ಸೋಮವಾರಪೇಟೆ, ಮಾ. ೧೮: ಸಮೀಪದ ಗೌಡಳ್ಳಿ ಗ್ರಾಮದ ಹಿಂದೂ ಗೆಳೆಯರ ಬಳಗದ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ೫ನೇ ವರ್ಷದ ಹಿಂದೂ ಕಪ್ ಮುಕ್ತ ಫುಟ್ಬಾಲ್ ಪಂದ್ಯಾವಳಿ ತಾ. ೨೨ ಮತ್ತು ೨೩ರಂದು ನಡೆಯಲಿದೆ ಎಂದು ಬಳಗದ ಅಧ್ಯಕ್ಷ ಜೀತೇಂದ್ರ ಶುಂಠಿ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌಡಳ್ಳಿಯ ಬಿ.ಜಿ.ಎಸ್. ಶಾಲಾ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ೧೬ ತಂಡಗಳು ಭಾಗವಹಿಸಲಿದ್ದು, ಮೈದಾನದಲ್ಲಿ ಆಟವಾಡುವ ೧೧ ಆಟಗಾರರಲ್ಲಿ ೫ ವಿದೇಶಿ ಆಟಗಾರರಿಗೆ ಅವಕಾಶವಿರುತ್ತದೆ ಎಂದರು.

ಪ್ರತಿ ತಂಡದಲ್ಲಿ ೧೪ ಆಟಗಾರರು ಇರಬೇಕು. ಆಟಗಾರರು ಕಡ್ಡಾಯವಾಗಿ ಕ್ರೀಡಾ ಸಮವಸ್ತçದಲ್ಲಿ ಪಾಲ್ಗೊಳ್ಳಬೇಕು. ಪ್ರಥಮ ಬಹುಮಾನ ಪಡೆಯುವ ತಂಡಕ್ಕೆ ರೂ. ೧,೫೦,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ಪಡೆಯುವ ತಂಡಕ್ಕೆ ರೂ. ೭೫,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಪಂದ್ಯ ಪುರುಷೋತ್ತಮ, ಉತ್ತಮ ಆಟಗಾರ, ಉತ್ತಮ ಮುನ್ನಡೆ ಆಟಗಾರ, ಉತ್ತಮ ರಕ್ಷಣಾ ಆಟಗಾರ ಹಾಗೂ ಉತ್ತಮ ಗೋಲ್‌ಕೀಪರ್ ಬಹುಮಾನ ನೀಡಲಾಗುವುದು.

ಗೆಳೆಯರ ಬಳಗವು ೨೦೧೭ ರಲ್ಲಿ ಪ್ರಾರಂಭಗೊAಡಿದ್ದು, ೨೦೦ ಸದಸ್ಯರನ್ನು ಹೊಂದಿದೆ. ಕ್ರೀಡೆಯೊಂದಿಗೆ ಸಾಮಾಜಿಕ ಸೇವೆಯಲ್ಲೂ ಗುರುತಿಸಿಕೊಂಡಿದೆ ಎಂದು ಬಳಗದ ಕಾರ್ಯದರ್ಶಿ ಅಜ್ಜಳ್ಳಿ ನವೀನ್ ಹೇಳಿದರು.

ಪಂದ್ಯಾವಳಿ ಸಂದರ್ಭ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಗುವುದು. ವಿಶೇಷ ಚೇತನರಿಗೆ ಸೌಲಭ್ಯಗಳನ್ನು ವಿತರಿಸಲಾಗುವುದು.

ಇದೇ ಸಂದರ್ಭ ಪ್ರಗತಿಪರ ರೈತರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಖಜಾಂಚಿ ಗೌಡಳ್ಳಿ ಸುನಿಲ್, ಉಪಾಧ್ಯಕ್ಷ ಕೂಗೂರು ವಿಠಲ್ ಮೋಹನ್ ಉಪಸ್ಥಿತರಿದ್ದರು.