ಶನಿವಾರಸಂತೆ, ನ. ೨೯: ಶಾಲಾ-ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸುವ ಸ್ವಾಸ್ಥö್ಯ ಸಂಕಲ್ಪ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಸಚ್ಚಾರಿತ್ರ‍್ಯವನ್ನು ಮೈಗೂಡಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ದುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಎಸ್.ಪಿ. ಭಾಗ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಸ್ವಾಸ್ಥö್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಭಾಷಣಕಾರ ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಯು ಕಷ್ಟಪಟ್ಟು-ಇಷ್ಟಪಟ್ಟು ಜ್ಞಾನ ಸಂಪಾದನೆ ಮೂಲಕ ಸಮಾಜಕ್ಕೆ ಆಸ್ತಿಯಾಗುತ್ತಾನೆ. ತಂದೆ-ತಾಯಿಗಳ ಭರವಸೆಯನ್ನು ಈಡೇರಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿರುತ್ತದೆ.ಗುರು-ಹಿರಿಯರ ಮಾರ್ಗದರ್ಶನ, ಉತ್ತಮ ಸಹವಾಸ ಹಾಗೂ ತಾಳ್ಮೆಯ ಮನೋಭಾವದಿಂದ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಬಾರ ಪ್ರಾಂಶುಪಾಲ ಮೊಹಮ್ಮದ್ ಜಹೀರ್ ಮಾತನಾಡಿ, ಇಂದು ವಿದ್ಯಾರ್ಥಿಗಳಲ್ಲಿ ಸನ್ನಡತೆಗಳು ಮಾಯವಾಗುತ್ತಿವೆ.ಗುರು-ಹಿರಿಯರ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಹದಿಹರೆಯದ ಯುವಕ-ಯುವತಿಯರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸ್ವಾಸ್ಥö್ಯ ಸಂಕಲ್ಪ ಕಾರ್ಯಕ್ರಮಗಳಿಂದಾದರೂ ವಿದ್ಯಾರ್ಥಿಗಳ ಮನೋಭಾವ ಬದಲಾಗಲಿ ಎಂದು ಆಶಿಸಿದರು.
ಶನಿವಾರಸಂತೆ ವಲಯ ಮೇಲ್ವಿಚಾರಕಿ ಜಯಶ್ರೀ, ಒಕ್ಕೂಟದ ಅಧ್ಯಕ್ಷೆ ಶಾಹಿನ್ ತಾಜ್, ಸೇವಾ ಪ್ರತಿನಿಧಿಗಳಾದ ಶೋಭಾ, ಮಂಜುಳಾ ಹಾಜರಿದ್ದರು. ಜಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.