ತಲಕಾವೇರಿ, ಅ. ೨೪: ಕಾವೇರಿ ಉಗಮ ಸ್ಥಾನ ತಲಕಾವೇರಿಯಿಂದ ೧೫ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆಗೆ ಸಾಧು-ಸಂತರು ಚಾಲನೆ ನೀಡುವ ಮೂಲಕ ಕಾವೇರಿ ರಕ್ಷಣೆಯ ಸಂದೇಶವನ್ನು ಸಾರುತ್ತಿದ್ದಾರೆ.

ಸ್ವಚ್ಛ ಕಾವೇರಿ ಧ್ಯೇಯದೊಂದಿಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಅಖಿಲ ಭಾರತ ಸನ್ಯಾಸಿ ಸಂಘದ ಆಶ್ರಯದಲ್ಲಿ ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ನಮಾಮಿ ಕಾವೇರಿ ಸಹಯೋಗದೊಂದಿಗೆ ತಲಕಾವೇರಿಯಿಂದ ಪೂಂಪ್‌ಹಾರ್ ತನಕ ನಡೆಯಲಿರುವ ಯಾತ್ರೆಗೆ ಬೆಂಗಳೂರಿನ ಕೈಲಾಸ ಆಶ್ರಮದ ಜಗದ್ಗುರು ಶ್ರೀ ಜಯೇಂದ್ರ ಪುರಿ ಸ್ವಾಮೀಜಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಜಗದ್ಗುರು ಶ್ರೀ ಜಯೇಂದ್ರ ಪುರಿ ಸ್ವಾಮೀಜಿ, ರಾಷ್ಟçದಲ್ಲಿ ನದಿಗಳ ಸಂರಕ್ಷಣೆಗೆ ಸರಕಾರಗಳು ವಿಶೇಷ ಕಾಳಜಿ ವಹಿಸಬೇಕು. ಗಂಗಾ, ಕಾವೇರಿ ಎನ್ನುವ ಬೇಧವಿಲ್ಲದೆ ನದಿಗಳ ಸಂರಕ್ಷಣೆ ಸರಕಾರದ ಆದ್ಯತೆಯಾಗ ಬೇಕು. ಕಾವೇರಿಗೆ ಇಳಿಯುವವರು ಮಡಿಯಾಗಿಳಿದು ನದಿ ಸ್ವಚ್ಛತೆಗೆ ಸ್ವಯಂಪ್ರೇರಿತವಾಗಿ ಕೈಜೋಡಿಸ ಬೇಕು. ನದಿ ಕಲುಷಿತಗೊಳಿಸುವುದು ಪಾಪದ ಕೆಲಸ ಎಂದರು.

ಕರ್ನಾಟಕ ಕೊಡವ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ನದಿ ಸಂರಕ್ಷಣೆ ಹಾಗೂ ಸ್ವಚ್ಛತೆಗೊಳಿಸುವ ಗುರಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು. ನದಿ ತೀರದ ಸ್ವಚ್ಛತೆ ಬಗ್ಗೆ ಸ್ಥಳೀಯ ಆಡಳಿತ ಹಾಗೂ ಸರಕಾರಗಳು ಗಮನಹರಿಸಬೇಕು. ನದಿಗಳು ನಾಡಿನ ಜೀವನಾಡಿಗಳಾಗಿದ್ದು, ಇದರಿಂದ ಮಾತ್ರ ಮನು, ಜೀವಸಂಕುಲ ಉಳಿಯಲು ಸಾಧ್ಯ. ನೈಸರ್ಗಿಕ ಸಂಪನ್ಮೂಲ ರಕ್ಷಿಸುವ ಕೆಲಸವಾಗಬೇಕು. ಕಾವೇರಿ ರಕ್ಷಣೆಯ ಬಗ್ಗೆ ಜಾಗೃತರಾಗಬೇಕು ಎಂದು ಕಿವಿಮಾತನಾಡಿದರು.

