ಮಡಿಕೇರಿ, ಸೆ. ೧೬: ಸರಕಾರದಿಂದ ಅಗತ್ಯ ಅನುದಾನ ಬಿಡುಗಡೆಯಾಗದೆ ವಿಳಂಬವಾಗುತ್ತಿರುವ ಕಾರಣದಿಂದ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಸಾಧ್ಯವಾಗಿಲ್ಲ ಎಂದು ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸಮ್ಮೇಳನಕ್ಕೆ ರೂ. ೫ ಲಕ್ಷ, ತಾಲೂಕು ಸಮ್ಮೇಳನಕ್ಕೆ ರೂ. ೧ ಲಕ್ಷ ಹಣ ಸರಕಾರದಿಂದ ಬಿಡುಗಡೆಯಾಗುತ್ತದೆ. ಆದರೆ, ಕಳೆದ ೨ ವರ್ಷಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಅನುದಾನ ಲಭ್ಯವಾಗದ ಕಾರಣದಿಂದ ಸಮ್ಮೇಳನಗಳನ್ನು ಆಯೋಜಿಸಲು ಸಾಧ್ಯವಾಗಿಲ್ಲ. ಇತ್ತೀಚಿಗೆ ಜಿಲ್ಲಾ, ತಾಲೂಕು, ಹೋಬಳಿ ಮಟ್ಟದ ಪದಾಧಿಕಾರಿ ಹಾಗೂ ಸದಸ್ಯರ ಸಭೆ ನಡೆದಿದ್ದು, ಅಗತ್ಯ ಸಲಹೆಗಳು ಬಂದಿವೆ. ಕ.ಸಾ.ಪ.ದಿಂದ. ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದತ್ತಿ ಕಾರ್ಯಕ್ರಮದ ಸಂಖ್ಯೆ ಹೆಚ್ಚು ಮಾಡಲಾಗಿದೆ. ೧ ಸಾವಿರ ಸದಸ್ಯರ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಇನ್ನೂ ಒಂದು ಸಾವಿರ ಸದಸ್ಯರನ್ನು ಸೇರಿಸುವ ಗುರಿ ಹೊಂದಲಾಗಿದೆ. ಅನುದಾನ ಬಿಡುಗಡೆಯಾಗದ ಕುರಿತು ರಾಜ್ಯಾಧ್ಯಕ್ಷರ ಗಮನ ಸೆಳೆದು ಸರಕಾರದ ಬಳಿ ನಿಯೋಗ ೭ನೇ ಪು (ಮೊದಲ ಪುಟದಿಂದ) ತೆರಳಿ ಒತ್ತಡ ಹಾಕುವ ಕೆಲಸವನ್ನು ಮಾಡಲಾಗುವುದು ಎಂದರು.
ಶಾಲಾ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಬಳಸಿಕೊಳ್ಳಬಾರದು ಎಂಬ ಸರಕಾರದ ಸುತ್ತೋಲೆ ಸರಿಯಲ್ಲ. ಯುವಪೀಳಿಗೆಗೆ ಸಾಹಿತ್ಯದ ಒಲವು ಮೂಡಿಸುವುದು ಅನಿವಾರ್ಯವಾಗಿದೆ. ಸುತ್ತೋಲೆಯಿಂದ ಇದಕ್ಕೆ ವ್ಯತಿರಿಕ್ತ ಪರಿಣಾಮ ಬೀರಿದಂತಾಗುತ್ತದೆ. ಡಿಸೆಂಬರ್ ಒಳಗೆ ಅನುದಾನ ಬಿಡುಗಡೆಯಾಗಬೇಕು.
