ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ

ನವದೆಹಲಿ, ಏ. ೨: ಪ್ರತಿಪಕ್ಷಗಳ ತೀವ್ರ ಗದ್ದಲ ಹಾಗೂ ವಿರೋಧದ ನಡುವೆಯೂ ಬುಧವಾರ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ೨೦೨೪ ಅನ್ನು ಮಂಡಿಸಿದ್ದಾರೆ. ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಮಂಡಿಸಿ ಮಾತನಾಡಿದ ಕಿರಣ್ ರಿಜಿಜು ಅವರು, ವಕ್ಫ್ ಮಸೂದೆಯನ್ನು ಏಕೀಕೃತ ವಕ್ಫ್ ನಿರ್ವಹಣಾ ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ (Uಒಇಇಆ) ಮಸೂದೆ ಎಂದು ಮರುನಾಮಕರಣ ಮಾಡಲಾಗುವುದು ಎಂದರು. ಈ ಮಸೂದೆಯು ವಕ್ಫ್ ಆಸ್ತಿಗಳ ಆಡಳಿತವನ್ನು ಸುಧಾರಿಸಲು, ತಂತ್ರಜ್ಞಾನ ಆದಾರಿತ ನಿರ್ವಹಣೆಯನ್ನು ಪರಿಚಯಿಸಲು, ಸಂಕೀರ್ಣತೆಗಳನ್ನು ಪರಿಹರಿಸಲು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ನಡೆಸಿದ ಸಮಾಲೋಚನಾ ಪ್ರಕ್ರಿಯೆಯು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿಯೇ ಅತಿದೊಡ್ಡ ಪ್ರಕ್ರಿಯೆಯಾಗಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವಕ್ಫ್ ಆಸ್ತಿಗಳನ್ನು ಹೊಂದಿದೆ. ವಕ್ಫ್ ಮಸೂದೆ ಬೆಂಬಲಿಸುವ ಮತ್ತು ವಿರೋಧಿಸುವವರನ್ನು ದೇಶ ಯುಗಯುಗಾಂತರಗಳಿAದ ನೆನಪಿಸಿಕೊಳ್ಳುತ್ತದೆ. ೭೦ ವರ್ಷಗಳಿಂದ ಮತ ಬ್ಯಾಂಕ್ ರಾಜಕೀಯಕ್ಕಾಗಿ ಮುಸ್ಲಿಮರನ್ನು ದಾರಿ ತಪ್ಪಿಸಲಾಯಿತು; ನೀವು ಅವರನ್ನು ಎಷ್ಟು ದಿನ ದಾರಿ ತಪ್ಪಿಸಲು ಬಯಸುತ್ತೀರಿ. ವಕ್ಫ್ ಆಸ್ತಿಯನ್ನು ಬಡ ಮುಸ್ಲಿಮರಿಗಾಗಿ ಬಳಸಬೇಕು, ಈ ಉದ್ದೇಶವನ್ನು ಸಾಧಿಸಲು ವಕ್ಫ್ ಮಸೂದೆ ಅಗತ್ಯವಿದೆ ಎಂದರು.

