ಕಣಿವೆ, ನ. ೧೨: ಮಡಿಕೇರಿ ದಸರಾ ಮಾದರಿಯಲ್ಲಿ ನಡೆಯುವ ಉತ್ತರ ಕೊಡಗಿನ ದೊಡ್ಡ ಗ್ರಾಮ ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದಲ್ಲಿ ತಾ.೨೧ ರಂದು ಗ್ರಾಮ ದೇವತೆ ಬನಶಂಕರಿ ಹಬ್ಬ ಬಹಳ ವಿಜೃಂಭಣೆಯಿAದ ನಡೆಯಲಿದೆ.

ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಗ್ರಾಮ ಪಂಚಾಯಿತಿ ಹಬ್ಬಕ್ಕೆ ಬರುವ ಭಕ್ತ ಜನರನ್ನು ಸ್ವಾಗತಿಸಲೊ ಏನೋ ಎಂಬAತೆ ಗ್ರಾಮದಲ್ಲಿ ಹಾದು ಹೋಗಿರುವ ಕುಶಾಲನಗರ ಹಾಸನ ರಾಜ್ಯ ಹೆದ್ದಾರಿಯ ಬದಿಯಲ್ಲಿ ಇಡೀ ಊರಿನಲ್ಲಿ ಸಂಗ್ರಹವಾಗುವ ಕಸ ತ್ಯಾಜ್ಯವನ್ನು ಕಳೆದ ಅನೇಕ ತಿಂಗಳಿAದ ಹೆದ್ದಾರಿ ಬದಿಯಲ್ಲೇ ಸುರಿದಿದೆ, ಸುರಿಯುತ್ತಲೇ ಇದೆ.

ಇದೇ ರಸ್ತೆಯಲ್ಲಿ ಊರಿನ ಜನರ ಆರೋಗ್ಯ ಕಾಯುವ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇದ್ದು, ರೋಗಿಗಳು ಮೂಗು ಮುಚ್ಚಿ ತೆರಳುವಂತಹ ಸ್ಥಿತಿ ನಿರ್ಮಾಣವಾಗಿದೆ.

ಈ ಕಸ ತುಂಬಿದ ತ್ಯಾಜ್ಯದ ಬಳಿಯೇ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಪ್ಲೆಕ್ಸ್ ಕೂಡ ಅಳವಡಿಸಲಾಗಿದೆ.

ಆದರೆ ಇಲ್ಲಿ ಸ್ಥಳೀಯ ಪಂಚಾಯಿತಿ ಆಡಳಿತ ಮಂಡಳಿಗೆ ಕನಿಷ್ಟ ಪ್ರಜ್ಞೆಯಾದರೂ ಇರಬೇಕಿತ್ತು.

ಕ್ಷೇತ್ರದ ಶಾಸಕರ ಭಾವಚಿತ್ರವನ್ನು ಅಳವಡಿಸಿರುವ ಸ್ಥಳದಲ್ಲಾದರೂ ಸ್ವಚ್ಛತೆ ನಿರ್ವಹಣೆ ಮಾಡಬೇಕಿತ್ತು.

ಅಥವಾ, ಇಂತಹ ಕೊಳಕು ತ್ಯಾಜ್ಯ ಇರುವ ಕಡೆ ಶಾಸಕರ ಭಾವಚಿತ್ರ ಹಾಕುವ ಕಾರ್ಯಕರ್ತರು ಆಲೋಚಿಸಬೇಕಿತ್ತು. ಕೊಡಗು ಜಿಲ್ಲೆಗೆ ಹಾಸನದ ಕಡೆಯಿಂದ ಬರುವ ಪ್ರವಾಸಿಗರು ಈ ಹೆದ್ದಾರಿಯ ಬದಿಯಲ್ಲಿರುವ ಕಸದ ರಾಶಿ ಕಂಡು ಇದೇನಾ ಸ್ವಚ್ಛ ಕೊಡಗು ಎಂದು ಅಣಕವಾಡುವಂತಿದೆ. ಕಳೆದ ತಿಂಗಳಷ್ಟೆ ಇಡೀ ಕೊಡಗು ಸ್ವಚ್ಛ ಕೊಡಗು ಅಭಿಯಾನ ಮಾಡಿ ಜನರಲ್ಲಿ ಜಾಗೃತಿ ಉಂಟು ಮಾಡಿದರೂ ಕೂಡ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಅಥವಾ ಆಡಳಿತ ಮಂಡಳಿ ಕೊಂಚವಾದರೂ ಯೋಚಿಸಬೇಕಿತ್ತು. ಇನ್ನಾದರೂ ಈ ಹೆದ್ದಾರಿಯ ಸ್ವಚ್ಛತೆಗೆ ಪಂಚಾಯಿತಿ ಮುಂದಾಗಬೇಕಿದೆ.