ಪೊನ್ನAಪೇಟೆ, ನ. ೧೪: ಪೊನ್ನಂಪೇಟೆಯ ಕುಶಾಲಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ಪೊನ್ನಂಪೇಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಜಯಗಳಿಸುವ ಮೂಲಕ ಪಂಜಾಬ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಮುಂಬೈ ಇಂಡಿಯನ್ಸ್ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ತೃತೀಯ ಸ್ಥಾನ ಹಾಗೂ ಗುಜರಾತ್ ಲಯನ್ಸ್ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು. ನಾಲ್ಕು ದಿನಗಳ ಕಾಲ ನಡೆದ ಪಿ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ೧೦ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೆöÊ ಸೂಪರ್ ಕಿಂಗ್ಸ್, ರಾಜಸ್ತಾನ್ ರಾಯಲ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ , ಲಕ್ನೋ ಸೂಪರ್ ಜೈಂಟ್ಸ್ , ಪಂಜಾಬ್ ಸೂಪರ್ ಕಿಂಗ್ಸ್, ಗುಜರಾತ್ ಲಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಪಾಲ್ಗೊಂಡು ಗೆಲುವಿಗಾಗಿ ತೀವ್ರ ಹಣಾಹಣಿ ನಡೆಸುವ ಮೂಲಕ ಕ್ರೀಡಾಭಿಮಾನಿಗಳಿಗೆ ಕ್ರಿಕೆಟ್ ಆಟದ ರಸದೌತಣ ಉಣಬಡಿಸಿದವು.

ವೈಯಕ್ತಿಕ ಪ್ರಶಸ್ತಿ

ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸೋಹಿಲ್ ಉಣ್ಣಿ, ಅತೀ ಹೆಚ್ಚು ಬೌಂಡರಿ ಗಳಿಸಿದ ಆಟಗಾರನಾಗಿ ಲೋಕಿ, ಅತೀ ಹೆಚ್ಚು ಸಿಕ್ಸರ್ ಗಳಿಸಿದ ಆಟಗಾರನಾಗಿ ಜಂಶಿರ್, ಅತ್ಯುತ್ತಮ ಕಿರಿಯ ಕ್ರೀಡಾಪಟು ಆಗಿ ನಾಫಿರ್, ಬೆಸ್ಟ್ ಫೀಲ್ಡರ್ ಆಗಿ ಕಿರಣ್, ಬೆಸ್ಟ್ ವಿಕೆಟ್ ಕೀಪರ್ ಆಗಿ ಸಲ್ಲು, ಬೆಸ್ಟ್ ಬ್ಯಾಟ್ಸ್ ಮನ್ ಆಗಿ ರಾಶು, ಬೆಸ್ಟ್ ಬೌಲರ್ ಆಗಿ ಜುನೈದ್, ಮ್ಯಾನ್ ಆಫ್ ದಿ ಸೀರಿಸ್ ಆಗಿ ಜಂಶೀರ್ ಪ್ರಶಸ್ತಿ ಪಡೆದು ಕೊಂಡರು.

ಸಮಾರೋಪ

ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಮಾತನಾಡಿ ಕ್ರೀಡೆ ಪರಸ್ಪರ ಸ್ನೇಹ, ಸೌಹಾರ್ದತೆಯನ್ನು ಮೂಡಿಸುವಲ್ಲಿ ಸಹಕಾರಿಯಾಗಿದೆ. ಕ್ರೀಡಾಕೂಟದಲ್ಲಿ ಎಷ್ಟೇ ತಂಡಗಳು ಭಾಗವಹಿಸಿದರೂ ಕೇವಲ ಒಂದು ತಂಡ ಮಾತ್ರ ಗೆಲ್ಲಲು ಸಾಧ್ಯ. ಶಿಕ್ಷಣದಲ್ಲಿ ೧೦ ಜನ ಪೂರ್ಣಾಂಕ ಗಳಿಸಿಕೊಳ್ಳಬಹುದು ಆದರೆ ಕ್ರೀಡೆಯಲ್ಲಿ ಹಾಗಾಗುವುದಿಲ್ಲ. ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದ್ದು, ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಮಾತನಾಡಿ, ಇಂದಿನ ಯುವಕರು ದ್ವೇಷ ಅಸೂಯೆಯನ್ನು ದೂರ ಮಾಡಿ, ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಂಡು ಪ್ರೀತಿ ವಿಶ್ವಾಸದಿಂದ ಸಾರ್ವಜನಿಕರೊಂದಿಗೆ ಒಗ್ಗೂಡಿ ಕ್ರೀಡಾಕೂಟವನ್ನು ಆಯೋಜಿಸಿ ಸಂಭ್ರಮಿಸಬೇಕು ಎಂದರು.

ಕ್ರೀಡಾ ಸಮಿತಿಯ ಅಧ್ಯಕ್ಷ ಹೆಚ್. ಕೆ. ಸಂತೋಷ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಆಲೀರ ಎಂ. ರಶೀದ್, ಪಿ. ಪಿ. ಎಲ್ ಗೌರವಾಧ್ಯಕ್ಷ ಕೆ. ಇ. ಬಿ ಮಂಜು, ಪೊನ್ನಂಪೇಟೆ ನಾಗರಿಕ ವೇದಿಕೆಯ ಉಪಾಧ್ಯಕ್ಷ ಆಲೀರ ಎರ್ಮು ಹಾಜಿ, ದಾನಿಗಳಾದ ಅಜ್ಜಿಕುಟ್ಟಿರ ರವಿ, ಬಯವಂಡ ಮಹಾಬಲ, ರಾಜ್ಯ ಪ್ರಶಸ್ತಿ ವಿಜೇತ ಪ್ರಗತಿಪರ ರೈತ ರವಿಶಂಕರ್, ಉದ್ಯಮಿಗಳಾದ ಆಲೀರ ಎ. ಮೂಸ, ಕಾರ್ತಿಕ್, ಹಿರಿಯ ಆಟಗಾರ ಆಲೀರ ರಶೀದ್, ಕ್ರೀಡಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಇದ್ದರು.