ಕಣಿವೆ, ನ. ೧೩: ಹಾರಂಗಿ ಹಿನ್ನೀರಿನಲ್ಲಿ ಬುಧವಾರ ಮೃತಪಟ್ಟಿದ್ದ ಮಡಿಕೇರಿಯ ವಿದ್ಯಾರ್ಥಿ ತರುಣ್ ತಿಮ್ಮಯ್ಯ (೧೯) ಮೃತದೇಹ ಗುರುವಾರ ಪತ್ತೆಯಾಗಿದೆ.

ಬುಧವಾರ ಸಂಜೆ ನಡೆದ ಕಾರ್ಯಾಚರಣೆ ಸಂದರ್ಭ ಜಸ್ವಿನ್ ಚೆಂಗಪ್ಪ ಮೃತದೇಹ ದೊರೆತಿತ್ತು. ತಿಮ್ಮಯ್ಯನ ಪತ್ತೆಗಾಗಿ ಸಾಕಷ್ಟು ಶೋಧ ನಡೆಯಿತಾದರೂ ಕತ್ತಲು ಆವರಿಸಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಗುರುವಾರ ದುಬಾರೆ ರ‍್ಯಾಫ್ಟಿಂಗ್, ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಶವವನ್ನು ಪತ್ತೆ ಹಚ್ಚಿ ಹೊರತೆಗೆಯುವಲ್ಲಿ ಯಶಸ್ವಿಯಾದರು. ಮೃತ ತರುಣ್ ಮಡಿಕೇರಿ ರಾಜಾಸೀಟ್ ಬಳಿಯ ವಾಸಿ ತಿಮ್ಮಯ್ಯ ಎಂಬವರ ಪುತ್ರ. ಸ್ಥಳಕ್ಕೆ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಂಟಿಕೊಪ್ಪ ಠಾಣಾಧಿಕಾರಿ ಮೋಹನರಾಜು ಇದ್ದರು.