ಗೋಣಿಕೊಪ್ಪಲು, ನ. ೨೯: ಕೊಡಗಿನಲ್ಲಿ ಅಕ್ರಮ ಮರ ಸಾಗಾಣಿಕೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಮರ ದಂಧೆಯಲ್ಲಿ ಪರೋಕ್ಷವಾಗಿ ಸಹಕಾರ ನೀಡುತ್ತಿರುವ ಕೆಲವು ಅಧಿಕಾರಿಗಳನ್ನು ಜಿಲ್ಲೆಯಿಂದ ಹೊರ ಕಳುಹಿಸಬೇಕು. ತಪ್ಪಿದಲ್ಲಿ ರೈತ ಸಂಘವು ವಿವಿಧ ಸಂಘಟನೆಗಳೊAದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ. ಮರಗಳ್ಳರೊಂದಿಗೆ ಅರಣ್ಯ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳು ಶಾಮಿಲಾಗಿರುವ ಬಗ್ಗೆ ರೈತ ಸಂಘಕ್ಕೆ ದಾಖಲೆ ಲಭ್ಯವಾಗಿದೆ. ಅಗತ್ಯ ಸಂದರ್ಭ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹೇಳಿದರು.

ತಿತಿಮತಿಯ ಪ್ರವಾಸಿ ಮಂದಿರದಲ್ಲಿ

(ಮೊದಲ ಪುಟದಿಂದ) ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಯೋಜಿಸಿದ್ದ ರೈತರ, ಕಾರ್ಮಿಕರ ಹಾಗೂ ಆದಿವಾಸಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮನುಸೋಮಯ್ಯ ಜಿಲ್ಲೆಯಲ್ಲಿ ನಿರಂತರವಾಗಿ ಮರಗಳ ಹನನ ನಡೆಯುತ್ತಿದೆ. ಇದರ ಹಿಂದೆ ಕೆಲವು ಅರಣ್ಯ ಇಲಾಖೆಯ ಅಧಿಕಾರಿಗಳ ಪರೋಕ್ಷ ಬೆಂಬಲವಿರುವುದು ಕಂಡುಬAದಿದೆ. ಸರ್ಕಾರ ಕೆಲವು ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದರೂ ಮತ್ತೆ ಅದೇ ಸ್ಥಳಕ್ಕೆ ವರ್ಗಾವಣೆಯನ್ನು ರದ್ದುಗೊಳಿಸಿ ಆಗಮಿಸುತ್ತಿದ್ದಾರೆ. ಇದರ ಮೂಲ ಉದ್ದೇಶವೇನು.? ಹಿರಿಯ ಅಧಿಕಾರಿಗಳಿಗೆ ಈ ಮಾಹಿತಿ ಲಭ್ಯವಿಲ್ಲವೇ.? ಮರದಂಧೆಯಲ್ಲಿ ಹಾಗೂ ಇತರ ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಂಡ ಯಾವುದೇ ಅಧಿಕಾರಿಗಳನ್ನು ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಲು ರೈತ ಸಂಘ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ತಿತಿಮತಿ ಭಾಗದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಕೈಗೊಂಡಿದ್ದ ಹುಲಿ ಸಫಾರಿ ಪ್ರವಾಸೋದÀ್ಯಮವನ್ನು ಇಲಾಖೆಯು ಕೈ ಬಿಟ್ಟಿರುವುದು ಶ್ಲಾಘನೀಯ. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಪ್ರವಾಸೋದÀ್ಯಮಕ್ಕೆ ಅವಕಾಶ ನೀಡದೆ ರೈತರ,ಆದಿವಾಸಿಗಳ ರಕ್ಷಣೆಗೆ ಇಲಾಖೆ ಮುಂದಾಗಬೇಕು.ಅರಣ್ಯದಲ್ಲಿರುವ ಪ್ರಾಣಿಗಳು ಸ್ವಚ್ಛಂದವಾಗಿ ಇರಲು ಇಲಾಖೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಅರಣ್ಯದAಚಿನಿAದ ಪ್ರತಿನಿತ್ಯ ನಗರ ಪ್ರದೇಶಕ್ಕೆ ತೆರಳುವ ಆದಿವಾಸಿಗಳ ಹಾಗೂ ಇತರ ಜನಾಂಗದ ವಿದ್ಯಾರ್ಥಿಗಳಿಗೆ ಹಳ್ಳಿಗಾಡಿನಿಂದ ಶಾಲೆಗೆ ತೆರಳಲು ವಾಹನದ ಸೌಕರ್ಯವನ್ನು ಇಲಾಖೆ ವತಿಯಿಂದ ತಕ್ಷಣ ಕಲ್ಪಿಸಬೇಕು, ಅರಣ್ಯದಲ್ಲಿ ಯಾವುದೇ ಹೊಸ ಯೋಜನೆಗಳನ್ನು ಕೈಗೊಳ್ಳುವ ಮುನ್ನ ಸ್ಥಳೀಯ ರೈತ ಸಂಘದ, ಗ್ರಾಮ ಪಂಚಾಯಿತಿ ಗಮನಕ್ಕೆ ತರುವ ಮೂಲಕ ಸಾಧಕ ಬಾಧಕಗಳ ಬಗ್ಗೆ ಸುಧೀರ್ಘ ಚರ್ಚೆ ಕೈಗೊಂಡ ನಂತರವೇ ಇಲಾಖೆಯು ಅಂತಹ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಬೇಕು ಎಂದರು.

ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಮಾತನಾಡಿ ಅರಣ್ಯ ಇಲಾಖೆಯು ಅರಣ್ಯದ ಸಂರಕ್ಷಣೆಯೊAದಿಗೆ ಗುಳ್ಳೆನರಿಗಳ ಹಾಗೂ ಕಾಡುನಾಯಿಗಳ ಸಂರಕ್ಷಣೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಈ ಎರಡು ವನ್ಯ ಪ್ರಾಣಿಗಳು ಇದೀಗ ವಿನಾಶದ ಅಂಚಿಗೆ ತಲುಪಿದ್ದು, ಇವುಗಳ ರಕ್ಷಣೆಗೆ ಇಲಾಖೆಯು ಮುಂದಿನ ದಿನದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ರೈತರ ಸಭೆಯಲ್ಲಿ ಮಾಹಿತಿ ನೀಡುವಂತೆ ಕೋರಿದರು.

ಸಭೆಯಲ್ಲಿ ಮಾತನಾಡಿದ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಆದಿವಾಸಿಗಳ ಮುಖಂಡ ಪಿ.ಸಿ. ರಾಮು, ಅರಣ್ಯ ಇಲಾಖೆಯು ಆದಿವಾಸಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ರೈಲ್ವೆ ಬ್ಯಾರಿಕೇಡ್ ಅಳವಡಿಸುವ ವೇಳೆ ಗಿರಿಜನರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು ಕಳೆದೆರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರೈಲ್ವೆ ಬ್ಯಾರಿಕೇಡ್ ಕಾಮಗಾರಿಯನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು ಎಂದು ಹಿರಿಯ ಅಧಿಕಾರಿಗಳ ಗಮನ ಸೆಳೆದರು.

ತಿತಿಮತಿ ಭಾಗದ ರೈತ ಸಂಘದ ಮುಖಂಡ ಚೆಪ್ಪುಡಿರ ಕಾರ್ಯಪ್ಪ ಮಾತನಾಡಿ ತಿತಿಮತಿ ಸುತ್ತ ಮುತ್ತಲಿನಲ್ಲಿ ನಿರಂತರ ಕಾಡಾನೆಗಳ ಉಪಟಳವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಇಲಾಖೆಯು ಕೂಡಲೇ ಕಾರ್ಯ ಪ್ರವೃತ್ತವಾಗಬೇಕು. ಆದಿವಾಸಿಗಳ ಸಮಸ್ಯೆಗಳನ್ನು ಬಗೆ ಹರಿಸಲು ಇಲಾಖೆಯು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಸಭೆಯಲ್ಲಿ ಭಾಗವಹಿಸಿದ ಅನೇಕ ರೈತ ಮುಖಂಡರು ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಸಂದರ್ಭ ನಡೆದಿರುವ ಕಳಪೆ ಕಾಮಗಾರಿಯ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ರೈತ ಮುಖಂಡ ಪುಚ್ಚಿಮಾಡ ಅಶೋಕ್ ಮಾತನಾಡಿ, ಅರಣ್ಯದಲ್ಲಿರುವ ಆದಿವಾಸಿಗಳಿಂದ ಕಾಡು ರಕ್ಷಣೆ ಆಗಿದೆ. ಅವರಿಗೆ ಇಲಾಖೆಯ ಕೆಲವು ಅಧಿಕಾರಿಗಳು ತೊಂದರೆ ನೀಡುತ್ತಿರುವುದು ಸರಿಯಲ್ಲ ಈ ಕಾಡಿನ ರಕ್ಷಣೆ ಆದಿವಾಸಿಗಳಿಂದ ಹೊರತು ಅರಣ್ಯ ಇಲಾಖೆಯಿಂದಲ್ಲ. ಬ್ಯಾರಿಕೇಡ್ ವಿಚಾರದಲ್ಲಿ ಆದಿವಾಸಿಗಳಿಗೆ ತೊಂದರೆ ಆಗಿರುವುದು ಎಲ್ಲರಿಗೂ ಅರಿವಿದೆ. ಇವರ ರಕ್ಷಣೆಯ ಉದ್ದೇಶದಿಂದ ಕಾಡಾನೆಯು ಹಾಡಿಗಳಿಗೆ ನುಸಳದಂತೆ ಕ್ರಮ ವಹಿಸಲು ಅವಶ್ಯಕತೆ ಇರುವ ಕಡೆ ಬ್ಯಾರಿಕೇಡ್ ಅಳವಡಿಸಬೇಕೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಸಿಸಿಎಫ್ ಬಿಎನ್‌ಎನ್ ಮೂರ್ತಿ, ರೈತರು ಕಾರ್ಮಿಕರು, ಆದಿವಾಸಿಗಳು ಕೆಲ ದಿನಗಳ ಹಿಂದೆ ಮಡಿಕೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು, ಈ ವೇಳೆ ತಿತಿಮತಿ ಭಾಗದಲ್ಲಿ ಸಮಸ್ಯೆ ಬಗ್ಗೆ ಸಭೆ ಕರೆಯುವುದಾಗಿ ಭರವಸೆ ನೀಡಿದ್ದೆ. ನೀಡಿದ ಭರವಸೆಯಂತೆ ಸಭೆಯನ್ನು ಕರೆಯಲಾಗಿದೆ. ರೈತರ ಕಾರ್ಮಿಕರ ಹಾಗೂ ಆದಿವಾಸಿಗಳ ಹಿತ ಕಾಪಾಡುವುದು ಅರಣ್ಯ ಇಲಾಖೆಯ ಮೂಲ ಉದ್ದೇಶವಾಗಿದೆ. ಯಾವುದೇ ನ್ಯೂನತೆಗಳಿದ್ದರೂ ಅದನ್ನು ಸಭೆಯಲ್ಲಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ.