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ

ನವದೆಹಲಿ, ಏ. ೨: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಪ್ರದೇಶದ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಪಾಕ್ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ ಮತ್ತು ಅತಿಕ್ರಮಣ ನಡೆದಿದೆ ಎಂದು ವರದಿಯಾಗಿದೆ. ಇದಕ್ಕೆ ಭಾರತೀಯ ಸೇನೆಯು ತಕ್ಕ ಪ್ರತಿಕ್ರಿಯೆ ನೀಡಿದೆ ಎಂದು ಸೇನಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್ ಬುಧವಾರ ಹೇಳಿದ್ದಾರೆ. ಏಪ್ರಿಲ್ ೧ ರಂದು ಗಡಿ ನಿಯಂತ್ರಣ ರೇಖೆಯಾದ್ಯಂತ ದಾಟಿ ಪಾಕಿಸ್ತಾನ ಸೇನೆಯ ಒಳನುಸುಳುವಿಕೆಯ ಪರಿಣಾಮವಾಗಿ ಕೃಷ್ಣಘಾಟಿ ವಲಯದಲ್ಲಿ ಗಣಿ ಸ್ಫೋಟ ಸಂಭವಿಸಿದೆ. ಇದರ ನಂತರ ಕದನ ವಿರಾಮ ಒಪ್ಪಂದದ ಉಲ್ಲಂಘನೆ ಮಾಡಿರುವ ಪಾಕಿಸ್ತಾನ ಸೇನೆಯು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ತಿಳಿಸಿದರು. ಪಾಕಿಸ್ತಾನದ ಕಡೆಯಲ್ಲಿ ಸಾವು-ನೋವು ಸಂಭವಿಸಿದೆ ಎಂದು ಮತ್ತೊಂದು ಮೂಲ ವರದಿ ಮಾಡಿದೆ. ಆದರೆ, ಭಾರತದ ಕಡೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಶಾಸಕರ ಅಮಾನತು ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

ಬೆಂಗಳೂರು, ಏ. ೨: ಸ್ಪೀಕರ್ ಅವರು ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದ್ದಾರೆ. ಬಿಜೆಪಿಯ ೧೮ ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿದ ಕ್ರಮವನ್ನು ಖಂಡಿಸಿ ಬೆಂಗಳೂರಿನ ವಿಧಾನ ಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯ ೧೮ ಶಾಸಕರ ಅಮಾನತು ಕ್ರಮ ಸಂವಿಧಾನಬಾಹಿರ ಎಂದು ಆಕ್ಷೇಪಿಸಿದರು. ಜನಪ್ರತಿನಿಧಿಯನ್ನು ೬ ತಿಂಗಳ ಕಾಲ ಅಮಾನತು ಮಾಡಿ, ವಿಧಾನಸೌಧದ ಮೊಗಸಾಲೆಗೂ ಬರಬಾರದೆಂದು ಆದೇಶ ಮಾಡಿದ್ದಾರೆ. ಸ್ಪೀಕರ್ ಅವರು ಖಂಡಿತವಾಗಿ ಆಡಳಿತ ಪಕ್ಷದ ಕೈಗೊಂಬೆಯಾಗಿ ಹಾಗೂ ಮುಖ್ಯಮಂತ್ರಿಯನ್ನು ತೃಪ್ತಿಪಡಿಸಲು ಕಾನೂನು ಬಾಹಿರವಾಗಿ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿ ಈ ರೀತಿ ಆದೇಶ ಮಾಡಿದ್ದಾರೆ ಎಂದು ಟೀಕಿಸಿದರು.

ಮುಡಾ ಪ್ರಕರಣ-ಇ.ಡಿ.ಯಿಂದ ತಕರಾರರು ಅರ್ಜಿ

ಬೆಂಗಳೂರು, ಏ. ೨: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ೧೪ ನಿವೇಶನಗಳನ್ನು ಹಂಚಿಕೆ ಮಾಡಿದ ಪ್ರಕರಣದಲ್ಲಿ ಲೋಕಾಯುಕ್ತ ವರದಿಯನ್ನು ತಿರಸ್ಕರಿಸುವಂತೆ ಜಾರಿ ನಿರ್ದೇಶನಾಲಯವು (ಇ.ಡಿ) ತಕರಾರು ಅರ್ಜಿ ಸಲ್ಲಿಸಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಇ.ಡಿಯು ಬುಧವಾರ ಎಂಟು ಪುಟಗಳ ತಕರಾರು ಅರ್ಜಿ ಸಲ್ಲಿಸಿದೆ. ಪಾರ್ವತಿ ಅವರಿಗೆ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಸಾಕಷ್ಟು ಸಾಕ್ಷö್ಯಗಳು ನಮಗೆ ಲಭ್ಯವಿದೆ. ಇದರಲ್ಲಿ ವಿಸ್ತೃತ ತನಿಖೆ ಆಗಬೇಕು. ಹೀಗಾಗಿ ಲೋಕಾಯುಕ್ತ ವರದಿಯನ್ನು ತಿರಸ್ಕರಿಸಬೇಕು ಎಂದು ಇ.ಡಿ ಕೋರಿದೆ.

