ಮಡಿಕೇರಿ, ನ. ೧೧: ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ ದೀಪಿಕಾ ಅಪ್ಪಯ್ಯ ಅವರ “ಮೈಂಡ್ ಆ್ಯಂಡ್ ಮ್ಯಾಟರ್'' ಸಂಸ್ಥೆಯ ಮೂಲಕ ಎರಡು ದಿನ ನಡೆದ ಮಾನಸಿಕ ಆರೋಗ್ಯ ಶಿಬಿರದಲ್ಲಿ ಮೈಸೂರು, ಹಾಸನ, ಕೊಡಗು ಹಾಗೂ ಇತರ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಖೀ ಜೀವನಕ್ಕೆ ಮಾನಸಿಕ ಆರೋಗ್ಯ ಅತಿಮುಖ್ಯವಾಗಿದ್ದು, ಈ ಕುರಿತ ಜಾಗೃತಿ ಶಿಬಿರವನ್ನು ರಾಜ್ಯದ ಇತರ ಜಿಲ್ಲೆಗಳಲ್ಲೂ ನಡೆಸಲು ಪ್ರವಾಸ ಹಮ್ಮಿಕೊಳ್ಳಲಾಗುವುದು ಎಂದು ದೀಪಿಕಾ ಹೇಳಿದರು.
ಕೊಡಗಿನಲ್ಲಿ ಈಗಾಗಲೇ ಸುಮಾರು ಮೂವತ್ತು ವಿದ್ಯಾಲಯಗಳಲ್ಲಿ ಜಾಗೃತಿ ಮೂಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನೂ ತಲುಪಲು ಸರಕಾರ ಕೈಜೋಡಿಸಬೇಕೆಂದು ನುಡಿದರು. ಸಮಾರೋಪ ಉದ್ದೇಶಿಸಿ ಮಾತನಾಡಿದ ಶಾಸಕ ಮಂತರ್ ಗೌಡ ಅವರು, ಮಾನಸಿಕ ಆರೋಗ್ಯ ಸಮಾಜದ ಸ್ವಾಸ್ಥö್ಯಕ್ಕೆ ಅತಿ ಮುಖ್ಯ ಎಂದರು. ಈ ನಿಟ್ಟಿನಲ್ಲಿ ಜಾಗೃತಿ ಮತ್ತು ಆರೋಗ್ಯ ರಕ್ಷಣೆಗೆ ಸರಕಾರ ಬದ್ಧವಾಗಿದ್ದು, ಇದರಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳನ್ನು ಶ್ಲಾಘಿಸಿದರು.
ಬೆಂಗಳೂರು ನಿಮ್ಹಾನ್ಸ್ ಪ್ರೊಫೆಸರ್ ಅರವಿಂದ ರಾಜ್ ಅವರು ಮಾತನಾಡಿ, ಸಮಾಜದಲ್ಲಿ ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಹಿಂಜರಿಕೆಯಿದ್ದು, ಜನತೆ ಇದರ ಪ್ರಾಮುಖ್ಯತೆ ಅರಿತು ಚಿಕಿತ್ಸೆ ಪಡೆಯುವಂತಾಗಬೇಕು ಎಂದು ನುಡಿದರು. ಮಾನಸಿಕ ಆರೋಗ್ಯ ಶಿಬಿರದ ಮುಖ್ಯ ಸಂಚಾಲಕಿ ಅನು ಸುಬ್ಬಪ್ಪ ಅವರು ಮಾತನಾಡಿ, ದೇಶದಲ್ಲಿ ೨೩ ಕೋಟಿ ಮಂದಿ ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ೧೫ ಕೋಟಿ ಮಂದಿ ಸಮಸ್ಯೆಯಿಂದಿದ್ದಾರೆ, ಆದರೆ ಇವರಲ್ಲಿ ಶೇ. ೧೦೦ ರಷ್ಟು ಮಂದಿ ಮಾತ್ರ ಚಿಕಿತ್ಸೆ ಪಡೆಲು ಮುಂದಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾನಸಿಕ ಅನಾರೋಗ್ಯದ ಕುರಿತು ವೈದ್ಯರನ್ನು ಕಾಣಲು ಹಿಂಜರಿಯುವುದು ಅಪಾಯಕಾರಿ ಎಂದರು. ಭಾರತೀಯ ವಿದ್ಯಾಭವನದ ಮಾನಸಿಕ ಆರೋಗ್ಯ ವಿಭಾಗ “ಮನಸ್ವಿ''ಯ ಸಂಚಾಲಕಿ ಶೀತಲ್ ಸೋಮಯ್ಯ ಮಾತನಾಡಿ, ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ವಿದ್ಯಾಭವನದ ಮುಖ್ಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಸಂಘಟನೆಗಳೊAದಿಗೆ ಕೈ ಜೋಡಿಸಲು ತಾವು ಸದಾ ಸಿದ್ಧ ಎಂದರು.
“ಶಕ್ತಿ'' ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ಮಾತನಾಡಿ, ವಿಶ್ವದ ವಿಸ್ಮಯಗಳನ್ನು ವಿಜ್ಞಾನದ ಆವಿಷ್ಕಾರಗಳನ್ನು ನಾವು ಬೆರಗುಗಣ್ಣಿನಿಂದ ನೋಡುತ್ತೇವೆ. ಆದರೆ ಯಾವುದೇ ಆವಿಷ್ಕಾರಗಳನ್ನು ನೋಡಲು ಅನುಭವಿಸಲು, ಆನಂದಿಸಲು ಸದೃಢ ಮೆದುಳು ಇದ್ದರೆ ಮಾತ್ರ ಸಾಧ್ಯ. ಹಾಗಾಗಿ ಎಲ್ಲಕ್ಕಿಂತ ಮುಖ್ಯವಾದ, ವಿಶೇಷವಾದ ಮಾನಸಿಕ ಆರೋಗ್ಯದ ಅರಿವು ಎಲ್ಲರಲ್ಲೂ ಮೂಡಬೇಕೆಂದರು. ಇದರ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿರುವ “ಮೈಂಡ್ ಆ್ಯಂಡ್ ಮ್ಯಾಟರ್'' ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.