೨ ವರ್ಷಗಳಿಂದ ಸಮ್ಮೇಳನ ನಡೆಯದ ಹಿನ್ನೆಲೆ ಸಾಹಿತ್ಯಕ ವಾತಾವರಣ ಕಳೆದು ಹೋಗಿದೆ. ಮುಂದಿನ ದಿನಗಳಲ್ಲಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಸಮ್ಮೇಳನ, ಲೇಖಕರಿಗೆ ಕಾರ್ಯಾಗಾರ, ಯುವ ಕವಿಗೋಷ್ಠಿ, ಹಿರಿಯರ ಕವಿಗೋಷ್ಠಿಗಳನ್ನು ನಡೆಸಲಾಗುವುದು. ಈಗಾಗಲೇ ತಾಲೂಕು, ಹೋಬಳಿ ಮಟ್ಟದ ಪದಾಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದ್ದು, ನಿರೀಕ್ಷಿತ ಪ್ರಮಾಣದ ಕೆಲಸಗಳನ್ನು ಮಾಡದಿದ್ದರೆ ಜಿಲ್ಲಾಧ್ಯಕ್ಷರು ಕ್ರಮಕೈಗೊಳ್ಳುತ್ತಾರೆ ಎಂದು ಎಚ್ಚರಿಸಿದರು.
ಸಾಹಿತ್ಯ ಭವನ ನಿರ್ಮಾಣಕ್ಕೆ ಪ್ರಯತ್ನ
ಮಡಿಕೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಭವನ ನಿರ್ಮಾಣಕ್ಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾಹಿತಿ ನೀಡಿದರು.
ಸುದರ್ಶನ ವೃತ್ತದ ಬಳಿ ೬೦ ಸೆಂಟ್ ಜಾಗವಿದ್ದು, ಸಾಹಿತ್ಯ ಭವನ ನಿರ್ಮಾಣ ನಿಟ್ಟಿನಲ್ಲಿ ಸಮಿತಿ ರಚಿಸಿ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಶಾಸಕರುಗಳಾದ ಡಾ. ಮಂತರ್ ಗೌಡ, ಎ.ಎಸ್. ಪೊನ್ನಣ್ಣ, ಮಾಜಿ ಶಾಸಕರು, ಜನಪ್ರತಿನಿಧಿಗಳನ್ನು ಮಹಾಪೋಷಕರಾಗಿ ನೇಮಿಸಿಕೊಳ್ಳಲಾಗಿದೆ. ೩ ರಿಂದ ೪ ಕೋಟಿ ವೆಚ್ಚದಲ್ಲಿ ಉತ್ತಮ ಕಟ್ಟಡವನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜನೆಯಲ್ಲಿ ಉಳಿದ ಹಣವನ್ನು ಇದಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
೫೧ ದತ್ತಿ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಮಾಡಲಾಗಿದೆ. ಸಾಹಿತ್ಯ ಪರಿಷತ್ತು ಸ್ಥಾಪಕರಾದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್. ಎಂ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಜಯಂತಿ, ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪಂಜೆ ಮಂಗೇಶರಾಯರ ೧೫೦ನೇ ಜನ್ಮದಿನವನ್ನು ಮಡಿಕೇರಿಯಲ್ಲಿ ಆಯೋಜನೆ ಮಾಡಲಾಗಿತ್ತು. ಡಾ. ಎಂ.ಜಿ. ನಾಗರಾಜ್ ಮತ್ತು ಸುಲೋಚನ ದಂಪತಿ ಸಾಹಿತ್ಯಕ ಕಾರ್ಯಕ್ರಮದಲ್ಲಿ ಕೊಡಗಿನ ದೇವರ ಕಾಡು, ಪುರಾತತ್ವ ವಿಚಾರ, ಸಾಹಿತ್ಯ, ಕಲೆ, ಜಾನಪದ, ಪರಿಸರ ಕುರಿತು ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ ನಡೆಸಲಾಗಿದೆ ಎಂದರು.
ಕನ್ನಡ ಮಾಧ್ಯಮದಲ್ಲಿ ೧೦ನೇ ತರಗತಿ ಮತ್ತು ಪದವಿ ಪೂರ್ವ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕು ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಪರಿಷತ್ತು ಗೌರವ ಕಾರ್ಯದರ್ಶಿಗಳಾದ ಮುನೀರ್ ಅಹಮ್ಮದ್, ರೇವತಿ ರಮೇಶ್, ಸಂಘಟನಾ ಕಾರ್ಯದರ್ಶಿ ಬಿ.ಎಂ. ವಾಸು ರೈ ಹಾಜರಿದ್ದರು.