ಕುಶಾಲನಗರ, ಮಾ. ೧೮: ಉತ್ತಮ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮೂಲಕ ನೆಮ್ಮದಿಯ ಬದುಕು ಸಾಗಿಸಲು ಅನುವು ಮಾಡಿ ಕೊಡುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ರಮಣಶ್ರೀ ಆಚಾರ್ಯ ಅವರು ಕರೆ ನೀಡಿದ್ದಾರೆ.

ಉಡುಪಿ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಕೋಟಿ ಭಗವದ್ಗೀತಾ ಲೇಖನ ಯಜ್ಞ ಕಾರ್ಯಕ್ರಮದಲ್ಲಿ ಅವರು ಉಪಸ್ಥಿತರಿದ್ದು ಮಾತನಾಡಿದರು. ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಮಕ್ಕಳು ಹಿರಿಯರ ಚಟುವಟಿಕೆಗಳನ್ನು ಗಮನಿಸಿ ಅನುಕರಣೆ ಮಾಡುತ್ತಾರೆ. ಉತ್ತಮ ಕರ್ತವ್ಯಗಳನ್ನು ಮಾಡುವ ಮೂಲಕ ನೆಮ್ಮದಿ ಗಳಿಸಲು ಸಾಧ್ಯ ಎಂದ ಅವರು, ದೇಶಪ್ರೇಮ, ದೈವಭಕ್ತಿ, ದೇಹಪ್ರೇಮ ಇವುಗಳನ್ನು ಪ್ರತಿಯೊಬ್ಬರು ಹೊಂದಬೇಕಾಗಿದೆ ಎಂದರು.

ಎರಡು ವರುಷದ ಅವಧಿಯ ಒಳಗೆ ದಿನಕ್ಕೆ ಭಗವದ್ಗೀತೆಯ ಎರಡು ಶ್ಲೋಕಗಳನ್ನು ಬರೆಯುವ ಮೂಲಕ ಪೂರ್ಣಗೊಳಿಸಿ ನಂತರ ಅದನ್ನು ಸ್ವಯಂಸೇವಕರ ಅಥವಾ ನೇರವಾಗಿ ಮಠಕ್ಕೆ ತಲುಪಿಸಬಹುದು ಎಂದರು. ಈ ಅಭಿಯಾನದಲ್ಲಿ ಪಾಲ್ಗೊಳ್ಳುವವರಿಗೆ ಅವಶ್ಯವಿರುವ ಭಗವದ್ಗೀತೆ ಮತ್ತು ಬರೆಯುವ ಪುಸ್ತಕಗಳನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಸ್ಥಳೀಯ ಯೋಗ ಮಾಸ್ಟರ್ ಗೋಪಾಲಕೃಷ್ಣ ಇದ್ದರು. ಅಭಿಯಾನದ ಪ್ರಮುಖರಾದ ಜನಾರ್ಧನ್, ಮಧುಸೂದನ್, ಚಂದ್ರಶೇಖರ್, ದೇವಾಲಯಗಳ ಒಕ್ಕೂಟ ಸಮಿತಿ ಅಧ್ಯಕ್ಷ ಎಂ.ಕೆ ದಿನೇಶ್, ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್ ಮತ್ತು ವಿವಿಧ ದೇವಾಲಯಗಳ ಪ್ರತಿನಿಧಿಗಳು, ಮಹಿಳಾ ಭಜನಾ ಮಂಡಳಿ ಪ್ರಮುಖರು ಇದ್ದರು.