ಕೂಡಿಗೆ, ಅ. ೨೧: ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಜಮೀನಿನಲ್ಲಿ ಕಟಾವು ಮಾಡಿ ಕಳೆದ ವಾರ ಸ್ವಲ್ಪ ಬಿಸಿಲಿನ ವಾತಾವರಣ ಕಂಡು ಬಂದ ಹಿನ್ನೆಲೆಯಲ್ಲಿ ಸಂಗ್ರಹಿಸಲಾಗಿತ್ತು. ಯಂತ್ರದ ಮೂಲಕ ಮೆಕ್ಕೆಜೋಳದ ಕಾಳುಗಳನ್ನಾಗಿ ಮಾಡಿ ಜಮೀನಿನ ಕಣದಲ್ಲಿ ಸಂಗ್ರಹಿಸಲಾಗಿತ್ತು. ಅದರೆ ಅಕಾಲಿಕ ಮಳೆಯಿಂದಾಗಿ ಜೋಳಕಾಳುಗಳು ಮೊಳಕೆ ಮಾಡುತ್ತಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

ಮೆಕ್ಕೆಜೋಳವನ್ನು ಕಾಳುಗಳಾಗಿ ಪರಿವರ್ತನೆ ಮಾಡಿದ ನಂತರ ಒಣಗಿಸಿ ಮಾರಾಟ ಮಾಡುವುದು ಸಾಮಾನ್ಯ, ಅದರೆ, ಮೆಕ್ಕೆಜೋಳ ಮಳೆಯಿಂದಾಗಿ ಹಸಿ ಇರುವುದರಿಂದ ಖರೀದಿದಾರರು ಹಿಂದೇಟು ಹಾಕುತ್ತಿದ್ದಾರೆ.

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮಳೆ ಆಶ್ರಯದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಮೆಕ್ಕೆಜೋಳದ ಬೆಳೆಯನ್ನು ಬೆಳೆದು ಕಟಾವು ಹಂತಕ್ಕೆ ಬಂದು, ಅಕಾಲಿಕ ಮಳೆಯಿಂದಾಗಿ ಬೆಳೆಯು ನೆಲಕಚ್ಚಿದೆ. ಇದರಿಂದಾಗಿ ತಾಲೂಕು ವ್ಯಾಪ್ತಿಯ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೂಡಿಗೆ ಕೂಡುಮಂಗಳೂರು, ಅಳುವಾರ, ಸಿದ್ದಲಿಂಗಪುರ, ೬ನೇ ಹೊಸಕೊಟೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ೫೦ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ಅಕಾಲಿಕ ಮಳೆಯಿಂದಾಗಿ ಮೆಕ್ಕೆಜೋಳದ ಬೆಳೆಯು ಹಾಳಾಗುತ್ತಿದೆ.

ಕೃಷಿ ಇಲಾಖೆಯ ಅಧಿಕಾರಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರವನ್ನು ಒದಗಿಸುವಂತೆ ಈ ವ್ಯಾಪ್ತಿಯ ನೂರಾರು ರೈತರ ಅಗ್ರಹವಾಗಿದೆ.