ಮಡಿಕೇರಿ, ನ. ೧೨: ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ನೀಡಲ್ಪಟ್ಟ ಮೆಡಿಕಲ್ ಇಕ್ಯೂಪ್ಮೆಂಟ್ ಬ್ಯಾಂಕ್ಗೆ ಇನ್ನರ್ ವೀಲ್ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್ ಚಾಲನೆ ನೀಡಿದರು.
ಮಡಿಕೇರಿಯ ಅಶ್ವಿನಿ ಆಸ್ಪತ್ರೆಯ ಆವರಣದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಮಡಿಕೇರಿ ಸಂಸ್ಥೆಗೆ ೫೦ ವರ್ಷಗಳ ಸಂಭ್ರಮದ ಸಂದರ್ಭ ಅಶ್ವಿನಿ ಆಸ್ಪತ್ರೆಯ ಮೂಲಕ ಅಗತ್ಯವಿರುವ ರೋಗಿಗಳಿಗೆ ಪರಿಕರಗಳನ್ನು ನೀಡುವ ಯೋಜನೆ ಚಾಲನೆಗೊಂಡಿತು.
ಅಶ್ವಿನಿ ಆಸ್ಪತ್ರೆಗೆ ಇನ್ನರ್ ವೀಲ್ ಸಂಸ್ಥೆಯಿAದ ೪ ವೀಲ್ ಚೇರ್, ೪ ಕ್ರಚಸ್, ೩ ವಾಕರ್, ೨, ವಾಟರ್ ಬೆಡ್, ಸುಸಜ್ಜಿತ ಬೆಡ್ ಸೇರಿದಂತೆ ಅಂದಾಜು ೧.೨೦ ಲಕ್ಷ ರೂ. ಮೌಲ್ಯದ ಆರೋಗ್ಯ ಉಪಕರಣಗಳನ್ನು ನೀಡಲಾಯಿತು.
ಶಬರಿ ಕಡಿದಾಳ್ ಮಾತನಾಡಿ, ಇದೊಂದು ಅತ್ಯಗತ್ಯ ಯೋಜನೆಯಾಗಿದ್ದು, ಸುವರ್ಣ ಸಂಭ್ರಮದ ಸಾರ್ಥಕತೆಯನ್ನು ಈ ಯೋಜನೆ ಹೆಚ್ಚಿಸಿದೆ ಎಂದು ಶ್ಲಾಘಿಸಿದರಲ್ಲದೇ, ಅನೇಕರ ಮನೆಗಳಲ್ಲಿ ಬಳಕೆಯಾಗಿ ಮೂಲೆಸೇರಿರುವ ಉತ್ತಮ ಕಾರ್ಯನಿರ್ವಹಣೆಯ ವೈದ್ಯಕೀಯ ಪರಿಕರಗಳನ್ನು ಕೂಡ ಅಶ್ವಿನಿ ಆಸ್ಪತ್ರೆ, ಇನ್ನರ್ ವೀಲ್ಗೆ ನೀಡುವ ಮೂಲಕ ಅಗತ್ಯವುಳ್ಳವರಿಗೆ ಉಪಯೋಗವಾಗುವಂತೆ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು. ಸಮಾಜದ ಹಿತದೃಷ್ಟಿಯಿಂದ ಇಂಥ ಯೋಜನೆಗಳು ಮತ್ತಷ್ಟು ಹೆಚ್ಚಾಗಲಿ ಎಂದು ಅವರು ಹಾರೈಸಿದರು.
ಅಶ್ವಿನಿ ಆಸ್ಪತ್ರೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಕುಪ್ಪಂಡ ರಾಜಪ್ಪ ಮಾತನಾಡಿ, ಅಶ್ವಿನಿ ಆಸ್ಪತ್ರೆಯಲ್ಲಿ ಪ್ರಸ್ತುತ ೩೭ ತಜ್ಞ ವೈದ್ಯರು ಹಾಗೂ ೭ ಕರ್ತವ್ಯ ನಿರತ ವೈದ್ಯರ ಸೇವೆ ಲಭ್ಯವಿದೆ. ಬಡರೋಗಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳಿವೆ. ಮುಂದಿನ ೧೦ ವರ್ಷಗಳಲ್ಲಿ ಅಶ್ವಿನಿ ಆಸ್ಪತ್ರೆಯಲ್ಲಿ ಖಾಸಗಿ ವೈದ್ಯಕೀಯ ಆಸ್ಪತ್ರೆ ಪ್ರಾರಂಭಿಸುವ ಉದ್ದೇಶವೂ ಇದೆ. ಈಗಾಗಲೇ ೧೦೦ ಹಾಸಿಗೆಗಳೊಂದಿಗೆ, ನರ್ಸಿಂಗ್ ತರಬೇತಿಯನ್ನು ಕೂಡ ಅಶ್ವಿನಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಶ್ವಿನಿ ಆಸ್ಪತ್ರೆಯ ಸಂಚಾಲಕಿ ಕುಪ್ಪಂಡ ಛಾಯಾ ನಂಜಪ್ಪ ಮಾತನಾಡಿ, ಆರೋಗ್ಯ ಸೇವೆ ಎಲ್ಲರಿಗೂ ತಲುಪಬೇಕು. ಈ ಮೂಲಕ ಆರೋಗ್ಯವಂತ ಜನರಿರುವ ಭಾರತದ ಪರಿಕಲ್ಪನೆ ಸಾಕಾರಗೊಳ್ಳಬೇಕು. ಈ ನಿಟ್ಟಿನಲ್ಲಿ ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳ ನೆರವು ನೀಡಿದ ಇನ್ನರ್ ವೀಲ್ ಸಂಸ್ಥೆ ಕಾರ್ಯಕ್ಕೆ ಶ್ಲಾಘಿಸಿದರು,
ಇನ್ನರ್ ವೀಲ್ ಅಧ್ಯಕ್ಷೆ ಲಲಿತಾ ರಾಘವನ್, ಕಾರ್ಯದರ್ಶಿ ನಮಿತಾ ರತ್ನಾಕರ್ ರೈ, ಮಾಜಿ ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷೆ ಲತಾ ಚಂಗಪ್ಪ, ಕಾರ್ಯದರ್ಶಿ ಶಫಾಲಿ ಪ್ರಮೋದ್ ಕುಮಾರ್ ರೈ, ಅಶ್ವಿನಿ ಆಸ್ಪತ್ರೆಯ ಟ್ರಸ್ಟಿ ಗೋಕುಲ್ ಎಂ.ಪಿ. ಆಡಳಿತಾಧಿಕಾರಿ ಬಿ.ಎಂ. ರವೀಂದ್ರಕುಮಾರ್ ಹಾಜರಿದ್ದರು.