ಮಡಿಕೇರಿ, ಮಾ. ೯: ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ.ಗಣೇಶ್ ರೈ ಅವರು ಡಿಜಿಟಲ್ ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ರಚಿಸಿರುವ ಮಾತೆ ಕಾವೇರಿಯ ನೂತನ ಚಿತ್ರಪಟವನ್ನು ಶಿವರಾತ್ರಿಯಂದು ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.

ತಲಕಾವೇರಿಯ ಕಾವೇರಿ ಕುಂಡಿಕೆಯ ಬಳಿ ವಿಶೇಷ ಪೂಜೆ ಹಾಗೂ ಅರ್ಚನೆ ಸಲ್ಲಿಸಿದ ಬಿ.ಕೆ.ಗಣೇಶ್ ರೈ ಅವರು ತಮ್ಮ ಹಲವು ವರ್ಷಗಳ ಕನಸಾಗಿದ್ದ ಮಾತೆ ಕಾವೇರಿಯ ವರ್ಣರಂಜಿತ ಚಿತ್ರಪಟವನ್ನು ಅನಾವರಣಗೊಳಿಸಿದರು.

ಶ್ವೇತವರ್ಣದ ಸೀರೆಯುಟ್ಟ ಮಾತೆ ಕಾವೇರಿಯು ಕಳಸವನ್ನು ಹಿಡಿದು ಪದ್ಮಾಸನ ರೂಪದಲ್ಲಿ ದರ್ಶನ ನೀಡಿ ಭಕ್ತರನ್ನು ಹರಸುತ್ತಿರುವ ಈ ಚಿತ್ರಪಟ ಅತ್ಯಂತ ಆಕರ್ಷಕ ಮತ್ತು ಅಪರೂಪದ್ದಾಗಿದೆ. ಇದು ಅಫ್ ಸೆಟ್ ವರ್ಣರಂಜಿತ ಮುದ್ರಣವಾಗಿದ್ದು, ಎ೩, ಎ೪, ಪೋಸ್ಟ್ ಕಾರ್ಡ್ ಮತ್ತು ಐಡಿ ಕಾರ್ಡ್ ಅಳತೆಯಲ್ಲಿ ಲಭ್ಯವಿದೆ. ಕಾವೇರಿ ಮಾತೆಯ ಪದ್ಮಾಸನ ರೂಪದ ಶ್ಲೋಕದಿಂದ ಸ್ಫೂರ್ತಿಗೊಂಡು ಈ ಚಿತ್ರ ರಚಿಸಿರುವುದಾಗಿ ಅವರು ತಿಳಿಸಿದರು.

೧೯೮೦ರÀಲ್ಲಿ ಪ್ರಥಮ ಬಾರಿಗೆ ಮಾತೆ ಕಾವೇರಿಯ ವರ್ಣಚಿತ್ರವನ್ನು ಶಿವಕಾಶಿಯಲ್ಲಿ ಮುದ್ರಿಸಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಮೂಲಕ ಬಿ.ಕೆ.ಗಣೇಶ್ ರೈ ಅವರು ಬಿಡುಗಡೆಗೊಳಿಸಿದ್ದರು.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಪದ್ಮಾಸನ ರೂಪದ ಕಾವೇರಿ ಮಾತೆಯ ಚಿತ್ರಪಟವನ್ನು ನೀಡಿ ಬಿ.ಕೆ.ಗಣೇಶ್ ರೈ ಅವರು ಆಶೀರ್ವಾದ ಪಡೆದರು. ಚಿತ್ರಪಟವನ್ನು ಕಂಡು ಹೆಗ್ಗಡೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.