ವೀರಾಜಪೇಟೆ, ಅ. ೧: ಕಂದಾಯ ಸಚಿವ ಕೃಷ್ಣಭೈರೇಗೌಡ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಕೊಡಗು ಜಿಲ್ಲೆಯ ಜಮ್ಮಾಬಾಣೆ ಜಮೀನಿನ ವಿಚಾರವಾಗಿ ಸಭೆ ನಡೆಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಜಮ್ಮಾಬಾಣೆ ಜಮೀನಿನ ವಿಚಾರವಾಗಿ ಭೂ ಕಂದಾಯ ಕಾಯ್ದೆ ೧೯೬೪ ಸೆಕ್ಷನ್ ೮೪ರಂತೆ ಕಂದಾಯವನ್ನು ನಿಗದಿಪಡಿಸಿ ಕೊಂಡು ಭೂ ಕಂದಾಯ ಕಾಯ್ದೆ ೧೨೭ ರಿಂದ ೧೩೬ ರವರೆಗೆ ಇರುವ ಸೆಕ್ಷನ್ ಅಡಿಯಲ್ಲಿ ಕ್ರಮ ವಹಿಸಲು ತದನಂತರ ಚಾಲ್ತಿಯಲ್ಲಿರುವ ಪೋಡಿ ಮುಕ್ತ ಅಭಿಯಾನದ ರೀತಿಯಲ್ಲಿ ಸರ್ವೆ ಮಾಡಿಸಿ ಪ್ರತ್ಯೇಕವಾಗಿ ಆರ್‌ಟಿಸಿ ಮತ್ತು ಆಕಾರ್‌ಬಂದ್‌ನೊAದಿಗೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಎಲ್ಲಾ ಪ್ರಕ್ರಿಯೆಗಳನ್ನು ನಿರ್ವಹಿಸಲು ಬೇಕಾಗುವ ಕಾಲಾವಕಾಶ ಮತ್ತು ಮಾನವ ಸಂಪನ್ಮೂಲದ ಲಭ್ಯತೆ ಹಾಗೂ ಹೆಚ್ಚುವರಿಯಾಗಿ ಬೇಕಾಗುವ ಸರ್ವೆ ಉಪಕರಣಗಳು ಮತ್ತು ಭೂಮಾಪಕರುಗಳನ್ನು ನಿಯೋಜಿಸಿ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಕ್ರಮವಹಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಸರ್ಕಾರದ ಅಪರ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಕಂದಾಯ ಇಲಾಖೆಯ ಹಾಗೂ ಸರ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಮಡಿಕೇರಿ ಶಾಸಕ ಮಂತರ್ ಗೌಡ, ಕೊಡಗು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.