ವೀರಾಜಪೇಟೆ, ಅ. ೩೦: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಮಾರುಕಟ್ಟೆಯ ನೂತನ ಕಟಡಕ್ಕೆ ೭.೫ ಕೋಟಿ ರೂಗಳ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ನೂತನ ಪುರಸಭಾ ಕಟ್ಟಡಕ್ಕೆ ೨.೫ ಕೋಟಿ ರೂ. ಮಂಜೂರಾಗಿದೆ ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಮಾಹಿತಿ ನೀಡಿದರು.

ಪುರಸಭೆಯ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಖಾಸಗಿ ಬಸ್ ನಿಲ್ದಾಣ ಸಮೀಪದ ವಾಣಿಜ್ಯ ಸಂಕೀರ್ಣದಲ್ಲಿರುವ ೧೦ ಮಳಿಗೆಗಳಿಗೆ ಹರಾಜು ಪ್ರಕ್ರಿಯೆ ನಡೆದಿದ್ದು, ಮೂಲಭೂತ ಸೌಕರ್ಯಗಳ ಕೊರತೆ ಕಾರಣ ವರ್ತಕರು ಅದನ್ನು ಬಳಕೆ ಮಾಡುತ್ತಿರಲಿಲ್ಲ. ಈ ಕಾರಣದಿಂದಾಗಿ ಮಳಿಗೆಗಳನ್ನು ಮರು ಹರಾಜು ನಡೆಸಬೇಕಿದೆ. ಹಾಗಾಗಿ ವರ್ತಕರಿಂದ ಪಡೆದುಕೊಂಡಿದ್ದ ಒಂದು ಲಕ್ಷ ರೂ. ಠೇವಣಿಯನ್ನು ಹಿಂತಿರುಗಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಶಿಥಿಲಾವಸ್ಥೆಯಲ್ಲಿರುವ ಮಾರುಕಟ್ಟೆಯನ್ನು ಕೆಡವಿ ನೂತನ ಮಾರುಕಟ್ಟೆ ನಿರ್ಮಾಣದ ಪ್ರಸ್ತಾವನೆಯ ವಿಚಾರ ಪ್ರಗತಿಯಲ್ಲಿದೆ ಎಂದು ಶಾಸಕರು ಸಭೆಗೆ ತಿಳಿಸಿದರು.

ಸದಸ್ಯ ಪೃಥ್ವಿನಾಥ್ ಮಾತನಾಡಿ, ಪುರಸಭೆಯ ಜೆಸಿಬಿ ವಾಹನವನ್ನು ಮೂಲೆ ಗುಂಪು ಮಾಡಿ ಘನತ್ಯಾಜ್ಯ ಘಟಕದಲ್ಲಿ ಕಸ ವಿಲೇವಾರಿಗೆ ಖಾಸಗಿ ಜೆಸಿಬಿ ಪಡೆದು ಮಾಸಿಕ ರೂ. ೯೦ ಸಾವಿರ ಹಣ ಪಾವತಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಇದು ನಡೆಯುತ್ತಿದೆ. ಕೋಟ್ಯಂತರ ಬಾಡಿಗೆ ನೀಡುವ ಬದಲು ನೂತನ ಜೆಸಿಬಿ ಖರೀದಿ ಮಾಡಬಹುದಿತ್ತು. ಸಭೆಯಲ್ಲಿ ೬ ತಿಂಗಳ ಲೆಕ್ಕಪತ್ರವನ್ನು ಮಂಡಿಸಿದ್ದಾರೆ. ಜೆಸಿಬಿ, ರಸ್ತೆ ಬದಿ ಕಾಡು ಕಡಿದಿರುವುದು, ರಾಜಕಾಲುವೆ ಹೂಳೆತ್ತಿರುವ ಕೆಲಸಕ್ಕೆ ಆಡಳಿತಾಧಿಕಾರಿ ಅವಧಿಯಲ್ಲಿ ಕೋಟ್ಯಂತರ ರೂ ವ್ಯಯ ಆಗಿರುವ ಬಗ್ಗೆ ಸಂಶಯವಿದ್ದು, ಅವ್ಯವಹಾರ ನಡೆದಿರುವÀ ಶಂಕೆ ಇದೆ. ಆದ್ದರಿಂದ ಆಡಳಿತಾಧಿಕಾರಿ ಅವಧಿಯ ಸಂಪೂರ್ಣ ಲೆಕ್ಕೆ ಮಂಡಿಸಲು ಆಗ್ರಹಿಸಿದರು. ಈ ವೇಳೆ ಅಧ್ಯಕ್ಷೆ ದೇಚಮ್ಮ ಲೆಕ್ಕಪತ್ರಗಳನ್ನು ಮುಂದಿನ ಸಭೆಯಲ್ಲಿ ಮಂಡಿಸಲಾಗುತ್ತದೆ ಎಂದರು.

