ಮಡಿಕೇರಿ, ನ. ೧೨: ಕೊಡಗು ಮಾಜಿ ಸೈನಿಕರ ಸಂಘದ ಮಹಾಸಭೆ ಇತ್ತೀಚೆಗೆ ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ಜರುಗಿತು.
ಸಭೆಯಲ್ಲಿ ಮಾಜಿ ಸೈನಿಕರ ಕುಂದು ಕೊರತೆ ಸೌಲಭ್ಯಗಳ ಕುರಿತಾಗಿ ಚರ್ಚೆ ನಡೆಯಿತು. ಇ.ಸಿ.ಹೆಚ್.ಎಸ್. ಆಸ್ಪತ್ರೆಯಲ್ಲಿ ೧೯೯೬ಕ್ಕೆ ಮುಂಚಿತವಾಗಿ ನಿವೃತ್ತರಾದವರಿಗೆ ಉಚಿತ ಸೌಲಭ್ಯ ಇರುವ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೆ ಕ್ಯಾಂಟಿನ್ ಸೇವೆ ಕುರಿತಾಗಿಯೂ ಚರ್ಚಿಸಲಾಯಿತು. ಮಾಜಿ ಸೈನಿಕರು, ರಾಜ್ಯ ಸರಕಾರದಿಂದ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡು ಇದರ ಸದುಪಯೋಗಪಡಿಸಿಕೊಳ್ಳಲು ಬಿ.ಎ. ಕಾರ್ಯಪ್ಪ ಅವರು ಕರೆ ನೀಡಿದರು.
ಮದ್ಯ ಬಳಕೆ ವಿಚಾರದಲ್ಲಿ ಮಾಜಿ ಸೈನಿಕರು ನಿಯಮ ಪಾಲಿಸುವಂತೆ ಕರೆ ನೀಡಲಾಯಿತು. ಇದಲ್ಲದೆ ಮಾಜಿ ಸೈನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಹಲವು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆ ಇದರ ಪರಿಹಾರಕ್ಕೆ ರಾಜಕೀಯವಾಗಿ ಯಾರಾದರೂ ಮುಂದೆ ಬರಬೇಕಾಗಿದೆ ಎಂಬ ಅಭಿಪ್ರಾಯ ಕೇಳಿಬಂದಿತು.
ಸನ್ಮಾನ
ಸಭೆಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಎಂಬತ್ತು ವರ್ಷ ಮೇಲ್ಪಟ್ಟ ಹಿರಿಯ ಸದಸ್ಯರುಗಳಾದ ಎ.ಎಂ. ಪೊನ್ನಪ್ಪ, ಓ.ಸಿ. ಮಾದಪ್ಪ, ಎಂ.ಯು. ಕುಶಾಲಪ್ಪ, ಎಂ.ಕೆ. ಅಚ್ಚಯ್ಯ, ಕೆ.ಎ. ಕಾಳಪ್ಪ, ಕೆ.ಬಿ. ಅಚ್ಚಯ್ಯ, ಟಿ.ಎಂ. ಉತ್ತಯ್ಯ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್ ಓಡಿಯಂಡ ಚಿಂಗಪ್ಪ, ಲೆ.ಕ. ಗಳಾದ ನಾಚಪ್ಪ, ಸುರೇಶ್ ಸುಬ್ಬಯ್ಯ, ಎ.ಯು. ಗಣಪತಿ ಕಾವೇರಪ್ಪ, ಸು.ಮೇ. ವಾಸಪ್ಪ, ಸೋಮಯ್ಯ, ಸುಬೇದಾರ್ ಮಾದಪ್ಪ ಸೇರಿದಂತೆ ಜಿಲ್ಲೆಯ ವಿವಿಧ ಹತ್ತು ಸಂಘಗಳ ಅಧ್ಯಕ್ಷರು, ವೀರ ನಾರಿಯರು ಪಾಲ್ಗೊಂಡಿದ್ದರು.