*ಗೋಣಿಕೊಪ್ಪ, ಸೆ. ೧೨: ಸಿಲ್ವರ್ ಮರದ ತುಂಡುಗಳ ಕೆಳಗೆ ಬೀಟಿ ಮರಗಳ ನಾಟಾವನ್ನು ಸಂಗ್ರಹಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ತಿತಿಮತಿ ಆನೆಚೌಕರು ವಲಯ ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಣಸೂರಿನ ಈರದಾಸಯ್ಯಕೊಪ್ಪಲು ಗ್ರಾಮದ ದರ್ಶನ್ ಬಂಧಿತ ಆರೋಪಿ. ವಾಹನ ಮಾಲೀಕ ವೀರಾಜಪೇಟೆ ನೆಹರು ನಗರದ ಮೊಹಮ್ಮದ್ ಇನಾಯತ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವಾದ ಆನೆಚೌಕೂರು ಮೂಲಕ ಯಾವುದೇ ರಹದಾರಿ ಇಲ್ಲದೆ ಮಹೇಂದ್ರ ಬೊಲೆರೋ ಪಿಕಪ್ ವಾಹನದಲ್ಲಿ (ಕೆಎ-೧೨-ಸಿ-೨೨೮೬) ಸಿಲ್ವರ್ ಮರದ ತುಂಡುಗಳ ಕೆಳಭಾಗದಲ್ಲಿ ಬೀಟೆ ಮರವನ್ನು ಸಾಗಿಸುತ್ತಿರುವುದನ್ನು ಪತ್ತೆಹಚ್ಚಿದ ಅರಣ್ಯಾಧಿಕಾರಿಗಳು ಮಾಲುಸಹಿತ ಆರೋಪಿಯನ್ನು ಬಂಧಿಸಿ ವಿವಿಧ ಕಾಯಿದೆಗಳಡಿ ಪ್ರಕರಣ ದಾಖಲಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಹುಲಿ ಸಂರಕ್ಷಿತ ಪ್ರದೇಶ ನಾಗರಹೊಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎ. ಸೀಮ, ವನ್ಯಜೀವಿ ವಲಯ ಉಪ ಸಂರಕ್ಷಣಾಧಿಕಾರಿ ಎನ್ ಲಕ್ಷಿ÷್ಮಕಾಂತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆನೆಚೌಕರು ವನ್ಯಜೀವಿ ವಲಯ ಅರಣ್ಯಾಧಿಕಾರಿ ಡಿ. ದೇವರಾಜು, ಉಪವಲಯ ಅರಣ್ಯಾಧಿಕಾರಿ ಚೆನ್ನವೀರೇಶ ಗಾಣಗೇರ, ದೇವಮಚ್ಚಿ ಶಾಖೆಯ ಮೊಜಣಿದಾರ ಸಿ.ಎನ್ ರಮ್ಯ, ಗಸ್ತು ಅರಣ್ಯಪಾಲಕ ಮಹಾದೇವ್ ಎಂ.ಎಸ್ ಹಾಗೂ ಸಿಬ್ಬಂದಿಗಳು ಇದ್ದರು.
-ಎನ್.ಎನ್. ದಿನೇಶ್