ವಕ್ಫ್ ತಿದ್ದುಪಡಿ ವಿರುದ್ಧ ಕಾನೂನು ಹೋರಾಟ

ನವದೆಹಲಿ, ಏ. ೨: ವಕ್ಫ್ ತಿದ್ದುಪಡಿ ಕಾಯ್ದೆಯು ಮುಸ್ಲಿಮರ ಹಕ್ಕನ್ನು ಕಬಳಿಸುವ ಕರಾಳ ಕಾನೂನು ಎಂದು ಟೀಕಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಡಳಿ ಸದಸ್ಯ ಮೊಹಮ್ಮದ್ ಅದೀಬ್, ಈ ಕಾನೂನಿನ ಮೂಲಕ ಮುಸ್ಲಿಂ ಸಮುದಾಯದ ಆಸ್ತಿಗಳನ್ನು ಕಬಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿದ್ದಾರೆ. ನಮ್ಮ ಆಸ್ತಿಯನ್ನು ಕಸಿದುಕೊಳ್ಳಬಹುದೆಂದು ಭಾವಿಸಿ ಅವರು ಇದನ್ನು ತಂದಿದ್ದಾರೆ. ಇದನ್ನು ಒಪ್ಪಿಕೊಳ್ಳಲಾಗದು. ನಾವು ಸೋತಿದ್ದೇವೆ ಎಂದು ಭಾವಿಸಬೇಡಿ. ಮಸೂದೆಯ ವಿರುದ್ಧದ ಹೋರಾಟ ಕೇವಲ ಆರಂಭ ಎಂದು ಅವರು ಹೇಳಿದ್ದಾರೆ. ಆತ್ಮಸಾಕ್ಷಿ ಇರುವ ಎಲ್ಲಾ ನಾಗರಿಕರು ಮಸೂದೆಯನ್ನು ವಿರೋಧಿಸಬೇಕೆಂದು ಮನವಿ ಮಾಡಿದ ಅದೀಬ್, ಪ್ರಸ್ತಾವಿತ ಶಾಸನವನ್ನು ಕಾನೂನುಬದ್ಧವಾಗಿ ಮತ್ತು ಸಾರ್ವಜನಿಕ ಪ್ರತಿಭಟನೆ ಮೂಲಕ ವಿರೋಧಿಸಲಿದ್ದೇವೆ ಎಂದಿದ್ದಾರೆ.

