*ಗೋಣಿಕೊಪ್ಪ, ಫೆ. ೨೨: ಗ್ರಾಪಂ. ಸಾಮಾನ್ಯ ಸಭೆಗೆ ಬಿಜೆಪಿ ಬೆಂಬಲಿತ ಸದಸ್ಯರುಗಳು ಗೈರು ಹಾಜರಾಗಿ ಗ್ರಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾವಣೆ ಮಾಡಿದ್ದು ನಾವಲ್ಲ ಎಂಬುದನ್ನ ಸಾಬೀತುಪಡಿಸುವ ಪ್ರಯತ್ನಕ್ಕೆ ಮುಂದಾದ ಪ್ರಸಂಗ ನಡೆಯಿತು.
ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಗ್ರಾ.ಪಂ. ಸಭಾಂಗಣದಲ್ಲಿ ಸಾಮಾನ್ಯ ಸಭೆ ಕರೆಯಲಾಗಿತ್ತು. ಪ್ರತಿ ಸದಸ್ಯರಿಗೂ ಅಂಚೆ ಮೂಲಕ ಸಭೆಯ ಮಾಹಿತಿ ಒದಗಿಸಿಕೊಡಲಾಗಿತ್ತು.
ಪಂಚಾಯಿತಿ ಸಿಬ್ಬಂದಿಗಳು ಖುದ್ದಾಗಿ ಪ್ರತಿ ಸದಸ್ಯರ ಮನೆಗಳಿಗೆ ಭೇಟಿಕೊಟ್ಟು ಸಾಮಾನ್ಯ ಸಭೆ ನಡೆಯುವ ಮಾಹಿತಿಯ ಪತ್ರವನ್ನು ನೀಡಲು ಮುಂದಾಗಿದ್ದರು. ಸದಸ್ಯರುಗಳು ಅದನ್ನು ಪಡೆದುಕೊಂಡಿರಲಿಲ್ಲ. ಈ ಕಾರಣದಿಂದ ಅಂಚೆ ಮೂಲಕವೇ ಪ್ರತಿ ಸದಸ್ಯರಿಗೆ ಮಾಹಿತಿಯನ್ನು ತಲುಪಿಸುವ ಪ್ರಯತ್ನವೂ ನಡೆದಿತ್ತು. ಆದರೂ, ಸಾಮಾನ್ಯ ಸಭೆಗೆ ಗೈರು ಹಾಜರಾದರು.
ಯಾರೇ ಒಬ್ಬ ಸದಸ್ಯ ಸಭೆಗೆ ಹಾಜರಾದಲ್ಲಿ ಆತನೇ ಮತ ಹಾಕಿದ ವ್ಯಕ್ತಿ ಎಂದು ಕಂಡುಹಿಡಿಯುವ ಉದ್ದೇಶದ ಜೊತೆಗೆ, ಕಾಂಗ್ರೆಸಿಗೆ ಮತ ಹಾಕಿದವರನ್ನೇ ಕರೆತಂದು ಕೋರಂನೊAದಿಗೆ ಸಭೆ ನಡೆಸಲಿ ಎಂದು ಬಿಜೆಪಿ ಮುಖಂಡರು ಸದಸ್ಯರುಗಳಿಗೆ ತಿಳಿಸಿದ ಕಾರಣದಿಂದ ಸಭೆಗೆ ಗೈರು ಹಾಜರಾಗಲು ಬಹು ಮುಖ್ಯ ಕಾರಣವಾಗಿತ್ತು.
ಪಂಚಾಯಿತಿಯ ಎಂಟು ವಾರ್ಡ್ಗಳಲ್ಲಿನ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಹಲವಾರು ಅರ್ಜಿಗಳ ವಿಲೇವಾರಿಗೆ ಈ ಸಭೆ ಪೂರಕವಾಗಿ ನಡೆಯಬೇಕಾಗಿತ್ತು. ಸದಸ್ಯರುಗಳು ಸಭೆಗೆ ಬಾರದೆ ಗ್ರಾಮದ ಅಭಿವೃದ್ಧಿಗೆ ನಿರ್ಲಕ್ಷö್ಯ ಧೋರಣೆ ತೋರಿದಂತಾಗಿದೆ.
ಜನರ ಮತದಿಂದ ಗೆಲುವು ಸಾಧಿಸಿದ ಸದಸ್ಯರುಗಳು ಈ ಭಾಗದ ಜನರ ಕ್ಷೇಮಾಭಿವೃದ್ಧಿಗೆ ನಿರ್ಲಕ್ಷö್ಯ ತೋರುತ್ತಿದ್ದಾರೆ. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸದ, ಸಾಮಾಜಿಕ ಕಳಕಳಿಯನ್ನು ಹೊಂದಿರದ ಸದಸ್ಯರುಗಳಿಗೆ ಮುಂದಿನ ದಿನಗಳಲ್ಲಿ ಮತ ಹಾಕಿ ಗೆಲ್ಲಿಸಬಾರದು ಎಂದು ಸದಸ್ಯರ ನಡೆಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ ಹಾಕಿ ಗೆಲುವು ತಂದುಕೊಟ್ಟಿದ್ದು ಮತದಾರರು. ಆದರೆ ಮತದಾರರ ಸಮಸ್ಯೆಗಳಿಗೆ ಸ್ಪಂದಿಸದೆ ಪಕ್ಷದ ನಾಯಕರ ಮಾತಿಗೆ ಕಟ್ಟುಬಿದ್ದು ಅಭಿವೃದ್ಧಿ ವ್ಯವಸ್ಥೆಗೆ ನಿರ್ಲಕ್ಷö್ಯ ಮನಸ್ಥಿತಿಯನ್ನು ಹೊಂದುವುದು ಎಷ್ಟರಮಟ್ಟಿಗೆ ಸರಿ ಎಂಬುವುದು ಸ್ಥಳೀಯರ ಪ್ರಶ್ನೆಯಾಗಿದ್ದು, ಬಿಜೆಪಿ ಬೆಂಬಲಿತ ಸದಸ್ಯರುಗಳ ಈ ನಡೆಗೆ ಗ್ರಾಮಸ್ಥರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಬಿಜೆಪಿ ಸದಸ್ಯರುಗಳಾದ ರಾಜೇಶ್, ರಾಮಕೃಷ್ಣ, ರತಿ ಅಚ್ಚಪ್ಪ, ಗೀತಾ, ಭೋಜಮ್ಮ, ಬಿ.ಎಂ. ಪ್ರಕಾಶ್, ಸೌಮ್ಯ ಬಾಲು, ಚೈತ್ರ ಬಿ. ಚೇತನ್, ವಿವೇಕ್ ರಾಯ್ಕರ್, ರಾಮದಾಸ್, ಪುಷ್ಪ ಮನೋಜ್ ಮತ್ತು ಹಕೀಮ್ ಗೈರು ಹಾಜರಾಗಿದ್ದಾರೆ.
- ದಿನೇಶ್ ಎನ್.ಎನ್.