ವೀರಾಜಪೇಟೆ, ನ. ೨೯: ಮನುಷ್ಯನ ಅಂತರಾಳದಲ್ಲಿ ವಿಭಿನ್ನ ಭಾವನೆ ಗುಚ್ಛವಿದ್ದು, ಅದನ್ನು ಹೊರಗೆಡವಿ ಲೋಕ ಹಿತಕ್ಕೆ ಮುಡಿಸಿ ಮುಕ್ತಿ ಹೊಂದುವುದೇ ನಿಸ್ವಾರ್ಥ ಬದುಕು ಎಂದು ಕೂರ್ಗ್ ವ್ಯಾಲಿ ಶಾಲೆಯ ಪ್ರಾಂಶುಪಾಲರಾದ ಸುಮ ಚಿತ್ರಭಾನು ಹೇಳಿದರು.
ವೀರಾಜಪೇಟೆಯ ಮೊಗರಗಲ್ಲಿಯಲ್ಲಿನ ಕಲಾ ಉತ್ಸವ ವೇದಿಕೆಯಲ್ಲಿ ನಡೆದ ವೀರಾಜಪೇಟೆಯ ಕೆದಮುಳ್ಳೂರು ಗ್ರಾಮದ ಕವಿ ಲವಿನ್ ಲೋಪೇಸ್ ಬರೆದಿರುವ ‘ಮೌನದ ಮನಸ್ಸಿನಲ್ಲಿ’ ಚೊಚ್ಚಲ ಕೃತಿಯ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಲವಿನ್ ತಮ್ಮ ಕವನ ಸಂಕಲನದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಕವನಗಳು ಎಲ್ಲರಿಗೂ ಮನಮುಟ್ಟುವ ಹಾಗೆ ರಚಿಸಿದ್ದು, ನೆಲ, ಜಲ, ಪ್ರೀತಿ, ವ್ಯಾತ್ಸಲ್ಯ ಹಾಗೂ ರೈತರ ಬಗ್ಗೆ ಕವನಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯದ ಲೋಕ ವಿಶಾಲವಾಗಿದ್ದು, ಈ ನೆಲ, ಕವಿಗಳ ಬೀಡು. ಇಂತಹ ನಾಡಿನೊಳಗೆ ಉದಯಿಸಿ ಕಾವ್ಯಲೋಕಕ್ಕೆ ತನ್ನ ಕೃತಿ ಕೊಟ್ಟಿದ್ದು ಶ್ರೇಷ್ಠ ಭಾವ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರಲ್ಲದೆ ಮುಂದೆಯೂ ಕನ್ನಡದಲ್ಲೇ ಕವನ ರಚನೆ ಮಾಡುವಂತೆ ಒತ್ತಿ ಹೇಳಿದರು.
ಸಾಹಿತಿಗಳಾದ ವಿ.ಎನ್. ರಜಿತ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಲವಿನ್ ಅವರು ತಮ್ಮ ಸ್ವಂತ ಪ್ರಕಾಶನದ ಮೂಲಕ ಕನಸಿನ ಕೂಸು ‘ಮೌನದ ಮನಸ್ಸಿನಲ್ಲಿ’ ಕೃತಿಯನ್ನು ಹೊರತಂದಿರುವುದು ಶ್ಲಾಘನೀಯ. ಮನುಷ್ಯ ಎಷ್ಟೇ ಬುದ್ಧಿ, ವಿದ್ಯೆ ಪಡೆದರೂ ಅದೆಲ್ಲಕ್ಕಿಂತ ಮುಖ್ಯವಾಗಿ ಅದನ್ನು ಸದ್ಬಳಕೆ ಮಾಡಿಕೊಳ್ಳುವುದು ಮುಖ್ಯ. ಭಾವನೆಗಳಿಂದ ಜೀವನವನ್ನು ವಿಭಿನ್ನವಾಗಿ ನೋಡುವ ಮೂಲಕ ಸಾಹಿತ್ಯ ರಚಿಸುವ ಜವಾಬ್ದಾರಿಯನ್ನು ನಿರ್ವಹಿಸುವ ಬರಹಗಾರರು ಸಮಾಜಕ್ಕೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಕಾವ್ಯ ಮತ್ತು ನಿರೂಪಣೆಯನ್ನು ನಿರ್ಮಿಸುವ ಶಕ್ತಿಯನ್ನು ಹೊಂದಿರುತ್ತಾರೆ ಎಂದು ಅವರು ವಿಶ್ಲೇಷಿಸಿದರಲ್ಲದೆ ಹೃದಯದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಇರುವವರಿಗೆ ಸಾಹಿತ್ಯ ಒಳ್ಳೆಯದು. ಅವರು ತಮ್ಮ ಕವಿತೆಗಳು ಮತ್ತು ಕಥೆಗಳ ಮೂಲಕ ಜೀವನದ ವಿವಿಧ ಚಿತ್ರಗಳನ್ನು ತೋರಿಸುತ್ತಾರೆ. ಜೀವನದ ಮೌಲ್ಯವು ಅವರ ಸಾಹಿತ್ಯದ ಮೂಲಕ ಪ್ರತಿಫಲಿಸುತ್ತದೆ. ಸಾಹಿತ್ಯವು ಓದುಗರ ಭಾವನೆಗಳು ಮತ್ತು ಆಲೋಚನೆಗಳಿಗೆ ಅನುಗುಣವಾಗಿ ಹೊಸ ಅರ್ಥಗಳನ್ನು ಹುಟ್ಟುಹಾಕುವಷ್ಟು ಪ್ರಬುದ್ಧವಾಗಿದೆ ಎಂದರು.
