ಸೋಮವಾರಪೇಟೆ, ಮೇ ೨೩ : ಸಮೀಪದ ಕೂಡುರಸ್ತೆಯ ಜಂಕ್ಷನ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ತಿರುವಿನ ಮಧ್ಯದಲ್ಲೇ ಎಕ್ಸಲ್ ತುಂಡಾಗಿ ಕೆಟ್ಟು ನಿಂತ ಪರಿಣಾಮ ದಿನವಿಡೀ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ಸಕಲೇಶಪುರ ಡಿಪೋಗೆ ಸೇರಿದ ಕೆ.ಎ.೧೮-ಎಫ್ ೦೬೫೧ ಸಂಖ್ಯೆಯ ಬಸ್ ಪ್ರತಿದಿನ ಸಕಲೇಶಪುರ -ಕೂತಿ- ಸೋಮವಾರಪೇಟೆ ಮಾರ್ಗದಲ್ಲಿ ಸಂಚರಿಸುತ್ತಿದ್ದು, ವಾರದಲ್ಲಿ ಒಮ್ಮೆಯಾದರೂ ಕೆಟ್ಟು ನಿಲ್ಲುತ್ತಿರುವುದಾಗಿ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೂಡುರಸ್ತೆಯಿಂದ ಆಲೇಕಟ್ಟೆವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ವಾಹನಗಳ ಸಂಚಾರವನ್ನು ಹಾನಗಲ್ ಮಾರ್ಗವಾಗಿ ಸೋಮವಾರಪೇಟೆ ಪಟ್ಟಣಕ್ಕೆ ತೆರಳಲು ವ್ಯವಸ್ಥೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಕೂಡುರಸ್ತೆ ಜಂಕ್ಷನ್ ಬಳಿ ಕಿರಿದಾದ ತಿರುವು ಇದ್ದು, ಇಲ್ಲಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.

ಇದೇ ವೇಳೆ ಬಸ್‌ನ್ನು ಹಿಂದಕ್ಕೆ ತೆಗೆದುಕೊಳ್ಳುವ ಸಂದರ್ಭ ಎಕ್ಸಲ್ ತುಂಡಾಗಿದ್ದು, ಚಾಲಕನ ಜಾಗರೂಕತೆಯಿಂದ ಬಸ್ ಅನ್ನು ಸ್ಥಳದಲ್ಲೇ ನಿಲ್ಲಿಸಲಾಗಿದೆ. ಇಲ್ಲದಿದ್ದರೆ ಸಮೀಪದಲ್ಲಿದ್ದ ಮೀನಿನ ಅಂಗಡಿಗೆ ನುಗ್ಗುವ ಸಾಧ್ಯತೆ ಹೆಚ್ಚಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ರಸ್ತೆಯ ತಿರುವಿನಲ್ಲೇ ಬಸ್ ನಿಂತಿದ್ದರಿAದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿ ಕೆಲಕಾಲ ವಾಹನ ಸವಾರರು ಪರದಾಡುವಂತಾಯಿತು.

ಇನ್ನೊAದೆಡೆ ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.