ಸದಸ್ಯ ಮತೀನ್ ಬಸ್ ನಿಲ್ದಾಣದ ಶೌಚಾಲಯ ತೀರಾ ದುಸ್ಥಿತಿಯಲ್ಲಿದ್ದು ಗುತ್ತಿಗೆದಾರರು ಸೂಕ್ತ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಶೌಚಾಲಯದ ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಬಿಡಲಾಗುತ್ತಿದೆ ಎಂದು ಸಭೆಗೆ ತಿಳಿಸಿದಾಗ, ಗುತ್ತಿಗೆದಾರನ ಕಡತ ಪರಿಶೀಲಿಸಿದ ಶಾಸಕರು, ಶೌಚಾಲಯ ಗುತ್ತಿಗೆ ರದ್ದತಿಗೆ ೨೦೧೮ ರಲ್ಲಿಯೇ ನ್ಯಾಯಾಲಯ ಸೂಚಿಸಿದೆ. ಕ್ರಮಕೈಗೊಳ್ಳದೆ ಇರುವ ಪುರಸಭೆಯ ಅಧಿಕಾರಿ ಹಾಗೂ ಸದಸ್ಯರ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಗುತ್ತಿಗೆದಾರನಿಗೆ ನೋಟಿಸ್ ನೀಡಿ ತಕ್ಷಣ ಮರು ಟೆಂಡರ್ ಕರೆಯಲು ಸೂಚಿಸಿದರು.

ಸದಸ್ಯ ರಾಜೇಶ್ ಪಟ್ಟಣದಲ್ಲಿ ದೀಪಗಳು ಉರಿಯುತ್ತಿಲ್ಲ ಎಂದು ಗಮನ ಸೆಳೆದರು. ಕಳೆದ ಒಂದು ವರ್ಷದ ಹಿಂದೆ ಆಡಳಿತಾಧಿಕಾರಿ ಅವಧಿಯಲ್ಲಿ ಉಪವಿಭಾಗಧಿಕಾರಿ ಸಭೆಯಲ್ಲಿ ಬೀದಿ ದೀಪದ ಬಗ್ಗೆ ಸೂಕ್ತ ರೀತಿಯಲ್ಲಿ ಕ್ರಮವಹಿಸುವಂತೆ ಸೂಚಿಸಲಾಗಿದೆ. ಗುತ್ತಿಗೆದಾರರನ್ನು ಬದಲಿಸಲು ಟೆಂಡರ್ ಪ್ರಕ್ರಿಯೆ ನಡೆಸುವಂತೆ ಮುಖ್ಯಾಧಿಕಾರಿ ಚಂದ್ರಕುಮಾರ್ ಅವರಿಗೆ ಪೊನ್ನಣ್ಣ ಸೂಚಿಸಿದರು. ಸದಸ್ಯೆ ಪೂರ್ಣಿಮ, ತಮ್ಮ ವಾರ್ಡಿನಲ್ಲಿ ವಸತಿ ಗೃಹಕ್ಕೆ ಪರವಾನಗಿ ಪಡೆದು ವೃದ್ಧಾಶ್ರಮ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಫಸಿಹಾ ತಬಸುಂ, ಪರಿಸರ ಅಭಿಯಂತರ ನೀತುಸಿಂಗ್, ನೂತನ ಅಭಿಯಂತರ ರಾಮಚಂದ್ರ, ಅಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.