ಮಡಿಕೇರಿ, ಸೆ. ೧೬ : ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ವಿಜೇತ ತಂಡಗಳಿಗೆ ನಸುಕಿನಲ್ಲಿ ಬಹುಮಾನ ನೀಡುವ ಸ್ಥಳವನ್ನು ಗಾಂಧಿ ಮೈದಾನದಿಂದ ಬನ್ನಿಮಂಟಪದ ಎ.ವಿ ಶಾಲೆಯ ಬಳಿಗೆ ಸ್ಥಳಾಂತರ ಮಾಡಬೇಕು ಎಂದು ಮಡಿಕೇರಿ ದಸರಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಹಾಗೂ ಪುರಸಭೆಯ ಮಾಜಿ ಸದಸ್ಯ ಎಂ.ಪಿ. ಕೃಷ್ಣರಾಜು ಒತ್ತಾಯಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ದಶಮಂಟಪಗಳ ಪೈಕಿ ಹಲವು ಮಂಟಪಗಳು ಬನ್ನಿಮಂಟಪಕ್ಕೆ ಬರುತ್ತಿಲ್ಲ. ಸಂಪ್ರದಾಯ ನಿಯಮಬದ್ಧವಾಗಿ ಪಾಲನೆಯಾಗುತ್ತಿಲ್ಲ. ಅಲ್ಲದೆ ಗಾಂಧಿ ಮೈದಾನದ ಆಸುಪಾಸಿನಲ್ಲೇ ಅಪಾರ ಜನದಟ್ಟಣೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಬಹುಮಾನ ಘೋಷಿಸುವ ಸ್ಥಳವನ್ನು ಬದಲಾವಣೆ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖವಾಗಿ ಬನ್ನಿಮಂಟಪದ ವ್ಯಾಪ್ತಿಯ ಎ.ವಿ. ಶಾಲೆಯ ಬಳಿಯೇ ಬಹುಮಾನ ಘೋಷಣೆ ಮತ್ತು ಬಹುಮಾನ ನೀಡುವ ಕಾರ್ಯಕ್ರಮ ನಡೆದರೆ ಅನಿವಾರ್ಯವಾಗಿ ಎಲ್ಲಾ ೧೦ ಮಂಟಪಗಳು ಇಲ್ಲಿಗೆ ಬರುತ್ತವೆ. ಆ ಮೂಲಕ ಸಂಪ್ರದಾಯ ಕೂಡ ಪಾಲನೆಯಾಗುತ್ತದೆ ಮತ್ತು ಜನಸಂದಣಿ ಉಂಟಾಗುವುದನ್ನೂ ತಪ್ಪಿಸಬಹುದಾಗಿದೆ. ಈ ಕುರಿತು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಅವರು ಚಿಂತನೆ ನಡೆಸಬೇಕು ಎಂದು ಎಂ.ಪಿ .ಕೃಷ್ಣರಾಜು ಮನವಿ ಮಾಡಿದ್ದಾರೆ.