ಅಖಿಲ ಭಾರತ ಸನ್ಯಾಸಿ ಸಂಘದ ಪ್ರಮುಖರಾದ ಸ್ವಾಮಿ ಶಿವರಾಮಾನಂದ ಅವರು ಮಾತನಾಡಿ, ೧೫ ವರ್ಷಗಳಿಂದ ನಿರಂತರವಾಗಿ ಯಾತ್ರೆ ನಡೆಯುತ್ತಿರುವುದು ಗಮನಾರ್ಹ ವಿಷಯವಾಗಿದೆ. ದಕ್ಷಿಣ ಭಾರತದ ಜೀವನದಿ ಕಾವೇರಿ ಸೇರಿದಂತೆ ಹಲವು ನದಿಗಳ ಸಂರಕ್ಷಣೆಗೆ ನಿರಂತರ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಹಾಗೂ ತಮಿಳುನಾಡಿನ ಪ್ರಮುಖ ಸ್ಥಳಗಳಲ್ಲಿ ಕಾವೇರಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಉಭಯ ಸರಕಾರಗಳು ಸೇರಿದಂತೆ ಕೇಂದ್ರ ಸರಕಾರಕ್ಕೆ ನದಿ ಸಂರಕ್ಷಣೆಗೆ ಯೋಜನೆ ಹಾಗೂ ಕಾನೂನು ರೂಪಿಸಲು ಈ ಮೂಲಕ ಗಮನ ಸೆಳೆಯಲಾಗುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಮೂಲದಲ್ಲೇ ಕಾವೇರಿ ನದಿ ಕಲುಷಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ನೀರಿನ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿಅAಶ ನೀಡಿದೆ. ಸರಕಾರ ಕೂಡಲೇ ಎಚ್ಚೆತ್ತು ನದಿ ಸಂರಕ್ಷಣೆಗೆ ಕಾನೂನು ರೂಪಿಸಿ ಅನುಷ್ಠಾನಗೊಳಿಸಬೇಕು. ನದಿಗಳಿಗೆ ಜೀವಂತ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ತಲಕಾವೇರಿ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹೋಮ ಹವನ ನೆರವೇರಿಸಿದ ಬಳಿಕ ಕಾವೇರಿ ತೀರ್ಥವನ್ನು ರಥಕ್ಕೆ ಸ್ಥಳಾಂತರಿಸಿ ಯಾತ್ರೆಗೆ ಮುನ್ನುಡಿ ಇಡಲಾಯಿತು. ಭಾಗಮಂಡಲಕ್ಕೆ ತಲುಪಿ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಗಮದಲ್ಲಿ ಕಾವೇರಿ ಮಾತೆ ಪ್ರತಿಮೆಗೆ ಆರತಿಯೊಂದಿಗೆ ಪೂಜೆ ಸಲ್ಲಿಸಿ ಯಾತ್ರೆ ಮುಂದುವರಿಸಿ ಕುಶಾಲನಗರಕ್ಕೆ ತಲುಪಿ ಅಲ್ಲಿ ಕಾವೇರಿ ನದಿ ತಟದಲ್ಲಿ ೧೭೮ನೇ ವಿಶೇಷ ಆರತಿ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭ ಅಖಿಲ ಭಾರತ ಸನ್ಯಾಸಿ ಸಂಘದ ಸ್ಥಾಪಕರಾದ ಶ್ರೀ ರಮಾನಂದ ಮಹಾರಾಜ, ಸ್ವಾಮಿ ಆತ್ಮಾನಂದ ಸರಸ್ವತಿ, ಸ್ವಾಮಿ ವೇದಾನಂದ, ಸ್ವಚ್ಛತಾ ಆಂದೋಲನ ಸಮಿತಿಯ ತಮಿಳುನಾಡು ಪ್ರಾಂತದ ವಾಸು ರಾಮಚಂದ್ರನ್, ಕಾವೇರಿ ಜಾಗೃತಿ ತೀರ್ಥ ಯಾತ್ರೆ ಸಮಿತಿ ಸ್ಥಾಪಕ ಸಂಯೋಜಕ ಚಿ.ನಾ. ಸೋಮೇಶ್, ನಮಾಮಿ ಕಾವೇರಿಯ ಅಧ್ಯಕ್ಷೆ ವನಿತಾ ಚಂದ್ರಮೋಹನ್, ಕಾವೇರಿ ಮಹಾ ಆರತಿ ಬಳಗದ ಕೊಕ್ಕಲೆರ ಧರಣಿ, ಸುಮನ್ ಮಳಲಗದ್ದೆ, ತಲಕಾವೇರಿ ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯ ಸೇರಿದಂತೆ ಮತ್ತಿತರರು ಇದ್ದರು. ತಾ. ೨೫ ರಿಂದ ಕಣಿವೆ ಮೂಲಕ ಹಾಸನ ಜಿಲ್ಲೆಯ ರಾಮನಾಥಪುರಕ್ಕೆ ಯಾತ್ರೆ ತೆರಳಲಿದೆ.