ಮಡಿಕೇರಿ ಸೆ. ೧೬: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘಕ್ಕೆ ರೂ. ೧೧,೮೬,೪೫೩ ನಿವ್ವಳ ಲಾಭ ದೊರೆತ್ತಿದ್ದು, ಸದಸ್ಯರಿಗೆ ಶೇ. ೧೫ ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸೂದನ ಎಸ್. ಈರಪ್ಪ ತಿಳಿಸಿದ್ದಾರೆ.
ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯು. ತಾ. ೧೭ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಮಡಿಕೇರಿಯ ಕೆಳಗಿನ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸಂಘದಲ್ಲಿ ಒಟ್ಟು ೩೧೬೮ ಸದಸ್ಯರಿದ್ದಾರೆ, ಅವರಲ್ಲಿ ಇಂದಿನವರೆಗೆ ಸುಮಾರು ೧೦೨೦ ಸದಸ್ಯರು ಪೂರ್ಣ ಪಾಲುಹಣ ಹೊಂದಿದ್ದು, ೫೩೪ ಮಂದಿ ಮರಣನಿಧಿಯ ಅವಕಾಶವನ್ನು ಪಡೆದುಕೊಂಡಿದ್ದಾರೆ. ಏಲಕ್ಕಿ ಬೆಳೆ ಜಿಲ್ಲೆಯಲ್ಲಿ ಕಳೆದ ಮೂವತೈದು ವರ್ಷಗಳಿಂದ ಕಟ್ಟೆರೋಗ ಮತ್ತಿತರ ಕಾರಣಗಳಿಂದ ಕುಂಠಿತವಾದ ಹಿನ್ನೆಲೆ ಮಡಿಕೇರಿ ಕೇಂದ್ರ ಕಚೇರಿ ಮತ್ತು ಸೋಮವಾರಪೇಟೆ ಶಾಖೆಯಲ್ಲಿ ಹತ್ಯಾರು ಮಳಿಗೆಯನ್ನು ಸ್ಥಾಪಿಸಿ ಸದಸ್ಯರಿಗೆ ಬೇಕಾದ ಉಪಕರಣ, ಗೊಬ್ಬರ, ಔಷಧಿ ಮುಂತಾದವುಗಳನ್ನು ಮಾರಾಟ ಮಾಡುವ ಮೂಲಕ ಸ
ಂಘವನ್ನು ಮುನ್ನಡೆಸಿಕೊಂಡು ಬರಲಾಗುತ್ತಿದೆ. ಕಳೆದ ೩ ವರ್ಷಗಳಿಂದ ಕೇಂದ್ರ ಕಚೇರಿಯ ಕಟ್ಟಡದಲ್ಲಿ "ಉತ್ಪತ್ತಿ" ಮಳಿಗೆಯೊಂದನ್ನು ಸ್ಥಾಪಿಸಲಾಗಿದ್ದು, ಕೊಡಗಿನ ರೈತರಿಂದ ಏಲಕ್ಕಿ, ಕರಿಮೆಣಸು, ಉತ್ತಮವಾದ ಜೇನು, ಕಾಚಂಪುಳಿ, ವೈನ್ ಮುಂತಾದ ಸಾಮಗ್ರಿಗಳನ್ನು ನ್ಯಾಯಯುತವಾದ ಬೆಲೆಯಲ್ಲಿ ಖರೀದಿಸಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಸೂದನ ಎಸ್. ಈರಪ್ಪ ಮಾಹಿತಿ ನೀಡಿದ್ದಾರೆ.
ಉತ್ಪತ್ತಿ ಮಳಿಗೆ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದ್ದು, ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿದೆ. ಸಂಘದಲ್ಲಿ ಸದಸ್ಯರು ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸದಾ ತೊಡಗಿಸಿಕೊಳ್ಳುವಂತೆ ಮಾಡಲು ಮುಂದಿನ ದಿನಗಳಲ್ಲಿ ಹಲವಾರು ಉತ್ತಮ ಯೋಜನೆಗಳನ್ನು ಹಮ್ಮಿಕೊಂಡು ಸಂಘವನ್ನು ಸುಭದ್ರಗೊಳಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಸಂಘದಲ್ಲಿ ಏಲಕ್ಕಿ ಮತ್ತು ಕರಿಮೆಣಸನ್ನು ಸದಸ್ಯರಿಂದ ಠೇವಣಿ ಇಟ್ಟುಕೊಳ್ಳುತ್ತಿದ್ದು, ಇದರ ಸದುಪಯೋಗವನ್ನು ಸದಸ್ಯರು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.