ಸೋಮವಾರಪೇಟೆ, ನ. ೨೮: ಜಿಲ್ಲಾ ಪಂಚಾಯತ್ ಇಂಜಿನಿಯರಿAಗ್ ವಿಭಾಗ, ಲೋಕೋಪಯೋಗಿ ಇಲಾಖೆ ಹಾಗೂ ಎನ್‌ಡಿಆರ್‌ಎಫ್ ಯೋಜನೆಯಡಿ ಮಡಿಕೇರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೫೮ ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮಳೆ ನಿಂತಿದ್ದು, ಶೀಘ್ರವಾಗಿ ಕೆಲಸ ಪೂರ್ಣಗೊಳಿ ಸುವಂತೆ ಅಭಿಯಂತರರುಗಳಿಗೆ ಸೂಚನೆ ನೀಡಲಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಇಲ್ಲಿನ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎನ್‌ಡಿಆರ್‌ಎಫ್ ಮೂಲಕ ಕೈಗೊಳ್ಳಲಾಗುತ್ತಿರುವ ರಸ್ತೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಶೇಷ ಪ್ಯಾಕೇಜ್‌ನಡಿ ಕ್ಷೇತ್ರಕ್ಕೆ ೫೦ ಕೋಟಿ ಅನುದಾನ ಬಿಡುಗಡೆಯಾಗಿತ್ತು. ಇದರಲ್ಲಿ ೨೦ ಕೋಟಿಯನ್ನು ಜಿಲ್ಲಾ ಪಂಚಾಯಿತಿ ಹಾಗೂ ಎನ್‌ಡಿಆರ್‌ಎಫ್‌ನಡಿ ೮ ಕೋಟಿ, ಲೋಕೋಪಯೋಗಿ ಇಲಾಖೆಗೆ ೩೦ ಕೋಟಿ ಹಂಚಲಾಗಿದೆ. ಮಳೆಯಿಂದಾಗಿ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ ಎಂದರು.

ಒಟ್ಟು ೫೮ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾ ಗಿದೆ. ಶೀಘ್ರವಾಗಿ ರಸ್ತೆ ಕಾಮಗಾರಿ ಕೈಗೊಂಡು ಪೂರ್ಣಗೊಳಿಸುವಂತೆ ಅಭಿಯಂತರರಿಗೆ ಸೂಚಿಸಲಾಗಿದೆ ಎಂದು ರಂಜನ್ ತಿಳಿಸಿದರು.

ಈವರೆಗೆ ಮಳೆಯ ವಾತಾವರಣವಿದ್ದು, ಇದೀಗ ಮಳೆ ನಿಂತಿದೆ. ಈ ಹಿನ್ನೆಲೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಡಾಂಬರು ರಸ್ತೆ, ಕಾಂಕ್ರಿಟ್ ರಸ್ತೆ, ರಸ್ತೆಯ ಗುಂಡಿ ಮುಚ್ಚುವುದು, ಚರಂಡಿ, ಹೊಸ ರಸ್ತೆಗಳ ನಿರ್ಮಾಣವಾಗಲಿದೆ ಎಂದರು.

ರಸ್ತೆಗೆ ಸಂಬAಧಿಸಿದAತೆ ಲೋಕೋಪಯೋಗಿ ಇಲಾಖೆ ಮತ್ತು ಜಿ.ಪಂ. ಇಂಜಿನಿಯರಿAಗ್ ವಿಭಾಗದ ಅಧಿಕಾರಿಗಳೊಂದಿಗೆ

(ಮೊದಲ ಪುಟದಿಂದ) ಮಾಹಿತಿ ಪಡೆಯಲಾಗಿದ್ದು, ಸದ್ಯಕ್ಕೆ ಡಾಂಬರು ಕೆಲಸ ಮಾಡುವ ೮ ಬ್ಯಾಚ್ ಇದೆ. ಹೆಚ್ಚುವರಿ ೪ ಬ್ಯಾಚ್‌ಗಳನ್ನು ಕರೆಸಲಾಗುತ್ತಿದೆ. ಇದರೊಂದಿಗೆ ಕಾಂಕ್ರಿಟ್ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.

ಲೋಕೋಪಯೋಗಿ ಇಲಾಖೆಗೆ ೩೦ ಕೋಟಿ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕೊಡ್ಲಿಪೇಟೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ ಒಂದು ತಿಂಗಳೊಳಗೆ ಎಲ್ಲಾ ರಸ್ತೆಗಳನ್ನು ದುರಸ್ತಿಪಡಿಸಲಾಗುವುದು. ಸರ್ವ ಋತು ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ರಂಜನ್ ಹೇಳಿದರು.

