ಸಿದ್ದಾಪುರ, ಮಾ. ೮: ಕರ್ನಾಟಕ ಜಾನಪದ ಅಕಾಡೆಮಿಯ ೨೦೨೪ನೇ ಸಾಲಿನ ಗೌರವ ಪ್ರಶಸ್ತಿಗೆ ಕೊಡಗಿನ ಸಿದ್ದಾಪುರದ ಅವರೆಗುಂದ ನಿವಾಸಿ ಎಸ್.ಆರ್. ಸರೋಜ ಆಯ್ಕೆಯಾಗಿದ್ದಾರೆ.

ಸಿದ್ದಾಪುರದ ಕರಡಿಗೋಡು ಗ್ರಾಮದ ಅವರೆಗುಂದ ಹಾಡಿಯ ನಿವಾಸಿಯಾಗಿರುವ ಸರೋಜ ಅವರಿಗೆ ಬುಡಕಟ್ಟು ಕೋಲಾಟ. ಜೇನು ಕೊಯ್ಯುವ ಹಾಡು ಮತ್ತು ನೃತ್ಯಕ್ಕೆ ೨೦೨೪ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ೨೦೨೪ನೇ ಸಾಲಿನಲ್ಲಿ ರಾಜ್ಯದ ೩೦ ಜಿಲ್ಲೆಗಳಿಂದ ೩೦ ಹಿರಿಯ ಜಾನಪದ ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಇಬ್ಬರು ಜನಪದ ತಜ್ಞರಿಗೆ ತಜ್ಞ ಪ್ರಶಸ್ತಿ ನೀಡಲಾಗುತ್ತದೆ. ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯ ಮೊತ್ತ ರೂ. ೨೫೦೦೦ ಮತ್ತು ಇಬ್ಬರು ಕ್ಷೇತ್ರದ ಜನರಿಗೆ ತಲಾ ರೂ. ೫೦,೦೦೦ ಪ್ರಶಸ್ತಿ ಮೊತ್ತದ ಜೊತೆಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು.

ಇವರು ಕಳೆದ ಸುಮಾರು ವರ್ಷಗಳಿಂದ ಬುಡಕಟ್ಟು ಜನಾಂಗದ ಕಲೆ, ಸಾಹಿತ್ಯ, ಜನಪದ ಶೈಲಿಯ ಹಾಡುಗಳನ್ನು ಹಾಡಿಗಳಲ್ಲಿ ಹಾಡಿ ಗ್ರಾಮಸ್ಥರ ಮೆಚ್ಚುಗೆಗಳಿಸಿದ್ದಾರೆ. ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಇವರು ಸಮಾಜ ಸೇವೆಯಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡು ಎಲೆ ಮರೆಯಕಾಯಿಯಂತೆ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ.

- ವಾಸು