ಚೆಯ್ಯಂಡಾಣೆ, ಮಾ. ೮: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ೨೦೨೪-೨೫ನೇ ಸಾಲಿನ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆ ಚೆಯ್ಯಂಡಾಣೆಯಲ್ಲಿ ಜರುಗಿತು.
ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ವಹಿಸಿದ್ದರು.
ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಮಾತನಾಡಿ, ಗ್ರಾಮ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟದ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಸಾರ್ವಜನಿಕರು ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಳ್ಳಲು ಇಲಾಖೆ ಸಜ್ಜಾಗಿದೆ. ಅಕ್ರಮ ಮಾದಕ ವಸ್ತುಗಳ ಜಾಲವನ್ನು ಸಮಾಜದಿಂದ ಕಿತ್ತೊಗೆಯಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದರು.
ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಲತಾ ಸಂಚಾರಿ ನಿಯಮಗಳ ಕುರಿತು ಮಾತನಾಡಿ, ಇತ್ತೀಚೆಗೆ ಅಪ್ರಾಪ್ತರ ವಾಹನ ಚಾಲನೆ ಹೆಚ್ಚಾಗಿದೆ. ಪೋಷಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ಪರವಾನಗಿ ಇಲ್ಲದೆ ವಾಹನಗಳನ್ನು ಕೊಡಬೇಡಿ, ಅಪ್ರಾಪ್ತರ ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದಲ್ಲಿ ೨೫ ಸಾವಿರ ರೂಪಾಯಿಗಳಷ್ಟು ದಂಡ ಹಾಗೂ ವಾಹನದ ಮಾಲೀಕರಿಗೆ ಜೈಲುವಾಸ ಕೂಡ ವಿಧಿಸಲಾಗುತ್ತದೆ. ಇತ್ತೀಚೆಗೆ ಹಲವು ಪ್ರಕರಣಗಳು ದಾಖಲಾಗಿದ್ದು ಆದ್ದರಿಂದ ಪೋಷಕರು ಇದರ ಬಗ್ಗೆ ಎಚ್ಚರ ವಹಿಸಬೇಕೆಂದು ಸಂಚಾರ ನಿಯಮ ಉಲ್ಲಂಘನೆ ಹಾಗೂ ಕಾನೂನಿನ ಬಗ್ಗೆ ವಿವರಿಸಿದರು.
ಕಂದಾಯ ಇಲಾಖೆಯ ಬಗ್ಗೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್ ಮಾತನಾಡಿ, ಪೂರಕ ದಾಖಲೆಗಳನ್ನು ನೀಡಿದಲ್ಲಿ ಜಾತಿ, ಆದಾಯ ದೃಢೀಕರಣ ಪತ್ರವನ್ನು ನೀಡಲಾಗುವುದು, ಶಾಲಾ ನೋಂದಣಿ ದಾಖಲಾತಿಯ ಪ್ರತಿಯನ್ನು ನೀಡಿದಲ್ಲಿ ಜಾತಿ ಆದಾಯ ದೃಢೀಕರಣ ನೀಡಲಾಗುವುದೆಂದ ಅವರು, ಚೇಲಾವರ ಕಬ್ಬೆ ಬೆಟ್ಟದಲ್ಲಿ ತಂತಿ ಬೇಲಿ ಕಾರ್ಯ ನಡೆಸುವ ಮುನ್ನ ನಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ನರಿಯಂದಡದಲ್ಲಿ ಸರ್ವೇ ನಂಬರ್ ೧೩೧/೧ರಲ್ಲಿ ಎರಡು ಎಕರೆ ಜಾಗವನ್ನು ನಿವೇಶನಕ್ಕಾಗಿ ಗುರುತಿಸಿಕೊಡುವಂತೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅರಣ್ಯ ಇಲಾಖೆಯ ಬಗ್ಗೆ ವೀರಾಜಪೇಟೆ ಅರಣ್ಯಾಧಿಕಾರಿ ಶ್ರೀನಿವಾಸ್, ಆರೋಗ್ಯ ಇಲಾಖೆಯ ಬಗ್ಗೆ ಕನಕಾವತಿ, ಆಯುಷ್ ಇಲಾಖೆಯ ಬಗ್ಗೆ ಡಾ. ಶೈಲಜಾ ಹಾಗೂ ಡಾ. ಸರಸ್ವತಿ, ಪ್ರಾಥಮಿಕ ಶಾಲೆಯ ಬಗ್ಗೆ ಕರಡ ಶಾಲೆಯ ಮುಖ್ಯ ಶಿಕ್ಷಕಿ ಲೀಲಾವತಿ ಹಾಗೂ ವಿವಿಧ ಇಲಾಖೆಯಿಂದ ದೊರೆಯುವ ಪ್ರಯೋಜನಗಳ ಮಾಹಿತಿ ನೀಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಗ್ರಾಮ ಪಂಚಾಯಿತಿ ಸದಸ್ಯರು, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಾಕುಮಾರಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ವನಜಾ ಪ್ರಾರ್ಥಿಸಿ, ದಿನೇಶ್ ಕುಮಾರ್ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಆಶಾಕುಮಾರಿ ವಂದಿಸಿದರು.