ಕುಶಾಲನಗರ, ನ. ೨೩: ಕರ್ನಾಟಕ ಕಾವಲುಪಡೆ ಆಶ್ರಯದಲ್ಲಿ ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಸಂಘಟನೆಯ ೧೨ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷ ಎಂ.ಮೋಹನ್‌ಕುಮಾರ್ ಗೌಡ ಅವರು ಕನ್ನಡಾಂಬೆ, ಪುನೀತ್‌ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸಮಾಜದ ವಿವಿಧ ಕ್ಷೇತ್ರಗಳು ಹಲವು ರೀತಿಯಲ್ಲಿ ಕಳಂಕಕ್ಕೆ ಒಳಗಾದರೂ ಕರ್ನಾಟಕ ಕಾವಲುಪಡೆ ಭ್ರಷ್ಟಾಚಾರ ರಹಿತ ಹಲವು ಜನಪರ, ಸಮಾಜ ಮುಖಿ ಹೋರಾಟಗಳನ್ನು ರೂಪಿ ಸುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು. ಕಾವಲುಪಡೆ ರಾಜ್ಯ ಕಾರ್ಯದರ್ಶಿ ಕರಿಗೌಡ ಪ್ರಾಸ್ತಾವಿಕ ನುಡಿಗಳಾಡಿ, ಕಾವಲುಪಡೆಯ ಉಗಮ ಹಾಗೂ ಹೋರಾಟಗಳ ಬಗ್ಗೆ ಮಾಹಿತಿ ನೀಡಿದರು.

ಸೋಮವಾರಪೇಟೆ ತಾಲೂಕು ಅಬಕಾರಿ ಇಲಾಖೆ ಉಪ ಅಧೀಕ್ಷಕಿ ಆರ್.ಎಂ. ಚೈತ್ರ ಅವರು ಮಾತನಾಡಿ, ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು.

ಕೊಡಗು ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸಲು ಕನ್ನಡ ಪರ ಸಂಘಟನೆಗಳ ಮೂಲಕ ಹೋರಾಟ ಹಮ್ಮಿಕೊಳ್ಳುವ, ಪರದಾಡುವ ಪರಿಸ್ಥಿತಿ ನಿರ್ಮಾಣ ಗೊಂಡಿರುವುದು ವಿಪರ್ಯಾಸ ಎಂದರು.

ಕುಶಾಲನಗರ ಪ.ಪಂ. ಅಧ್ಯಕ್ಷ ಬಿ. ಜೈವರ್ಧನ್ ಮಾತನಾಡಿ, ಕನ್ನಡ ಉಳಿಸಿ ಬೆಳೆಸುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಕನ್ನಡಿಗರು ತಮ್ಮ ಜವಾಬ್ದಾರಿ ಮೆರೆಯ ಬೇಕಿದೆ ಎಂದು ಕರೆ ನೀಡಿದರು. ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್, ಪ್ರಾಂಶುಪಾಲ ರಾಜಣ್ಣ, ಕಾವಲುಪಡೆ ರಾಜ್ಯ ಉಪಾಧ್ಯಕ್ಷ ರವಿಗೌಡ, ಡಿವೈಎಸ್ಪಿ ಗಂಗಾಧರಪ್ಪ, ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜು, ಮಕ್ಕಳ ತಜ್ಞ ಮಡಿಕೇರಿಯ ಡಾ. ಮೋಜಿಮುಲ್ ಸಿದ್ದಿಕ್, ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರಾಣಿ, ಬಾರವಿ ಕನ್ನಡ ಸಂಘದ ಬಬೀಂದ್ರ ಪ್ರಸಾದ್ ಸೇರಿದಂತೆ ಸಂಘಟನೆಯ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.