ಮಡಿಕೇರಿ, ಜ. ೨೫: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೬ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಸವಿನೆನಪಿಗಾಗಿ ಮಡಿಕೇರಿ ರಾಘವೇಂದ್ರ ದೇವಾಲಯದ ಬಳಿಯ ವಾರ್ಡ್ ನಂ. ೬ ಅನ್ನು "ನೇತಾಜಿ ಜಂಕ್ಷನ್" ಎಂದು ನಾಮಕರಣ ಮಾಡಿ ನಾಮಫಲಕವನ್ನು ಅನಾವರಣ ಗೊಳಿಸಲಾಯಿತು. ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದ ಮಡಿಕೇರಿ ನಗರಸಭಾ ಸದಸ್ಯ ಕೆ.ಎಸ್. ರಮೇಶ್, ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ‍್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರಾದ ಸುಭಾಷ್ ಚಂದ್ರ ಬೋಸ್ ಅವರು ಸ್ವಾಮಿ ವಿವೇಕಾನಂದರ ವಿಚಾರ ಧಾರೆಗಳಿಂದ ಪ್ರಭಾವಿತರಾಗಿ ಭಾರತ ಸ್ವಾತಂತ್ರö್ಯ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು. ಸುಭಾಷ್ ಚಂದ್ರ ಬೋಸ್ ಎಂಬ ಹೆಸರನ್ನು ನಾವು ಕೇಳಿದಾಗಲೆಲ್ಲಾ, ನಮ್ಮ ಮನಸ್ಸಿನಲ್ಲಿ ಬರುವ ಮೊದಲ ವಿಷಯವೆಂದರೆ ಅವರ ಜನಪ್ರಿಯ ಮಾತು “ತುಮ್ ಮುಜೆ ಖೂನ್ ದೋ ಮೈನ್ ತುಮ್ಹೆ ಆಜಾದಿ ದೂಂಗಾ” (ನೀವು ನನಗೆ ರಕ್ತಕೊಡಿ, ನಾನು ನಿಮಗೆ ಸ್ವಾತಂತ್ರ‍್ಯ ತಂದು ಕೊಡುತ್ತೇನೆ). ನೇತಾಜಿ ಎಂದೇ ಖ್ಯಾತರಾಗಿದ್ದ ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ‍್ಯ ಹೋರಾಟ ಗಾರ ಮತ್ತು ದೇಶಭಕ್ತರಾಗಿದ್ದರು. ಸ್ವತಂತ್ರ ಭಾರತದ ಕಲ್ಪನೆಗೆ ಬದ್ಧತೆಯಿಂದ ಅವರು ತೆಗೆದುಕೊಂಡ ಧೈರ್ಯಶಾಲಿ ನಿರ್ಧಾರಗಳು ಅವರನ್ನು ಖ್ಯಾತರನ್ನಾಗಿ ಮಾಡಿದೆ. ಅವರ ಆದರ್ಶಗಳು ಮತ್ತು ತ್ಯಾಗ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ ನೀಡುತ್ತದೆ ಎಂದರು.

ಅವರ ಸವಿನೆನಪಿಗಾಗಿ ಮಡಿಕೇರಿ ನಗರದ ವಾರ್ಡ್ ನಂ. ೬ ರ ಸ್ಥಳೀಯ ರಾಘವೇಂದ್ರ ದೇವಾಲಯದ ಬಳಿಯ ಜಂಕ್ಷನ್ ಅನ್ನು "ನೇತಾಜಿ ಜಂಕ್ಷನ್" ಎಂದು ನಾಮಕರಣ ಮಾಡಿ ನಾಮಫಲಕವನ್ನು ಅನಾವರಣ ಗೊಳಿಸಲಾಗಿದೆ ಎಂದು ಕೆ.ಎಸ್. ರಮೇಶ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯರಾದ ಪಿ.ಎಂ. ರವಿ, ಉದ್ಯಮಿ ಹರೀಶ್ ರೈ, ಜನನಿ ಮಹಿಳಾ ಮಂಡಳಿ ಇದರ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ನಿರ್ದೇಶಕರುಗಳು, ಸದಸ್ಯರು, ಶ್ರೀರಕ್ಷಾ ಪ್ರಗತಿ ಬಂಧು ಸದಸ್ಯರು, ಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳು ಹಾಜರಿದ್ದರು.