ಸೋಮವಾರಪೇಟೆ, ಫೆ. ೨೩: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣಾ ಕಾರ್ಯಕ್ರಮಕ್ಕೆ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಚನ್ನಬಸಪ್ಪ ಸಭಾಂಗಣದಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಚಾಲನೆ ನೀಡಿದರು.
ನಂತರ ಮಾತನಾಡಿ, ಮಕ್ಕಳು ದೈಹಿಕ, ಮಾನಸಿಕವಾಗಿ ಆರೋಗ್ಯ ದಿಂದ ಇದ್ದಲ್ಲಿ ಮಾತ್ರ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದ ಸಾಕಷ್ಟು ವಿದ್ಯಾರ್ಥಿಗಳು ರಕ್ತಹೀನತೆ ಯಿಂದ ಬಳಲುತ್ತಿದ್ದರು. ಇದನ್ನು ಗಮನಿಸಿದ ರಾಜ್ಯ ಸರ್ಕಾರ ವಾರಕ್ಕೆ ಮೂರು ದಿನ ಉತ್ತಮ ಪೌಷ್ಟಿಕಾಂಶ ಯುಕ್ತ ರಾಗಿ ಹೆಲ್ತ್ ಮಿಕ್ಸ್ ನೀಡುವ ಪ್ರಮುಖ ಯೋಜನೆಯನ್ನು ಜಾರಿಗೆ ತಂದಿದೆ. ಇದರು ವಿದ್ಯಾರ್ಥಿಗಳಲ್ಲಿ ಪೋಶಕಾಂಶ ಕೊರತೆಯಿಂದ ಬಳಲುತ್ತಿದ್ದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುವುದರೊಂದಿಗೆ ಶಿಕ್ಷಣದಲ್ಲೂ ಮುಂದೆ ಬರಲು ಸಾಧ್ಯವಾಗುವುದು ಎಂದರು.
ಸರ್ಕಾರದ ಈ ಯೋಜನೆ ಯನ್ನು ಎಲ್ಲ ಶಾಲೆಗಳಲ್ಲೂ ಶಿಕ್ಷಕರ ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡುವ ಮೂಲಕ ಯೋಜನೆ ಸಫಲತೆ ಕಾಣಲು ಅವಕಾಶ ಮಾಡಿ ಕೊಡಬೇಕು. ಎಲ್ಲ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿ ಇದನ್ನು ಬಳಸುವಂತೆ ಮಾರ್ಗದರ್ಶನ ಮಾಡಬೇಕೆಂದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಕಾಳಾನಾಯಕ್ ಮಾತನಾಡಿ, ರಾಜ್ಯ ಸರ್ಕಾರ ಕ್ಷೀರಭಾಗ್ಯ ಯೋಜನೆಯಡಿಯಲ್ಲಿ, ಈ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳಲ್ಲಿ ಪೌಷ್ಟಿಕತೆ ಹೆಚ್ಚಿಸಲು, ರಕ್ತಹೀನತೆ ತಡೆಯಲು ಇದು ಸಹಕಾರಿಯಾಗಲಿದೆ. ಒಂದನೇ ತರಗತಿಯಿಂದ ಹತ್ತನೇ ತರಗತಿ ಯವರೆಗಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದರ ನಿರಂತರ ಸೇವನೆಯಿಂದ ದೇಹ ಮತ್ತು ಮನಸ್ಸು ಸದೃಢಗೊಳ್ಳುವು ದರೊಂದಿಗೆ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದರು.
ವೇದಿಕೆಯಲ್ಲಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎನ್. ಮಂಜುನಾಥ್, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಲ್.ಎಂ. ಪ್ರೇಮ, ಶಾಲಾ ಮುಖ್ಯೋಪಾಧ್ಯಾಯಿನಿ ಯಶೋಧ, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರೇಮ, ಶಿಕ್ಷಕರಾದ ಆಶಾ, ತಂಗಮ್ಮ, ಎಸ್.ಡಿ. ಎಂ.ಸಿ. ಸದಸ್ಯರಾದ ಉದಯ್, ನಿಂಗೂಜಿ, ಪ್ರಜ್ವಲ್, ಅನಿಲ್ ಇದ್ದರು.