ಶನಿವಾರಸಂತೆ, ಮಾ. ೮: ಧರ್ಮದ ತಳಹದಿ ಇಲ್ಲದ ಜೀವನ ನಶ್ವರ. ಧಾರ್ಮಿಕ ಚಿಂತನೆ ಮತ್ತು ಧಾರ್ಮಿಕ ನಂಬಿಕೆ ಬೆಳೆಸಿಕೊಂಡಲ್ಲಿ ಮಾತ್ರ ಜೀವನದಲ್ಲಿ ಅಭಿವೃದ್ಧಿ ಮತ್ತು ನೆಮ್ಮದಿ ಕಾಣಲು ಸಾಧ್ಯ ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ಬೆಸೂರು-ನಿಲುವಾಗಿಲು ಗ್ರಾಮದ ಶ್ರೀ ಬಾಲ ತ್ರಿಪುರ ಸುಂದರಿ ದೇವಾಸ್ಥಾನದಲ್ಲಿ ಸೋಮವಾರಪೇಟೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಕೊಡ್ಲಿಪೇಟೆ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸುಭಿಕ್ಷೆಗಾಗಿ ಶ್ರೀ ದುರ್ಗಾ ಹೋಮ ಪೂಜಾ ಕಾರ್ಯದ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಜಿಲ್ಲಾ ಜನ ಜಾಗೃತಿ ಸಮಿತಿ ನಿರ್ದೇಶಕ ಭಗವಾನ್ ಹಾಗೂ ಕಸಾಪ ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ. ನಾಗರಾಜ್ ಮಾತನಾಡಿ, ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಏರ್ಪಡಿಸಿ, ಸಾಮಾಜಿಕ ಅಭಿವೃದ್ಧಿ ಯೊಂದಿಗೆ ಧಾರ್ಮಿಕ ಚಿಂತನೆ ಬೆಳೆಸುವ ಸಭಾ ಕಾರ್ಯಕ್ರಮ ಹಮ್ಮಿ ಕೊಂಡು ಜಾಗೃತಿ ಮೂಡಿಸು ತ್ತಿರುವುದು ಶ್ಲಾಘನೀಯ ಎಂದರು.

ತಾಲೂಕು ಯೋಜನಾಧಿಕಾರಿ ರೋಹಿತ್ ಸ್ತಾವಿಕ ನುಡಿಯಾಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಹೆಚ್.ಬಿ. ಧರ್ಮಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಕೊಡ್ಲಿಪೇಟೆ ವಲಯ ಮೇಲ್ವಿಚಾರಕ ಕೆ.ಪಿ. ನಾಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ, ಒಕ್ಕೂಟದ ಅಧ್ಯಕ್ಷೆ ಸುನಂದಾ, ಸೇವಾ ಪ್ರತಿನಿಧಿ ಶಾರದಮ್ಮ, ದೇವಸ್ಥಾನ ಸಮಿತಿ ಸದಸ್ಯರಾದ ಮಲ್ಲೇಶ್, ಪ್ರಸನ್ನ ಇತರರು ಉಪಸ್ಥಿತರಿದ್ದರು. ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.