ಸೋಮವಾರಪೇಟೆ, ಫೆ. ೨೧: ಮಡಿಕೇರಿ ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳಪಡುವ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಗಿಡಗಂಟಿಗಳು, ಕಾಡು ಬೆಳೆದು ಸಂಚಾರಕ್ಕೆ ಸಂಚಕಾರವಾಗಿದೆ.

ಸೋಮವಾರಪೇಟೆ ಉಪ ವಿಭಾಗಕ್ಕೆ ಒಳಪಡುವ ರಸ್ತೆಯು ವಾರ್ಷಿಕ ನಿರ್ವಹಣೆಯಿಂದ ಕೂಡಿದ್ದರೆ, ಮಡಿಕೇರಿ ಉಪ ವಿಭಾಗಕ್ಕೆ ಒಳಪಡುವ ರಸ್ತೆಗಳು ಕಾಡಿನಿಂದ ಮುಚ್ಚಿಹೋಗಿವೆ. ಮೊದಲೇ ಅಪಾಯಕಾರಿ ತಿರುವುಗಳು, ಕಿರಿದಾದ ರಸ್ತೆಯಾಗಿದ್ದು, ಇದೀಗ ಗಿಡಗಂಟಿಗಳು ರಸ್ತೆಗೆ ಬಾಗಿರುವುದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.

ಮಡಿಕೇರಿ ಸಮೀಪದ ೮ನೇ ಮೈಲಿನಿಂದ ಸಂಪಿಗೆಕಟ್ಟೆವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ಅಪಾಯಕಾರಿಯಾಗಿದೆ. ರಸ್ತೆಯಲ್ಲಿ ಕಾಡು ಕೂಡಿರುವುದರಿಂದ, ತಿರುವುಗಳಲ್ಲಿ ಎದುರು ಭಾಗದ ವಾಹನಗಳು ಆಗಮಿಸುವ ಸಂದರ್ಭ ಅಪಾಯಕಾರಿ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಇದರೊಂದಿಗೆ ಆಗಾಗ್ಗೆ ಅವಘಡಗಳೂ ಸಂಭವಿಸುತ್ತಿವೆ.

ರಾಜ್ಯ ಹೆದ್ದಾರಿಗಳ ನಿರ್ವಹಣೆಗಾಗಿ ವಾರ್ಷಿಕ ಇಂತಿಷ್ಟು ಅನುದಾನವನ್ನು ಮೀಸಲಿಡಬೇಕಿದ್ದು, ಸೋಮವಾರಪೇಟೆ ಉಪ ವಿಭಾಗದಿಂದ ರಸ್ತೆಯ ನಿರ್ವಹಣೆ ಮಾಡಲಾಗಿದೆ. ಈ ಉಪ ವಿಭಾಗಕ್ಕೆ ಒಳಪಡುವ ರಸ್ತೆಯ ಎರಡೂ ಬದಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಆದರೆ ಮಡಿಕೇರಿ ಉಪ ವಿಭಾಗವು ಈ ರಸ್ತೆಯ ಬಗ್ಗೆ ನಿರ್ಲಕ್ಷö್ಯ ವಹಿಸಿದೆ. ರಸ್ತೆ ನಿರ್ವಹಣೆ ಮರೀಚಿಕೆಯಾಗಿರುವ ಹಿನ್ನೆಲೆ ರಾಜ್ಯ ಹೆದ್ದಾರಿ ಕಾಡು ಕೂಡಿದೆ. ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತವೆ. ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರವೂ ಅಧಿಕವಾಗಿದ್ದು, ಶಾಲಾ ಕಾಲೇಜು ವಾಹನಗಳು ಸಂಚರಿಸುತ್ತಿವೆ. ರಸ್ತೆ ಕಾಡು ಕೂಡಿರುವುದರಿಂದ ತಿರುವುಗಳಲ್ಲಿ ಅವಘಡಗಳು ಸಂಭವಿಸುತ್ತಿವೆ. ತಕ್ಷಣ ಈ ಬಗ್ಗೆ ಮಡಿಕೇರಿ ಲೋಕೋಪಯೋಗಿ ಇಲಾಖೆ ಗಮನ ಹರಿಸಿ, ರಸ್ತೆ ಬದಿಯ ಕುರುಚಲು ಗಿಡಗಂಟಿಗಳು, ಕಾಡುಗಳನ್ನು ತೆರವುಗೊಳಿಸಬೇಕೆಂದು ವಾಹನ ಸವಾರರು, ಬಸ್ ಚಾಲಕರುಗಳು ಆಗ್ರಹಿಸಿದ್ದಾರೆ.