ಸAಭಲ್ ಹಿಂಸಾಚಾರ ಪ್ರಕರಣ - ಪ್ರಮುಖ ಆರೋಪಿ ಬಂಧನ

ಸAಭಲ್, ಏ. ೨: ಕಳೆದ ವರ್ಷ ಇಲ್ಲಿನ ಶಾಹಿ ಜುಮಾ ಮಸೀದಿ ಸಮೀಕ್ಷೆ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ದಿಲೀಪ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶರೀಕ್ ಸತ್ಥಾ ನೇತೃತ್ವದ ಗ್ಯಾಂಗ್‌ನಲ್ಲಿ ಗುರುತಿಸಿ ಕೊಂಡಿದ್ದ ದಿಲೀಪ್ ಅಲಿಯಾಸ್ ಹರೀಶ್ ಸುಮಾರು ೩೦ ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು ಪೊಲೀಸರಿಗೆ ಬೇಕಾಗಿದ್ದ. ಇವನ ಸುಳಿವು ಕೊಟ್ಟವರಿಗೆ ೨೫ ಸಾವಿರ ಬಹುಮಾನ ಘೋಷಣೆ ಮಾಡಲಾಗಿತ್ತು. ಕಳೆದ ವರ್ಷ ನವೆಂಬರ್ ೨೪ ರಂದು ಎರಡನೇ ಸುತ್ತಿನ ಸಮೀಕ್ಷೆಯ ಸಂದರ್ಭದಲ್ಲಿ, ಪ್ರತಿಭಟನಾನಿರತ ಸ್ಥಳೀಯರು ಭದ್ರತಾ ಸಿಬ್ಬಂದಿಯೊAದಿಗೆ ನಡೆದ ಘರ್ಷಣೆ, ಹಿಂಸಾಚಾರಕ್ಕೆ ತಿರುಗಿತ್ತು. ಘಟನೆಯಲ್ಲಿ ನಾಲ್ವರು ಸಾವಿಗೀಡಾಗಿ, ಹಲವರು ಗಾಯಗೊಂಡಿದ್ದರು. ಸ್ಥಳದಲ್ಲಿದ್ದ ದೇಗುಲವನ್ನು ಕೆಡವಿ ಮೊಘಲ್ ದೊರೆ ೧೫೨೬ ರಲ್ಲಿ ಮಸೀದಿ ನಿರ್ಮಿಸಿದ್ದ ಎಂದು ಪ್ರತಿಪಾದಿಸಿದ್ದ ಹಿಂದೂ ಸಂಘಟನೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ಮಸೀದಿಯ ಸಮೀಕ್ಷೆಗೆ ನ್ಯಾಯಾಲಯ ಆದೇಶಿಸಿತ್ತು.

ಮಹಿಳಾ ನಕ್ಸಲರ ಹತ್ಯೆ

ಭೋಪಾಲ್, ಏ. ೨: ಮಧ್ಯಪ್ರದೇಶ ಪೊಲೀಸರು ಬುಧವಾರ ಬೆಳಗ್ಗೆ ನಡೆಸಿದ ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ, ರಾಜ್ಯ ಪೊಲೀಸರು ಮಾಂಡ್ಲಾ ಜಿಲ್ಲೆಯ ಕಾಡಿನಲ್ಲಿ ಇಬ್ಬರು ಶಸ್ತçಸಜ್ಜಿತ ಮತ್ತು ವಾಂಟೆಡ್ ಮಹಿಳಾ ನಕ್ಸಲರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕಾರ್ಯಾಚರಣೆಯನ್ನು ದೃಢಪಡಿಸಿದ ಮಧ್ಯಪ್ರದೇಶ ವಿಶೇಷ ಡಿಜಿ (ನಕ್ಸಲ್ ವಿರೋಧಿ) ಪಂಕಜ್ ಶ್ರೀವಾಸ್ತವ ಅವರು, ಹತ್ಯೆಗೀಡಾದ ಛತ್ತೀಸ್‌ಗಢ ಮೂಲದ ಈ ಮಹಿಳಾ ನಕ್ಸಲರ ತಲೆಗೆ ತಲಾ ೧೪ ಲಕ್ಷ ರೂ. ಬಹುಮಾನ. ಅಂದರೆ ಒಟ್ಟಾರೆಯಾಗಿ ೨೮ ಲಕ್ಷ ರೂ. ಬಹುಮಾನವನ್ನು ಹೊಂದಿದ್ದರು ಎಂದು ತಿಳಿಸಿದ್ದಾರೆ. ಮಮತಾ ಮತ್ತು ಪ್ರಮೀಳಾ ಎಂದು ಗುರುತಿಸಲಾದ ಮಹಿಳಾ ಮಾವೋವಾದಿ ಜೋಡಿಯು ಛತ್ತೀಸ್‌ಗಢ ಮೂಲದವರಾಗಿದ್ದು, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಬಾಲಘಾಟ್, ಮಾಂಡ್ಲಾ ಮತ್ತು ಕವರ್ಧಾ ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಎಡಪಂಥೀಯ ಉಗ್ರಗಾಮಿಗಳು (ಎಲ್‌ಡಬ್ಲ್ಯೂಇಗಳು) ಕನ್ಹಾ-ಭೋರಾಮ್‌ದೇವ್ ವಿಭಾಗದ ಭಾಗವಾಗಿದ್ದರು ಎಂದು ಅವರು ಹೇಳಿದ್ದಾರೆ.