ಸೋಮವಾರಪೇಟೆ, ಫೆ. ೨೦ : ತಾಲೂಕು ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ವತಿಯಿಂದ ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ‘ಕಾಫಿ ನಾಡಿನ ಮೇಳ’ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಉದ್ಘಾಟಿಸಿ ಮಾತನಾಡಿ, ಮಹಿಳೆಯರಲ್ಲಿ ಅಡಗಿರುವ ಕೌಶಲ್ಯಗಳನ್ನು ಬೆಳಕಿಗೆ ತರಲು ಇಂತಹ ಕಾರ್ಯಕ್ರಮ ಸಹಕಾರಿಯಾಗಿದೆ. ಮಹಿಳಾ ವೇದಿಕೆಯವರು ಇಂತಹ ವೇದಿಕೆ ಮಾಡಿಕೊಟ್ಟಿರುವುದು ಶ್ಲಾಘನೀಯ. ಇಂತಹ ಮೇಳಗಳಿಂದ ಮಹಿಳೆಯರಲ್ಲಿ ವ್ಯಾಪಾರ ವಹಿವಾಟು ಮಾಡುವ ಅನುಭವ ಬರುತ್ತದೆ ಎಂದರು.

ತಾವು ಬೆಳೆದ ಹೂವಿನ ಸಸಿಗಳು, ಔಷಧಿ ಗುಣವುಳ್ಳ ಬಳ್ಳಿಗಳ ಬಗ್ಗೆ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ. ಅಲ್ಲದೆ ಗ್ರಾಮೀಣ ಶೈಲಿಯ ಆಹಾರ ಪದಾರ್ಥಗಳನ್ನು ಸಾರ್ವಜನಿಕರು ಸವಿಯಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಮಹಿಳಾ ವೇದಿಕೆ ಕಳೆದ ೨೪ ವರ್ಷಗಳಿಂದ ಜನಪರ ಕೆಲಸಗಳನ್ನು ಮಾಡುತ್ತಿದೆ. ಮಹಿಳೆಯರ ಶ್ರೇಯೋಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದೇವೆ. ಕುವೆಂಪು ಪೂರ್ವ ಪ್ರಾಥಮಿಕ ಶಾಲೆಯನ್ನು ನಡೆಸುತ್ತಿದ್ದೇವೆ. ಮಹಿಳೆಯರ ವ್ಯವಹಾರಿಕ ಜ್ಞಾನದ ಅನುಭವಕ್ಕಾಗಿ ಕಾಫಿ ನಾಡಿನ ಮೇಳ ಆಯೋಜಿಸಲಾಗಿದೆ ಎಂದು ಮಹಿಳಾ ವೇದಿಕೆ ಅಧ್ಯಕ್ಷೆ ಪೂರ್ಣಿಮಾ ಗೋಪಾಲ್ ಹೇಳಿದರು.

ಮೇಳದಲ್ಲಿ ವೈವಿಧ್ಯಮಯ ವಸ್ತು ಪ್ರದರ್ಶನ ನಡೆಯಿತು. ಮನೆಯಲ್ಲಿ ತಯಾರಿಸಿದ ವೈನ್‌ಗಳು, ಜ್ಯೂಸ್, ಕೈಮಗ್ಗದ ಬಟ್ಟೆಗಳು, ಅಲಂಕಾರಿಕ ವಸ್ತುಗಳು, ಪಿಂಗಾಣಿ ವಸ್ತುಗಳು ಗಮನಸೆಳೆದವು. ನಾಟಿಕೋಳಿ, ಕಡುಬು, ಶೆವಿಗೆ, ಕಬಾಬ್, ಅಕ್ಕಿರೊಟ್ಟಿ, ಸಿಹಿ ತಿಂಡಿಗಳನ್ನು ಸಾರ್ವಜನಿಕರು ಸವಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ವೇದಿಕೆಯ ಪದಾಧಿಕಾರಿಗಳಾದ ಗಿರಿಜಾ ಮುತ್ತಣ್ಣ, ಆಶಾ ಯೋಗೇಂದ್ರ ಇದ್ದರು.