಡಾಭಿಮಾನಿಗಳು, ದಾನಿಗಳು, ಸಾಹಿತ್ಯಾಸ್ತಕರು ತಮ್ಮೂರಿನಲ್ಲಿ ನಡೆಯುವ ಕನ್ನಡ ಹಬ್ಬಕ್ಕೆ ತನು ಮನ ಧನಗಳನ್ನು ನೀಡಿ ಅಭೂತಪೂರ್ವ ಯಶಸ್ವಿಗೆ ಕಾರಣೀಭೂತರಾಗುವ ಖಚಿತ ಭರವಸೆಯೊಂದಿಗೆ ಹೋಬಳಿ ಕಸಾಪ ಹಾಗೂ ಉಪಸಮಿತಿಗಳು ಕಾರ್ಯಪ್ರವೃತವಾಗಿವೆ ಎಂದು ಸ್ವಾಗತ ಸಮಿತಿಯ ಉಪಾಧ್ಯಕ್ಷರು ಹಾಗೂ ಹಣಕಾಸು ಸಮಿತಿಯ ಅಧ್ಯಕ್ಷರು ನುಡಿದಿದ್ದಾರೆ.
ವಿಶೇಷವೆಂದರೆ ತಮ್ಮ ಬರವಣಿಗೆಯ ಆರಂಭದ ದಿನಗಳಲ್ಲೇ ಕೇಂದ್ರ ಸಾಹಿತ್ಯ ಅಕಾಡಮಿ ಯುವ ಪುರಸ್ಕಾರಕ್ಕೆ ಪಾತ್ರರಾದ ಸುಂಟಿಕೊಪ್ಪದವರೇ ಆದ ಅಬ್ದುಲ್ ರಶೀದ್ ಸಮ್ಮೇಳನದ ಸರ್ವ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಈಗಾಗಲೇ ಜಿಲ್ಲಾ ಕಸಾಪ, ಕುಶಾಲನಗರ ತಾಲೂಕು ಕಸಾಪ ಮತ್ತು ಸುಂಟಿಕೊಪ್ಪ ಹೋಬಳಿ ಕಸಾಪದ ವತಿಯಿಂದ ಸಮ್ಮೇಳನದ ಸ್ವಾಗತ ಸಮಿತಿಯು ಅಬ್ದುಲ್ ರಶೀದ್ ಅವರನ್ನು ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಲಾಗಿದೆ.