ಮಡಿಕೇರಿ, ಫೆ. ೨೩: ಕೊಡಗು ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ಹಾಗೂ ಲೈನ್ ಮನೆಯಲ್ಲಿ ವಾಸ ಇರುವ ಮಹಿಳೆಯರು ಮತ್ತು ಬಾಲಕಿಯರಿಗೆ ರಕ್ಷಣೆ ಕೊಡಬೇಕು ಎಂದು ಬುಡಕಟ್ಟು ಕಾರ್ಮಿಕರ ಸಂಘ ಹಾಗೂ ಕರ್ನಾಟಕ ಅರಣ್ಯ ಬುಡಕಟ್ಟು ಸಮುದಾಯಗಳ ಒಕ್ಕೂಟಗಳು ಒತ್ತಾಯಿಸಿವೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಅರಣ್ಯ ಬುಡಕಟ್ಟು ಸಮುದಾಯಗಳ ಒಕ್ಕೂಟದ ಮೈಸೂರು ಜಿಲ್ಲಾ ಕಾರ್ಯದರ್ಶಿ ಶೈಲೇಂದ್ರ ಕುಮಾರ್ ಇತ್ತೀಚೆಗೆ ಬುಡಕಟ್ಟು ಸಮುದಾಯಕ್ಕೆ ಸೇರಿದ ಬಾಲಕಿಯೊಬ್ಬಳು ಅತ್ಯಾಚಾರಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಳು. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಇಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಾರದೆ ಮುಚ್ಚಿ ಹೋಗುತ್ತಿವೆ ಎಂದು ಆರೋಪಿಸಿದರು.

ಸಂಘದ ಅಧ್ಯಕ್ಷ ವೈ.ಬಿ. ಗಪ್ಪು ಮಾತನಾಡಿ, ಬುಡಕಟ್ಟು ಸಮುದಾಯದವರಿಗೆ ರಕ್ಷಣೆ ಎಂಬುದೇ ಇಲ್ಲವಾಗಿದೆ. ಸರ್ಕಾರ ಕೂಡಲೇ ಕಾಡಂಚಿನಲ್ಲಿ ವಾಸಿಸುವ ಬುಡಕಟ್ಟು ಸಮುದಾಯದವರಿಗೆ ರಕ್ಷಣೆ ನೀಡುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಆತ್ಮಹತ್ಯೆ ಮಾಡಿಕೊಂಡ ಬಾಲಕಿಯ ತಾಯಿ ಮಾತನಾಡಿ, ಪ್ರಕರಣ ವಾಪಸ್ ಪಡೆಯುವಂತೆ ನಮಗೆ ಬಹಿರಂಗವಾಗಿಯೇ ಒತ್ತಡ ಬೆದರಿಕೆ ಹಾಕಲಾಗುತ್ತಿದೆ. ನಮಗೆ ಜೀವನ ನಡೆಸಲು ಭಯವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಾಲಕಿಯ ತಂದೆ ಮಾತನಾಡಿ, ನನ್ನ ಮಗಳಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು ಎಂದರು. ಸಂಘದ ಮುಖಂಡರಾದ ರಾಣಿ ಮಾತನಾಡಿ, ತೋಳ್ಬಲ ಮತ್ತು ಹಣ ಬಲದಿಂದ ಬುಡಕಟ್ಟು ಸಮುದಾಯದವರ ಧ್ವನಿಯನ್ನು ಅಡಗಿಸಲಾಗುತ್ತಿದೆ. ಜಿಲ್ಲಾಡಳಿತ ಈ ಕುರಿತು ಗಮನ ಹರಿಸಬೇಕು ಎಂದು ಕೋರಿದರು.

ಸಂಘದ ಸದಸ್ಯೆ ಪುಷ್ಪಾ ಮಾತನಾಡಿ, ಬುಡಕಟ್ಟು ಸಮುದಾಯ ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸರ್ಕಾರ ಈ ಕುರಿತು ಜಾಗೃತಿ ಮೂಡಿಸಬೇಕು ಎಂದರು.