ಬಹುಮುಖ್ಯವಾಗಿ ತಿತಿಮತಿ ಭಾಗದಲ್ಲಿ ಅಳವಡಿಸುತ್ತಿರುವ ರೈಲ್ವೆ ಬ್ಯಾರಿಕೇಡ್ ವಿಚಾರದಲ್ಲಿ ಆದಿವಾಸಿಗಳಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಖುದ್ದಾಗಿ ಸ್ಥಳ ಪರಿಶೀಲಿಸುತ್ತೇನೆ. ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇನೆ. ಹುಲಿ ಹಾವಳಿ ಹಾಗೂ ಆನೆ ಹಾವಳಿಯನ್ನು ತಪ್ಪಿಸುವುದೇ ಇಲಾಖೆಯ ಮೂಲ ಉದ್ದೇಶ. ಜಾನುವಾರುಗಳ ಸಾಕಾಣೆಯನ್ನು ಮಾಡುತ್ತಿರುವ ರೈತರಿಗೆ ಕೊಟ್ಟಿಗೆ ನಿರ್ಮಿಸಲು ಇಲಾಖೆ ವತಿಯಿಂದ ಸಹಾಯಧನ ವಿತರಿಸಲಾಗುವುದು ಇದರ ಉಪಯೋಗವನ್ನು ರೈತರು ಹೊಂದಿಕೊಳ್ಳಬೇಕು. ಆನೆ ಮಾನವ ಸಂಘರ್ಷ ತಡೆಯಲು ಇಲಾಖೆಯು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಮಾಹಿತಿ ಒದಗಿಸಿದರು.

ಸಭೆಯಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಹರ್ಷಕುಮಾರ್ ಚಿಕ್ಕ ನರಗುಂದ, ವೀರಾಜಪೇಟೆ ಡಿಸಿಎಫ್ ಶಿವರಾಮ್ ಬಾಬು, ಹುಣಸೂರು ಎಸಿಎಫ್ ದಯಾನಂದ್, ವೀರಾಜಪೇಟೆ ಎಸಿಎಫ್ ನೆಹರು, ನಾಗರಹೊಳೆ ಎಸಿಎಫ್ ಗೋಪಾಲ್, ತಿತಿಮತಿ ಎಸಿಎಫ್ ಹೆಚ್. ಸೀಮಾ, ಮಡಿಕೇರಿ ಎಸಿಎಫ್ ಶ್ರೀನಿವಾಸ್ ನಾಯಕ್, ಆರ್‌ಎಫ್‌ಒಗಳಾದ ದಿಲೀಪ್ ಕುಮಾರ್, ಗಿರೀಶ್, ಅಶೋಕ್ ಪಿ. ಹುನಗುಂದ್, ಮಹಮ್ಮದ್ ಜಸೀನ್, ಶಂಕರ್, ರಂಗಸ್ವಾಮಿ ಸೇರಿದಂತೆ ಇಲಾಖಾ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೇಮಾಡ ಮಂಜುನಾಥ್, ಹಿರಿಯ ವಕೀಲ ಹೇಮಚಂದ್ರ ಸೇರಿದಂತೆ ರೈತ ಮುಖಂಡರಾದ ಮಹೇಶ್, ಪುಚ್ಚಿಮಾಡ ರಾಯ್ ಮಾದಪ್ಪ, ಆದಿವಾಸಿ ಮುಖಂಡರಾದ ಸಿದ್ದಪ್ಪ, ಚುಬ್ರು, ರಾಮು, ಮಲ್ಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

-ಹೆಚ್.ಕೆ. ಜಗದೀಶ್