ಮಡಿಕೇರಿ, ಸೆ. ೧೬ : ನಿವೇಶನ ರಹಿತ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ನಿವೇಶನ ಹೋರಾಟ ಸಮಿತಿ ಚೆಟ್ಟಳ್ಳಿಯಲ್ಲಿ ಪ್ರತಿಭಟನೆ ನಡೆಸಿತು.ಚೆಟ್ಟಳ್ಳಿ ಗ್ರಾ.ಪಂ. ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಂತವಾಗಿ ವಾಸಿಸಲು ಮನೆಯಿಲ್ಲದ ಸುಮಾರು ೧೦೦ಕ್ಕಿಂತಲೂ ಹೆಚ್ಚು ಕುಟುಂಬಗಳು ತೋಟದ ಲೈನ್‌ಮನೆಗಳಲ್ಲಿ, ಅಪಾಯಕಾರಿ ಪ್ರದೇಶಗಳಲ್ಲಿ ಬದುಕು ಸಾಗಿಸುತ್ತಿವೆ.

ಸರಕಾರ ಬಡವರ ಬಗ್ಗೆ ಕಾಳಜಿ ತೋರಿ ಲೈನ್ ಮನೆ, ಬಾಡಿಗೆ ಮನೆ, ಸಂಬAಧಿಕರ ಆಶ್ರಯದಲ್ಲಿ ಹಾಗೂ ಅಪಾಯಕಾರಿ ಜಾಗದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡಬೇಕು. ಒತ್ತುವರಿ ಸರಕಾರಿ ಜಾಗವನ್ನು ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು. ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನ ರಹಿತರ ಅರ್ಜಿ ಸ್ವೀಕಾರಕ್ಕೆ ದಿನಾಂಕ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ಮನವಿ ಪತ್ರವನ್ನು ಗ್ರಾ.ಪಂ. ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿ ಹಾಗೂ ಸರಕಾರಕ್ಕೆ ಸಲ್ಲಿಸಿದರು.

ಕೊಡಗು ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್‌ನ ಜಿಲ್ಲಾಧ್ಯಕ್ಷ ಹೆಚ್.ಬಿ.ರಮೇಶ್, ಹೋರಾಟ ಸಮಿತಿಯ ಸಂಚಾಲಕ ಎಸ್.ಬಿ.ಜಯರಾಮ್, ಸದಸ್ಯರಾದ ಗಂಗಾಧರ್, ಎಂ.ಆರ್.ಕಮಲ, ಪುಷ್ಪ, ಸರಸು, ಕೃಷ್ಣಕುಮಾರ್, ರಮ್ಯ, ಕನ್ಯಾಕುಮಾರಿ ಸೇರಿದಂತೆ ನಿವೇಶನ ರಹಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.