ಅಕಾಲಿಕ ಮತ್ತು ಅತೀ ಹೆಚ್ಚು ಮಳೆಯಿಂದಾಗಿ ಕೊಡಗಿನ ರಸ್ತೆಗಳು ದುಸ್ಥಿತಿಗೆ ತಲುಪುತ್ತಿದ್ದು, ಉಳಿಕೆ ರಸ್ತೆಗಳ ಅಭಿವೃದ್ಧಿಗಾಗಿ ಚಿಂತನೆ ಹರಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊAದಿಗೆ ಮಾತುಕತೆ ನಡೆಸಿದ್ದು, ೩೦ಕೋಟಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಆ ಅನುದಾನ ಬಂದ ನಂತರ ಉಳಿಕೆ ರಸ್ತೆಗಳನ್ನು ದುರಸ್ತಿ ಪಡಿಸಲಾಗುವುದು. ಒಟ್ಟಾರೆ ಮುಂದಿನ ಮಾರ್ಚ್ ಒಳಗೆ ಜಿಲ್ಲೆಯ ಬಹುತೇಕ ರಸ್ತೆಗಳನ್ನು ಸುಸಜ್ಜಿತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆಯಿತ್ತರು.

ಮಸಗೋಡು-ಕಣಿವೆ ರಸ್ತೆ ಅಭಿವೃದ್ಧಿಗೆ ಸಂಬAಧಿಸಿದAತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಈಗಾಗಲೇ ಲೋಕೋಪಯೋಗಿ ಇಲಾಖಾ ಸಚಿವರೊಂದಿಗೆ ಚರ್ಚಿಸಲಾಗಿದ್ದು, ೧೫ ಕೋಟಿ ವೆಚ್ಚದ ಕ್ರಿಯಾಯೋಜನೆ ನೀಡಲಾಗಿದೆ. ಹಣಕಾಸು ಇಲಾಖೆಯಿಂದ ಅನುಮೋದನೆ ಬಂದ ತಕ್ಷಣ ಕಾಮಗಾರಿ ಆರಂಭವಾಗಲಿದೆ. ಸದ್ಯಕ್ಕೆ ರೂ. ೫ ಕೋಟಿ ಅನುದಾನ ಒದಗಿಸಿ ಕೆಲಸ ಆರಂಭಿಸಲಾಗುವುದು ಎಂದರು.

ಅಕಾಲಿಕ ಮಳೆಯಿಂದಾಗಿ ಕೊಡಗಿನಲ್ಲಿ ಕಾಫಿ, ಕರಿಮೆಣಸು ಸೇರಿದಂತೆ ಇತರ ಕೃಷಿ ಫಸಲು ನಷ್ಟವಾಗಿದೆ. ಕಳೆದ ಬಾರಿಯೂ ನಷ್ಟ ಸಂಭವಿಸಿದ್ದು, ೧೦೬ ಕೋಟಿ ಪರಿಹಾರ ವಿತರಿಸಲಾಗಿದೆ. ಪ್ರಸಕ್ತ ವರ್ಷ ೧೧೦ ಕೋಟಿ ನಷ್ಟದ ಬಗ್ಗೆ ವರದಿ ತಯಾರಿಸಲಾಗಿದ್ದು, ಶೀಘ್ರದಲ್ಲೇ ರೈತರ ಖಾತೆಗಳಿಗೆ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದರು.

ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಜಮೆಯಾಗುತ್ತಿದೆ. ಯಾವುದೇ ಕಮಿಷನ್‌ಗೆ ಅವಕಾಶ ನೀಡುತ್ತಿಲ್ಲ. ಕಾಂಗ್ರೆಸ್ ಪಕ್ಷವು ಶೇ.೪೦ ಕಮಿಷನ್ ಸರ್ಕಾರ ಎಂದು ಆರೋಪಿಸುತ್ತಿದೆ. ಆದರೆ ಅಸಲಿಗೆ ಕಾಂಗ್ರೆಸ್ ಸರ್ಕಾರವೇ ೮೦ ಪರ್ಸೆಂಟ್ ಸರ್ಕಾರವಾಗಿತ್ತು. ಇದನ್ನು ಬಿಜೆಪಿಯವರು ಹೇಳುತ್ತಿಲ್ಲ. ಈ ಹಿಂದೆ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಬೆಂಗಳೂರಿನಲ್ಲಿ ಮಾತನಾಡುತ್ತಾ ‘ದೆಹಲಿಯಿಂದ ೧೦೦ ರೂ ಬಿಡುಗಡೆ ಮಾಡಿದರೆ ರೈತರಿಗೆ ೨೦ ರೂ ಮಾತ್ರ ಸಿಗುತ್ತದೆ’ ಎಂದಿದ್ದರು. ಆದರೆ ಇಂದಿನ ಮೋದಿ ಸರ್ಕಾರ ನೇರವಾಗಿ ರೈತರ ಖಾತೆಗೆ ಹಣ ಒದಗಿಸುತ್ತಿದೆ. ಕಮಿಷನ್ ಲೆಸ್ ಸರ್ಕಾರವಾಗಿ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಶಾಸಕ ರಂಜನ್ ಹೇಳಿದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ.ಪಿ. ವೀರೇಂದ್ರ, ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ ಸೇರಿದಂತೆ ಇತರರು ಹಾಜರಿದ್ದರು.