ಹಿರಿಯ ಸಾಹಿತಿ ಗಿರೀಶ್ ಕಿಗ್ಗಾಲು ಮಾತನಾಡಿ, ಜೀವನಾನುಭವದ ವಿವಿಧ ಭಾವನೆಗಳು ಕವನ ಸಂಕಲನದ ರೂಪವನ್ನು ಪಡೆದುಕೊಂಡಿವೆ. ಕಾವ್ಯ ಎನ್ನುವುದು ಪ್ರತಿ ಹೃದಯದಲ್ಲಿ ಪ್ರವಹಿಸುವ ಅಮೃತಧಾರೆಯಾಗಿದ್ದು, ಮಾನವತೆಯೆಡೆಗಿನ ನಿರಂತರ ತುಡಿತವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಶಿಕ್ಷಕರಾದ ಮಹಮ್ಮದ್ ಶಾಫಿ ಮಾತನಾಡಿ, ಲವಿನ್ ಲೋಪೆಸ್ ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಬರವಣಿಗೆಯನ್ನು ಕರಗತ ಮಾಡಿಕೊಂಡು, ತಮ್ಮ ಮನಸ್ಸಿನ ಭಾವನೆಗಳನ್ನು ಕವಿತೆ ಮೂಲಕ ಹೊರಹಾಕಿ ಸಂಕಲನ ರೂಪದಲ್ಲಿ ಹೊರತಂದಿದ್ದಾರೆ. ಅವರ ಇನ್ನೊಂದು ಕೃತಿ ಮುದ್ರಣದ ಹಂತದಲ್ಲಿದ್ದು ಅವರ ಸಾದನೆ ಹೆಮ್ಮೆ ತಂದಿದೆ ಎಂದರು.
ಕೃತಿಕಾರ ಲವಿನ್ ಲೋಪೇಸ್ ಮಾತನಾಡಿ, ಕಾವ್ಯ ಪರಂಪರೆ ಓದುಗರಿಗೆ ಹೊಸತನವನ್ನು ನೀಡುತ್ತದೆ. ಅನಾದಿ ಕಾಲದ ಜನರ ಸಂವಹನವೇ ಕಾವ್ಯ. ಯಾವತ್ತೂ ನಡೆಯುವವನೇ ಎಡವುದಲ್ಲದೇ ಮಲಗಿದವನು ಎಡವುದಿಲ್ಲ, ಇದೀಗ ಕಾವ್ಯದ ಹರಿವು ನನ್ನೊಳಗೆ ಹರಿಯುತ್ತಿದೆ. ಪ್ರಾದ್ಯಾಪಕರಾದ ಡಾ. ಕಾವೇರಿ ಪ್ರಕಾಶ್ ಮುನ್ನುಡಿ, ಸಾಹಿತಿ ವಿ.ಎನ್. ರಜಿತ ಬೆನ್ನುಡಿ ಬರೆದು ಹರಸಿದ್ದಾರೆ. ಸಾಹಿತ್ಯದೆಡೆಗೆ ಮನಸ್ಸು ತುಡಿಯುತ್ತಿದ್ದು ಸದ್ಯದಲ್ಲೇ ಇನ್ನೊಂದು ಕೃತಿ ಹೊರಬರಲಿದೆ ಎಂದರು.
ಈ ಸಂದರ್ಭದಲ್ಲಿ ಸಾಹಿತಿಗಳಾದ ರಜಿತ, ಪುಷ್ಪಲತಾ, ಮಹಮ್ಮದ್ ಶಾಫಿ, ಸುಮಚಿತ್ರಭಾನು, ಅನಿಮೋಳ್, ಸಾಧಿಕ್, ಲವಿನ್, ಲೂಸಿ ಡಿಸೋಜಾ, ತೆರೆಸಾ ಮಿನೇಜಸ್ ಇವರನ್ನು ವಿಶೇಷವಾಗಿ ಗೌರವಿಸಲಾಯಿತು. ದಿಲಿಶ್ ನಾಯರ್ ಅವರು ಕವನ ಸಂಕಲನದಲ್ಲಿನ ಕವನವನ್ನು ರಾಗ ಸಂಯೋಜಿಸಿ ಹಾಡಿದರು.
ಸಾಧಿಕ್ ಆರ್ಟ್ಸ್ ಕಲಾ ವೇದಿಕೆಯ ಸಂಸ್ಥಾಪಕ ಸಾಧಿಕ್ ಹಂಸ, ಸಂಗೀತ ಶಿಕ್ಷಕರಾದ ಅನಿಮೋಳ್, ಸಾಹಿತಿ ವೈಲೇಶ್ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಕೃತಕಾರರ ತಾಯಿ ಲೂಸಿ ಡಿಸೋಜಾ, ಪ್ರಮುಖರಾದ ತೆರೆಸಾ ಮಿನೇಜಸ್, ಲಿಖಿನ್ ಲೋಪೇಸ್, ದೀಪಕ್, ಸರಿತಾ, ದಿವಾನ್, ಆಶಾ, ಸುಪ್ರಿತಾ, ವಿಶಾಲಾಕ್ಷಿ ಸೇರಿದಂತೆ ಸಾಹಿತ್ಯಾಭಿಮಾನಿಗಳು ಇದ್ದರು.